ಸಿದ್ಲಿಂದು ಚಿತ್ರದಲ್ಲಿ ‘ಕಡ್ಲೆ ಬೀಜ’ ತಿನಿಸಿದ ವಿಜಯಪ್ರಸಾದ್ ಅವರು ಈ ಬಾರಿ ಮಂಗಳೂರಿನ ಫೇವರಿಟ್ ‘ನೀರ್ ದೋಸೆ’ಯನ್ನು ಕನ್ನಡಿಗರೆಲ್ಲರಿಗೂ ತಿನಿಸಲಿದ್ದಾರೆ.
ಮೌನ, ತಾಳ್ಮೆ, ಸಹನೆಗಳನ್ನು ರುಬ್ಬಿ ಸಿದ್ಧಪಡಿಸಿರುವ ಹಿಟ್ಟನ್ನು ಕೆಲವೊಂದು ಸಮಸ್ಯೆಗಳಿಂದ ತಡವಾಗಿ ಇತ್ತೀಚೆಗೆ ದೋಸೆ ಮಾಡಲು ತೊಡಗಿದ್ದಾರೆ ವಿಜಯ್ ಪ್ರಸಾದ್. ನವರಸನಾಯಕ ಜಗ್ಗೇಶ್ ಮತ್ತು ಅಭಿನಯ ಚತುರೆ ಹರಿಪ್ರಿಯಾ ಪಾತ್ರವರ್ಗದಲ್ಲಿರುವ ‘ನೀರ್ ದೋಸೆ’ ಕವುಚಿ ಬಿದ್ದ ಸಂದರ್ಭದಲ್ಲಿ ಮಂಗಳೂರಿನ ಉತ್ಸಾಹಿ ತರುಣ, ಸಿನಿಪ್ರೇಮಿ, ಕಿರಿತೆರೆಯ ಡಾರ್ಲಿಂಗ್, ಸುರಸುಂದರಾಂಗ ಅಶುಬೆದ್ರ ನಿರ್ಮಿಸಲು ಮುಂದೆ ಬಂದಿದ್ದರೂ ತದನಂತರ ಹಳೇ ನಿರ್ಮಾಪಕರ ತಗಾದೆಯಿಂದಾಗಿ ಹಿಂದೆ ಸರಿದಿದ್ದಾರೆ. ಈಗ ಚಿತ್ರವನ್ನು ಹಳೇ ನಿರ್ಮಾಪಕರೇ ತಮ್ಮ ಸ್ಕಂದ ಸಂಸ್ಥೆಯಡಿ ನಿರ್ಮಿಸುತ್ತಿದ್ದಾರೆ.
ಚಿತ್ರದಲ್ಲಿ ನಾಯಕಿ ಹರಿಪ್ರಿಯಾ ಕ್ಲಬ್ ಡ್ಯಾನ್ಸರ್ ಕಂ ಹೈಟೆಕ್ ವೇಶ್ಯೆಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಹೈಟೆಕ್ ವೇಶ್ಯೆಯಾದರೂ ಅಂತರಂಗ ಶುದ್ಧಿ ಇರುವ ವಿಶಿಷ್ಟ ಪಾತ್ರಕ್ಕಾಗಿ ಹರಿಪ್ರಿಯಾ ಕೈಯಲ್ಲೊಂದು ಸಿಗರೇಟು ಹಿಡಿದು, ಬಾಯಿಯಲ್ಲಿ ಹೊಗೆ ಬಿಡುತ್ತಾ, ಸಖತ್ ಬೋಲ್ಡಾಗಿ ಕಾಣಿಸಿಕೊಂಡಿದ್ದಾರೆ. ಜಗ್ಗೇಶ್ ಮ್ಯಾನರಿಸಂಗೆ ಹೇಳಿ ಮಾಡಿಸಿದಂತಿರುವ ವಿಜಯ್ ಪ್ರಸಾದರ ಉಪ್ಪು, ಹುಳಿ, ಖಾರ ಬೆರೆತ ತೀಕ್ಷ್ಣ ಮಾತುಗಳು ಪ್ರೇಕ್ಷಕನನ್ನು ಹುಚ್ಚೆಬ್ಬಿಸುವುದಂತೂ ಖಂಡಿತ. ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ದತ್ತಣ್ಣ ಮತ್ತು ಸುಮನ್ ರಂಗನಾಥ್ ‘ನೀರ್ ದೋಸೆ’ಯ ಜೊತೆಗೆ ಬಾಯಿ ಚಪ್ಪರಿಸುವ ತೆಂಗಿನಕಾಯಿ ಚಟ್ನಿಯ ಸಾಥ್ ನೀಡಲಿದ್ದಾರೆ.
ತಾಂತ್ರಿಕ ವರ್ಗದಲ್ಲಿ ಮ್ಯೂಸಿಕ್ ಮಾಂತ್ರಿಕ ಅನೂಪ್ ಸೀಳಿನ್, ಸುಜ್ಞಾನ್ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನವಿರುವ ‘ನೀರ್ ದೋಸೆ’ ಸವಿಯಲು ಖಾಲಿ ಹೊಟ್ಟೆಯಲ್ಲಿ ಕಾದಿರಿ.