ಸಾಲದ ಸುಳಿಯಲ್ಲಿ ಸಿಕ್ಕಿರುವ ತಮ್ಮ ಹಳೇ ಅಡ್ಡ “ಕುಡ್ಲ ಕೆಫೆ”ಯನ್ನು ಕಾಪಾಡಲು ಮತ್ತು ಕೆಫೆಯ ಯುವ ಮಾಲಿಕ ಗೌತಮ್ ನನ್ನು ಫೈನಾನ್ಸ್ ರೌಡಿಗಳಿಂದ ಉಳಿಸಲು, ಒಂದು ಕಾಲದ ಕಬಡ್ಡಿ ಪಂಟರುಗಳಾಗಿರುವ ಮೂವರು ಗೆಳೆಯರು ಭಾಸ್ಕರ, ರಾಘು ಮತ್ತು ಪೀಟರ್ ಸಾಲದ ಹಣ ಹೊಂದಿಸುವ ಯೋಜನೆಯನ್ನು ಹಾಕಿಕೊಳ್ಳುತ್ತಾರೆ. ಭಾರಿ ಮೊತ್ತದ ಹಣವನ್ನು ಹೊಂದಿಸಲು ಅಸಾಧ್ಯವೆಂದಾದಾಗ, ಹಣಕ್ಕಾಗಿ ಪರದಾಡುವ ಗೆಳೆಯರಿಗೆ ಮಂಗಳೂರಿನಲ್ಲಿ ನಡೆಯುವ ಪ್ರಸಿದ್ಧ ಕಬಡ್ಡಿ ಟೂರ್ನಮೆಂಟ್ ಬಗ್ಗೆ ತಿಳಿಯುತ್ತದೆ.
ಕಬಡ್ಡಿ ತೊರೆದು ಸುಮಾರು 30 ವರುಷಗಳು ಕಳೆದರೂ, ತಮ್ಮ ಪ್ರೀತಿಯ “ಕುಡ್ಲ ಕೆಫೆ”ಯನ್ನು ಉಳಿಸಿ, ಕುಡ್ಲ ಕೆಫೆಯ ಮಾಲೀಕ ಕಂ ಕಬಡ್ಡಿ ಕೋಚ್ ಪಾಂಡುವಿನ ಋಣ ತೀರಿಸಲು ಪಣ ತೊಡುತ್ತಾರೆ. ಬೊಜ್ಜು ಬೆಳೆದ ಹೊಟ್ಟೆಯನ್ನು ಹೊತ್ತು ಕಬಡ್ಡಿ ಆಡುವುದು ಅಸಾಧ್ಯವೆಂದು ಅರಿವಾದರೂ ಕೊಟ್ಟ ಮಾತಿಗಾಗಿ ಮತ್ತು ಫೈನಾನ್ಸ್ ರೌಡಿಯ ತೀಕ್ಷ್ಣ ಮಾತುಗಳಿಗೆ ಸವಾಲಾಗಿ ಕಬಡ್ಡಿ ಆಡಲು ತೊಡಗುತ್ತಾರೆ. ಇದರ ನಡುವೆ ಗೆಳೆಯರ ಸಣ್ಣ ಮನಸ್ತಾಪಗಳು, ಖಾಸಗಿ ಬದುಕಿನ ಕಷ್ಟಗಳು ಕುಡ್ಲ ಕೆಫೆಯ ಮೆನು ಕಾರ್ಡಿನಲ್ಲಿ ಮಿಳಿತವಾಗಿವೆ.
ಬಾಲಿವುಡ್ಡಿನ “ರಾಕ್ ಆನ್”, “ಚಕ್ ದೇ ಇಂಡಿಯಾ” ಸ್ಪರ್ಶ ನೀಡುವ ಚಿತ್ರ ತುಳುನಾಡಿನ ಸೊಗಡನ್ನು ಮೀರಿ ಹೋಗಿಲ್ಲ. ನಿರ್ದೇಶಕ ಸೂರ್ಯಮೆನನ್ ಅವರು ಎಲ್ಲಾ ಸಂಗತಿಗಳಲ್ಲೂ ನಿಷ್ಠತೆಯನ್ನು ಕಾಪಾಡಲು ಹೋಗಿ ಚಿತ್ರಕಥೆಯು ನಿಧಾನವಾಗಿ ಸ್ವಲ್ಪ ಬೋರ್ ಅನಿಸುತ್ತದೆ. ಅಸಹ್ಯವಲ್ಲದ, ಕಿರಿಕಿರಿಯೆನಿಸದ ತುಳುಹಾಸ್ಯ, ಪ್ರೇಕ್ಷಕರಿಗೆ ಕಚಗುಳಿಯಿಡುವಲ್ಲಿ ಯಶಸ್ವಿಯಾಗಿದೆ. ನವೀನ್.ಡಿ.ಪಡೀಲ್, ಜ್ಯೋತಿಷ್ ಶೆಟ್ಟಿ, ರಘು ಪಾಂಡೇಶ್ವರ ಜಿದ್ದಿಗೆ ಬಿದ್ದವರಂತೆ ನಟಿಸಿ ಚಿತ್ರಕ್ಕೊಂದು ಆಯಾಮ ನೀಡುವಲ್ಲಿ ಗೆದ್ದಿದ್ದಾರೆ. ನಾಯಕನಿಗೆ ಇರಬೇಕಾದ ಎಲ್ಲಾ ಯೋಗ್ಯತೆಗಳು ಇರುವ ಚಿತ್ರದ ನಾಯಕ ಶೈನ್ ಶೆಟ್ಟಿ ತುಳು ಚಿತ್ರರಂಗಕ್ಕೊಂದು ಹೊಸ ಭರವಸೆಯ ಚಿಗುರು. ನಾಯಕಿ ಆಹಾನ ಕುಂಬ್ರ ಕಬಡ್ಡಿ ಕೋಚ್ ಪಾತ್ರದಲ್ಲಿ ಪ್ರಬುದ್ಧವಾಗಿ ನಟಿಸಿದ್ದಾರೆ. ಯೋಧ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ರಂಜನ್ ಶೆಟ್ಟಿ ಮತ್ತು ಸೂರ್ಯಮೆನನ್ ಕುಡ್ಲಕೆಫೆಯನ್ನು ನಿರ್ಮಿಸಿದ್ದಾರೆ. ಚಿತ್ರದ ತಾಂತ್ರಿಕ ವಿಭಾಗದಲ್ಲಿ ಸಲೀಲ್ ಪಾಠಕ್ ಛಾಯಾಗ್ರಹಣ, ಅಕ್ಷಯ್ ಮೆಹ್ತಾ ಸಂಕಲನ, ದರ್ಶನ್ ಉಮಂಗ್ ಮತ್ತು ಆಕಾಶ್ ಪ್ರಜಾಪತಿ ಸಂಗೀತ, ಶಶಿರಾಜ್ ಕಾವೂರು ಸಾಹಿತ್ಯ ನೀಡಿದ್ದಾರೆ.