ಕೋಸ್ಟಲ್ ವುಡ್ ನಲ್ಲಿ ಭರ್ಜರಿಯಾಗಿ ಜಯಭೇರಿ ಬಾರಿಸಿದ ಚಾಲಿಪೋಲಿಲು ಚಿತ್ರನಿರ್ಮಾಪಕರಿಂದ ಮತ್ತೊಂದು ಮಾಸ್ಟರ್ ಪೀಸ್ ಮಂಗಳೂರನ್ನು ರಂಜಿಸಲು ಸಿದ್ಧವಾಗಿದೆ.
ವರುಷಗಳಿಂದ ಬಿಡದೇ ಕಾಡಿದ, ಮತ್ತೇ ಮತ್ತೇ ಕಾಡುತ್ತಿರುವ ‘ಚಾಲಿಪೋಲಿಲು’ ಹವಾ ಇನ್ನೂ ಹಸಿಯಾಗಿರುವಾಗಲೇ ಪ್ರಕಾಶ್ ಪಾಂಡೇಶ್ವರ್ ಅವರು ‘ದಬಕ್ ದಬಾ…ಐಸಾ’ ಅನ್ನುತ್ತಿದ್ದಾರೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ನಿರ್ದೇಶಕನ ಮುಂಡಾಸನ್ನು ಪ್ರಕಾಶ್ ಪಾಂಡೇಶ್ವರ್ ಅವರು ಧರಿಸಿದ್ದಾರೆ. ಚಾಲಿಪೋಲಿಲುವಿನಲ್ಲಿ ಮನೋಜ್ಞ ಅಭಿನಯ ನೀಡಿರುವ ದೇವದಾಸ್ ಕಾಪಿಕಾಡ್, ನವೀನ್.ಡಿ.ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್ ಅವರ ಸಮಾಗಮ ಇಲ್ಲೂ ಮುಂದುವರಿದಿದ್ದು ಪ್ರೇಕ್ಷಕರಿಗೆ ಹಾಸ್ಯದ ಜಡಿಮಳೆಯನ್ನು ಸುರಿಸಲು ತಯಾರಾಗಿದ್ದಾರೆ.
ಸಿನಿಪ್ರೇಮಿಯಾಗಿರುವ, ಸೃಜನಶೀಲ ನಿರ್ಮಾಪಕ ಕಂ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಅವರು ಕನ್ನಡದಲ್ಲಿ ಇತ್ತೀಚೆಗೆ ಬಂದ ಹೊಸಬರ ಚಿತ್ರ ‘ನಾನು ಅವನಲ್ಲ ಅವಳು’ ವನ್ನು ಪ್ರದರ್ಶಿಸಲು ಯಾರೂ ಮುಂದೆ ಬರದಿದ್ದಾಗ ಸ್ವತಃ ತಾವೇ ತಮ್ಮ ಪ್ರತಿಷ್ಠಿತ ಜಯಕಿರಣ ಫಿಲ್ಮ್ಸ್ ಬ್ಯಾನರ್ ಮೂಲಕ ಮಂಗಳೂರಿನಲ್ಲಿ ಪ್ರದರ್ಶಿಸಿ ತಾನು ಸದಾ ಹೊಸತನಕ್ಕೆ ತುಡಿಯುವವನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಾಗಾಗೀ ಈ ಬಾರಿ ಸಾಲು ಸಾಲು ಕಳಪೆ ಚಿತ್ರಗಳಿಂದ ಬೇಸತ್ತ ತುಳು ಪ್ರೇಕ್ಷಕನಿಗೆ ಪ್ರಕಾಶ್ ಅವರ ಚೊಚ್ಚಲ ನಿರ್ದೇಶನದ ‘ದಬಕ್ ದಬಾ…ಐಸಾ’ ದ ಮೂಲಕ ಹೊಸತನದ ಮನರಂಜನೆಯ ಟಾನಿಕ್ ಸಿಗುವುದರಲ್ಲಿ ಸಂದೇಹವಿಲ್ಲ.
ಚಿತ್ರದಲ್ಲಿ ಬಸ್ಸಿಗೂ ಒಂದು ಪ್ರಾಮುಖ್ಯತೆಯಿದೆ. ಬಸ್ಸಿನಲ್ಲಿ ದುಡಿಯುವ ನಾಲ್ಕು ಪಾತ್ರಧಾರಿಗಳ ಜೀವನದ ಸುತ್ತ ಚಿತ್ರದ ಕಥೆ ಸಾಗುತ್ತದೆ. ವಿಶೇಷವಾಗಿ ಮಕ್ಕಳನ್ನು ಸೆಳೆಯುವಂತಹ ಅಂಶಗಳು ಚಿತ್ರದಲ್ಲಿದ್ದು, ಜೊತೆಗೆ ಎಲ್ಲಾ ವರ್ಗದ ಜನರಿಗೂ ಭರಪೂರ ಮನರಂಜನೆಯನ್ನು ನೀಡುವ ಉದ್ದೇಶದಿಂದ ‘ದಬಕ್ ದಬಾ…ಐಸಾ’ ನಿರ್ಮಿಸಿದ್ದೇನೆ ಎನ್ನುತ್ತಾರೆ ಪ್ರಕಾಶ್ ಪಾಂಡೇಶ್ವರ್.
60 ಲಕ್ಷ ಬಜೆಟ್ಟಲ್ಲಿ ತಯಾರಾದ ‘ದಬಕ್ ದಬಾ…ಐಸಾ’ ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡು ಬಿಡುಗಡೆಗೆ ಸಿದ್ಧವಾಗುತ್ತಿದೆ. ಚಿತ್ರದ ತಾರಾಬಳಗದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಸುಂದರ್ ರೈ ಮಂದಾರ ಮತ್ತು ಶೀತಲ್ ಅಭಿನಯಿಸಿದ್ದಾರೆ. ಉತ್ಪಲ್.ವಿ.ನಾಯನಾರ್ ಛಾಯಾಗ್ರಹಣ, ರಾಜೇಶ್.ಎಂ ಸಂಗೀತ, ಶಶಿರಾಜ್ ಕಾವೂರು ಸಂಭಾಷಣೆ,ತಮ್ಮಲಕ್ಷ್ಮಣ ಕಲೆ, ಜಗನ್ನಾಥ ಶೆಟ್ಟಿ ಬಾಳ ನಿರ್ಮಾಣ-ನಿರ್ವಹಣೆ, ರಾಮ್ ದಾಸ್ ಸಸಿಹಿತ್ಲು, ಕಿಶೋರ್ ಮೂಡಬಿದ್ರೆ, ಶಶಿರಾಜ್ ಕಾವುರು ಸಹ ನಿರ್ದೇಶನವಿದ್ದರೆ, ಹಾಡಿನ ಸಾಹಿತ್ಯವನ್ನು ದೇವದಾಸ್ ಕಾಪಿಕಾಡ್, ಕದ್ರಿ ನವನೀತ ಶೆಟ್ಟಿ, ವಿರೇಂದ್ರ ಶೆಟ್ಟಿ ಕಾವೂರು ಮತ್ತು ಶಶಿರಾಜ್ ಕಾವೂರು ಒದಗಿಸಿದ್ದಾರೆ.