ಕನ್ನಡ ಚಿತ್ರರಂಗದಲ್ಲಿ ಪ್ರವಾಹವನ್ನು ಸೃಷ್ಟಿಸಿ, ಪ್ರೇಕ್ಷಕರನ್ನು ಹಾಡು ಮತ್ತು ಸಂಭಾಷಣೆಗಳಲ್ಲಿ ಮುಳುಗಿಸಿಬಿಟ್ಟ “ಮುಂಗಾರುಮಳೆ” ನಿರ್ಜೀವವಾಗಿದ್ದ ಚಿತ್ರರಂಗಕ್ಕೆ ಹೊಸಕಳೆಯನ್ನು ನೀಡಿತ್ತು. ಭರ್ಜರಿಯಾಗಿ ಬಾಕ್ಸಾಫೀಸ್ ಕೊಳ್ಳೆ ಹೊಡೆದ ಚಿತ್ರ ತನಗಾಗಿ ದುಡಿದ ಎಲ್ಲರನ್ನೂ ಸ್ಟಾರ್ ಮಾಡಿಬಿಟ್ಟಿತು.
ಇಡೀ ಮುಂಗಾರುಮಳೆಯನ್ನು ಗುಡುಗು ಸಿಡಿಲಿನ ಅಬ್ಬರವಿಲ್ಲದೆ ತಂಗಾಳಿಯಂತ ಸಂಭಾಷಣೆ ಜೊತೆಗೆ ಕಟ್ಟಿಕೊಟ್ಟ ನಿರ್ದೇಶಕ ಯೋಗರಾಜ್ ಭಟ್ ಯುವಹೃದಯಗಳಿಗೆ ಷೇಕ್ಸ್ ಪಿಯರ್ ಆಗಿಬಿಟ್ಟರೆ, ತನ್ನ ನಗು, ಅಳು ಮತ್ತು ಮಾತಿನ ಮೂಲಕ ಹೆಂಗಳೆಯರ ಹೃದಯಕ್ಕೆ ಕನ್ನಹಾಕಿಬಿಟ್ಟ ಕಾಮಿಡಿ ಟೈಂ ಗಣೇಶ್ ಬೆಳಗಾಗುವುದರೊಳಗೆ ಗೋಲ್ಡನ್ ಸ್ಟಾರ್ ಆಗಿಬಿಟ್ಟರು. ತನ್ನ ಹುಡುಗ ಇದೇ ರೀತಿ ಇರಬೇಕು, ಇದೇ ತರ ನನ್ನನ್ನು ಕಾಡಬೇಕು ಎನ್ನುವಂತ ವೈರಸನ್ನು ಹುಡುಗಿಯರ ಮನಸಲ್ಲಿ ಹರಿಯಬಿಟ್ಟ “ಮುಂಗಾರುಮಳೆ”ಯ ಮತ್ತೊಂದು ಹೊಸ ರೂಪ ಸುರಿಯಲು ತಯಾರಾಗುತ್ತಿದೆ.
“ಮುಂಗಾರುಮಳೆ-2” ಮೊದಲ ಚಿತ್ರದ ಛಾಯೆಯಿಲ್ಲದೆ ಸಂಪೂರ್ಣವಾಗಿ ಹೊಸತಾಗಿ ತಯಾರಾಗುತ್ತಿದೆ. ಇಲ್ಲಿ ಯೋಗರಾಜ್ ಭಟ್ಟರ ಬದಲಿಗೆ ನಿರ್ದೇಶಕನಾಗಿ ಶಶಾಂಕ್ ಅವರು ಪಟ್ಟವನ್ನು ಏರಿದ್ದಾರೆ. ಗೋಲ್ಡನ್ ಸ್ಟಾರ್ ಗೆ ನಾಯಕಿಯಾಗಿ ಮಂಗಳೂರು ಚೆಲುವೆ ನೇಹಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಪ್ರೇಮಲೋಕದ ಯಜಮಾನ, ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಗಣೇಶ್ ತಂದೆಯಾಗಿ ಪ್ರಮುಖ ಪಾತ್ರದಲ್ಲಿದ್ದರೆ ಉಳಿದ ಪಾತ್ರಗಳಲ್ಲಿ ಐಂದ್ರಿತಾ ರೇ, ಸಾಧುಕೋಕಿಲಾ, ರವಿಶಂಕರ್ ಮುಂಗಾರುಮಳೆಯಲಿ ನೆನೆಯುತ್ತಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಹಾಡುಗಳ ಮೋಡ ಕಟ್ಟಿಕೊಟ್ಟರೆ, ಉಳಿದಂತೆ ಶಶಾಂಕ್ ಅವರ ಫೇವರಿಟ್ ಛಾಯಾಗ್ರಾಹಕ ಶೇಖರ್ ಚಂದ್ರು ಮುಂಗಾರುಮಳೆಯ ಹನಿಹನಿಗಳನ್ನೂ ಸೆರೆ ಹಿಡಿಯುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನದ “ಮುಂಗಾರುಮಳೆ-2” ಅನ್ನು ಇ.ಕೆ.ಪಿಕ್ಚರ್ಸ್ ಲಾಂಛನದಲ್ಲಿ ಜಿ.ಗಂಗಾಧರ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ.