1987 ರಲ್ಲಿ ತೆರೆಕಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಸಿಂಗೀತಂ ಶ್ರೀನಿವಾಸ್ ಅವರ ನಿರ್ದೇಶನದ ಮೂಕಿ ಚಿತ್ರ “ಪುಷ್ಪಕ ವಿಮಾನ” ಈ ಬಾರಿ ಹೊಸ ಕಥೆಯೊಂದಿಗೆ ಟಾಕಿ ಚಿತ್ರವಾಗಿ ಹಾರಾಡಲು ಸಿದ್ಧವಾಗುತ್ತಿದೆ. ಟೈಟಲ್ ಹಳೆಯದಾದರೂ ಕಥೆ ಸಂಪೂರ್ಣವಾಗಿ ಹೊಸತಾಗಿದ್ದು “Escape is beautiful” ಎಂಬ ಸಬ್ ಟೈಟಲ್ ಹೊತ್ತಿರುವ “ಪುಷ್ಪಕ ವಿಮಾನ” ಈಗಾಗಲೇ ಬಿಡುಗಡೆಯಾಗಿರುವ ತನ್ನ ಬ್ಯೂಟಿಫುಲ್ ಟೀಸರ್ ನಿಂದ ನೋಡುಗರ ಗಮನ ಸೆಳೆದಿದೆ.
ತಂದೆ ಮಗಳ ಭಾಂದವ್ಯವಿರುವ ಚಿತ್ರದಲ್ಲಿ ನಟ ರಮೇಶ್ ಅರವಿಂದ್ ಅವರ ಅಭಿನಯ ಅಭಿಮಾನಿಗಳನ್ನು ನಿರೀಕ್ಷೆಯ ತುತ್ತತುದಿಯಲ್ಲಿ ನಿಲ್ಲಿಸಿದೆ. ನಾಯಕನಿಗೆ ವಿಮಾನಗಳ ಮೇಲೆ ಮೋಹವಿರುವ ಪಾತ್ರವಾದ್ದರಿಂದ ಚಿತ್ರಕ್ಕೆ “ಪುಷ್ಪಕ ವಿಮಾನ” ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಮುದ್ದು ಮಗಳ ಪಾತ್ರದಲ್ಲಿ ಪುಟಾಣಿ ಯುವೀನಾ ಪಾರ್ಥವಿ ಅಭಿನಯಿಸುತ್ತಿದ್ದು, ಎಲ್ಡರ್ ವರ್ಷನ್ ನಲ್ಲಿ ಮಗಳಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಪ್ರಮುಖವಾದ ಪಾತ್ರದಲ್ಲಿ ಬಾಲಿವುಡ್ ತಾರೆ ಜೂಹಿ ಚಾವ್ಲಾ ಮಿಂಚಲಿದ್ದಾರೆ. ಎಸ್.ರವೀಂದ್ರನಾಥ್ ಅವರ ನಿರ್ದೇಶನಕ್ಕೆ, ಗುರುಪ್ರಸಾದ್ ಸಂಭಾಷಣೆ, “ರಥಾವರ” ಖ್ಯಾತಿಯ ಭುವನ್ ಗೌಡ ಅವರ ಕ್ಯಾಮೆರಾ ಕೈಚಳಕವಿದ್ದು, “ಗೋಧಿ ಮೈ ಬಣ್ಣ ಸಾಧಾರಣ ಮೈ ಕಟ್ಟು” ಚಿತ್ರದ ಚರಣ್ ರಾಜ್ ಪುಷ್ಪಕ ವಿಮಾನಕ್ಕೆ ಸಂಗೀತ ನೀಡುತ್ತಿದ್ಧಾರೆ.
ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಮತ್ತು ವಡೆಯರ್ ಫಿಲ್ಮ್ ಫ್ಯಾಕ್ಟರಿಯಡಿಯಲ್ಲಿ ಪವನ್ ವಡೆಯರ್, ಸುಕೃತ್ ದೇವೇಂದ್ರ, ದೀಪಕ್ ಕೃಷ್ಣ, ದೀಪಕ್ ಕಿಶೋರ್, ದೇವಂತ್ ಮತ್ತು ವಿಖ್ಯಾತ್ ಪುಷ್ಪಕ ವಿಮಾನದ ನಿರ್ಮಿಸುತ್ತಿದ್ದಾರೆ.