ದುನಿಯಾ ಸೂರಿ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಂಬೀನೇಷನ್ ನ ಹೊಸ ಸಿನೆಮಾ “ದೊಡ್ಮನೆ ಹುಡ್ಗ” ಶೀಘ್ರದಲ್ಲಿ ಚಿತ್ರಮಂದಿರಗಳಿಗೆ ಲಗ್ಗೆ ಇಡಲು ತಯಾರಾಗಿದೆ. ಜಾಕಿ, ಅಣ್ಣಾಬಾಂಡ್ ಚಿತ್ರಗಳ ನಂತರ ಈ ಜೋಡಿಯ ಬಹುನಿರೀಕ್ಷೆಯ ಚಿತ್ರ “ದೊಡ್ಮನೆ ಹುಡ್ಗ” ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದೆ. ಪುನೀತ್ ಗೆ ಜೋಡಿಯಾಗಿ ರಾಧಿಕಾ ಪಂಡಿತ್ ಅಭಿನಯಿಸುತ್ತಿರುವ ‘ದೊಡ್ಮನೆ ಹುಡ್ಗ’ ಸಂಪೂರ್ಣ ಸ್ಥಳೀಯ ಭಾಷೆಯ ಮೇಲೆ ನಿರ್ಮಾಣವಾಗುತ್ತಿರುವ ಚಿತ್ರ. ಕೋಲಾರ, ಮಂಡ್ಯ ಹಾಗೂ ಹುಬ್ಬಳ್ಳಿ ಭಾಷೆಯನ್ನು ಚಿತ್ರದಲ್ಲಿ ಬಳಸಿಕೊಳ್ಳುವ ಮೂಲಕ ಕರ್ನಾಟಕದ ಭಾಷಾ ವೈವಿಧ್ಯತೆಯನ್ನು ಎತ್ತಿಹಿಡಿದಿದ್ದಾರೆ ನಿರ್ದೇಶಕ ಸೂರಿ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ರೆಬೆಲ್ ಸ್ಟಾರ್ ಅಂಬರೀಷ್, ಸುಮಲತ ಜೋಡಿ. ಚಿತ್ರದಲ್ಲಿ ಪುನೀತ್ ತಂದೆಯಾಗಿ ಅಭಿನಯಿಸುತ್ತಿರುವ ರೆಬೆಲ್ ಸ್ಟಾರ್ ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್. ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ರೆಬೆಲ್ ಸ್ಟಾರ್, ಅಭಿನಯಿಸಿರುವ ಚಿತ್ರಗಳಿಗೆ ಒಂದು ಹೊಸ ಮೆರುಗನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚಿತ್ರದಲ್ಲಿ ರಾಧಿಕಾ ಪಂಡಿತ್ ಕೋಲಾರ ಹುಡುಗಿಯಾದರೆ, ಪವರ್ ಸ್ಟಾರ್ ಹುಬ್ಬಳ್ಳಿ ಹುಡ್ಗನಾಗಿ ಮಿಂಚುತ್ತಿದ್ದಾರೆ. ಅಲ್ಲದೆ ಚಿತ್ರದಲ್ಲಿ ಕರ್ನಾಟಕದ ಇತರೆ ಭಾಗದ ಭಾಷೆಗಳನ್ನು ಬಳಸಿಕೊಳ್ಳುವ ಯತ್ನ ಮಾಡಿದ್ದೇವೆ ಅನ್ನುತ್ತಾರೆ ಸೂರಿ.
ಇನ್ನುಳಿದಂತೆ ಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್, ಶ್ರೀನಿವಾಸ ಮೂರ್ತಿ, ಡಾರ್ಲಿಂಗ್ ಕೃಷ್ಣ, ರವಿಶಂಕರ್, ಚಿಕ್ಕಣ್ಣ ಮತ್ತು ರಂಗಾಯಣ ರಘು ಅಭಿನಯಿಸಿದ್ದಾರೆ. ಜಯಮ್ಮನ ಮಗ ಖ್ಯಾತಿಯ ವಿಕಾಸ್ ದೊಡ್ಮನೆ ಹುಡ್ಗನಿಗೆ ಕಥೆ ಬರೆದಿದ್ದು, ಇನ್ನುಳಿದಂತೆ ವಿ.ಹರಿಕೃಷ್ಣ ಸಂಗೀತ, ಯೋಗರಾಜ್ ಭಟ್ ಸಾಹಿತ್ಯ, ಸತ್ಯಹೆಗಡೆ ಛಾಯಾಗ್ರಹಣ, ಶಶಿಧರ್ ಅಡಪ ಕಲೆ ಮತ್ತು ದೀಪು ಸಂಕಲನ ಚಿತ್ರಕ್ಕಿದೆ. ಅಜಯ್ ಪಿಕ್ಚರ್ಸ್ ಮೂಲಕ ಎಂ.ಗೋವಿಂದು ‘ದೊಡ್ಮನೆ ಹುಡ್ಗ’ ನಿರ್ಮಿಸುತ್ತಿದ್ದಾರೆ.