“ನಾನು ಅವನಲ್ಲ ಅವಳು” ಚಿತ್ರದಲ್ಲಿ ಸವಾಲಿನ ಪಾತ್ರದಲ್ಲಿ ನಟಿಸಿ, ಭಾರತೀಯ ಚಿತ್ರರಂಗಕ್ಕೆ ಸವಾಲೆಸೆದು ರಾಷ್ಟ್ರ ಪ್ರಶಸ್ತಿಯನ್ನು ಬಾಚಿದ ಕನ್ನಡ ಚಿತ್ರರಂಗದ ಅಮೂಲ್ಯ ರತ್ನ ಸಂಚಾರಿ ವಿಜಯ್ “ಹರಿವು” ಚಿತ್ರದಲ್ಲೂ ಅದ್ಭುತವಾಗಿ ನಟಿಸಿ ಪ್ರೇಕ್ಷಕರ ಮನಸೂರೆಗೊಳಿಸಿದ್ದರು.
ತದನಂತರ “ಒಗ್ಗರಣೆ, ಕಿಲ್ಲಿಂಗ್ ವೀರಪ್ಪನ್” ಹಾಗೂ ಬಿಡುಗಡೆ ಕಾಣಬೇಕಿರುವ ಕೆಲವು ಚಿತ್ರಗಳಲ್ಲಿ ನಟಿಸಿ ಶಹಬ್ಬಾಸ್ ಎಣಿಸಿಕೊಂಡಿದ್ದರು. ಪ್ರಥಮವಾಗಿ “ಜೋಗಿ ಪ್ರೇಮ್” ಅಭಿನಯದ “ದಾಸ್ವಾಳ” ಚಿತ್ರದಲ್ಲಿ ಹುಚ್ಚನ ಪಾತ್ರದಲ್ಲಿ ನಟಿಸಿ ಭರಪೂರ ಹೊಗಳಿಕೆಯನ್ನು ಗಳಿಸಿದ್ದ ಒಬ್ಬ ಅದ್ಭುತ ನಟನನ್ನು ದುಡಿಸಿಕೊಳ್ಳುವಲ್ಲಿ ಕನ್ನಡ ಚಿತ್ರರಂಗ ಸೋತಿತ್ತು. ರಾಷ್ಟ್ರಪ್ರಶಸ್ತಿ ಪಡೆದ ನಂತರ ವಿಜಯ್ ಅವರನ್ನು ಬಯಸಿ ಸುಮಾರು ಕತೆಗಳು, ಕೆಲವು ಘಟಾನುಘಟಿ ನಿರ್ದೇಶಕ, ನಿರ್ಮಾಪಕರು ವಿಜಯ್ ಅವರ ಮನೆ ಬಾಗಿಲನ್ನು ತಟ್ಟಿದ್ದರು. ಅವುಗಳಲ್ಲಿ ವಿಭಿನ್ನವಾದ, ನಟನೆಗೆ ಛಾಲೆಂಜ್ ಇರುವ ಪಾತ್ರ ಮತ್ತು ಕತೆಗಳನ್ನು ಮಾತ್ರ ವಿಜಯ್ ಆರಿಸಿದರು. ಅಂಥ ಕತೆಗಳಲ್ಲಿ “ರಿಕ್ತ” ಒಂದು.
“ರಿಕ್ತ” ಚಿತ್ರದಲ್ಲಿ ವಿಜಯ್ ಒಬ್ಬ ಮಗು, ಪ್ರೇಮಿ, ಕುಡುಕ ಮತ್ತು ಕಾಮಿಡಿಯನ್ ಪಾತ್ರದಲ್ಲಿ ಕಮಾಲ್ ಮಾಡಲಿದ್ದಾರೆ. ಇದೊಂದು ಹಾರರ್, ಕಾಮಿಡಿ ಮತ್ತು ಲವ್ ಎಲಿಮೆಂಟ್ಸ್ ಇರುವ ವಿಶೇಷ ಚಿತ್ರ. ಮ್ಯೂಸಿಕ್ ಈ ಚಿತ್ರದ ಉಸಿರು ಅಂತಾರೆ ವಿಜಯ್. ಅಮೃತ್ ಕುಮಾರ್ ಅವರ ಚೊಚ್ಚಲ ನಿರ್ದೇಶನದ ಚಿತ್ರದ ಪೋಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಅರುಣ್ ಕುಮಾರ್.ಬಿ, “ರಿಕ್ತ” ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶೀಘ್ರದಲ್ಲಿ ಥಿಯೇಟರ್ ಗಳಿಗೆ ಲಗ್ಗೆ ಹಾಕಲು ಕಾದಿರುವ “ರಿಕ್ತ” ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನವಾಗಿ ನಿಲ್ಲುವುದಂತೂ ದಿಟ.