ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಬಗೆಯ ಪೋಸ್ಟರ್ ಗಳಿಂದ ನೋಡುಗರ ಗಮನ ಸೆಳೆಯುತ್ತಿರುವ “ರನ್ ಆ್ಯಂಟನಿ” ಗಾಂಧೀನಗರದಲ್ಲಿ ರೇಸ್ ಗೆ ಇಳಿದುಬಿಟ್ಟಿದ್ದಾನೆ. ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಗರಡಿಯಲ್ಲಿ ಪಳಗಿದ ಯುವನಿರ್ದೇಶಕ ರಘುಶಾಸ್ತ್ರಿ ಸಾರಥ್ಯದ ಚಿತ್ರ ಈಗಾಗಲೇ ಪ್ರೇಕ್ಷಕರ ಕುತೂಹಲವನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.
ಸಿದ್ದಾರ್ಥ ಚಿತ್ರದಲ್ಲಿ ಮಿಂಚಿದ್ದ ರಾಜ್ ಕುಮಾರ್ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್, ತನ್ನ ಮೊದಲ ಚಿತ್ರದ ಬಳಿಕ ಹೊಸ ಕಥೆಯನ್ನು ಹುಡುಕಾಡುವಲ್ಲಿ ನಿರತರಾಗಿದ್ದರು. ಬರೋಬ್ಬರಿ 30 ಕಥೆಗಳನ್ನು ಕೇಳಿದ ನಂತರ ರಘುಶಾಸ್ತ್ರಿಯವರ ‘ರನ್ ಆ್ಯಂಟನಿ” ಇಷ್ಟವಾಗಿ, ತಂದೆ ರಾಘವೇಂದ್ರ ರಾಜ್ ಕುಮಾರ್ ಬಳಿ ಚರ್ಚಿಸಿ ಗ್ರೀನ್ ಸಿಗ್ನಲ್ ಸಿಕ್ಕ ಮೇಲೆ ತಮ್ಮದೇ ಸಂಸ್ಥೆ ವಜ್ರೇಶ್ವರಿ ಕಂಬೈನ್ಸ್ ಮೂಲಕ “ರನ್ ಆ್ಯಂಟನಿ” ಓಟ ಶುರುವಾಗಿದೆ. ಹೊಸತನದ ಕಥೆಗೆ, ಹೊಸ ಹುರುಪಿನ, ಹೊಸತನ್ನು ನೀಡುವ ತಂಡವನ್ನು ಕಟ್ಟುವ ಸಂಪೂರ್ಣ ಜವಾಬ್ದಾರಿಯನ್ನು ನಿರ್ದೇಶಕರ ಹೆಗಲಿಗೆ ಹೊರಿಸಿದ್ದಾರೆ ರಾಘವೇಂದ್ರ ರಾಜ್ ಕುಮಾರ್. “ರನ್ ಆ್ಯಂಟನಿ” ಆರ್ಟ್ ಮತ್ತು ಮಾಸ್ ಅಂಶಗಳನ್ನು ಬೆರೆತ ವಿಭಿನ್ನ ಥ್ರಿಲ್ಲರ್ ಸಿನೆಮಾ, ನಾಯಕನಷ್ಟೇ ಉಳಿದ ಪಾತ್ರಗಳಿಗೂ ಈ ಚಿತ್ರದಲ್ಲಿ ಸಮಾನ ಪ್ರಾಮುಖ್ಯತೆಯಿದೆ ಎನ್ನುತ್ತಾರೆ ವಿನಯ್.
ಚಿತ್ರಕ್ಕೆ ರುಕ್ಸಾ ಮತ್ತು ಸುಷ್ಮಿತಾ ಎಂಬ ಇಬ್ಬರು ನಾಯಕಿಯರು ಸಾಥ್ ಕೊಡಲಿದ್ದಾರೆ. ಉಳಿದಂತೆ ಪತ್ರಕರ್ತ ಹರಿ ಅವರ ಸಂಭಾಷಣೆ, ಮಣಿಕಾಂತ್ ಕದ್ರಿ ಸಂಗೀತ, ಮನೋಹರ್ ಜೋಷಿ ಛಾಯಾಗ್ರಹಣ ಚಿತ್ರಕ್ಕಿದೆ. ಏಪ್ರಿಲ್ ತಿಂಗಳಲ್ಲಿ ಚಿತ್ರಮಂದಿರಗಳಿಗೆ ನುಗ್ಗಲು ಯೋಜನೆ ಹಾಕಿಕೊಂಡಿದ್ದಾನೆ ಆ್ಯಂಟನಿ.