ನವರಸನಾಯಕ ಜಗ್ಗೇಶ್ ಅವರ “ಮನ್ಮಥ” “ಸಿ.ಐ.ಡಿ ಈಶ” ಮತ್ತು ಕೊಂಕಣಿ “ಪಾದ್ರಿ” ಚಿತ್ರಗಳ ಸರದಾರ ರಾಜೇಶ್ ಫೆರ್ನಾಂಡಿಸ್ ಕೆಲವು ವರುಷಗಳ ನಂತರ ಮತ್ತೆ ಹೊಸತಾದ ಕತೆಯೊಂದಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಮತ್ತೆ ಕೊಂಕಣಿ ಚಿತ್ರದ ಮೂಲಕ ಸದ್ದು ಮಾಡಲು ಹೊರಟಿರುವ ನಿರ್ದೇಶಕರು ಗೋವಾ ಮತ್ತು ಮಂಗಳೂರು ಕೊಂಕಣಿ ಭಾಷೆ ಮಿಳಿತವಾದ ಸೊಗಸಾದ ಕಥಾಹಂದರ ಹೊಂದಿರುವ ಚಿತ್ರಕ್ಕೆ “ಪ್ಲಾನಿಂಗ್” ಎಂಬ ಟೈಟಲ್ ಇಟ್ಟಿದ್ದಾರೆ. ಬರೋಬ್ಬರಿ ಮೂರು ವರುಷಗಳಿಂದ ಚಿತ್ರಕಥೆ ಬರೆಯುವುದರಲ್ಲಿ ತೊಡಗಿದ್ದ ರಾಜೇಶ್ ಅವರಿಗೆ ಈ ಚಿತ್ರವನ್ನು ಕನ್ನಡದಲ್ಲೂ ಮಾಡುವ ಯೋಜನೆಯಿದೆಯಂತೆ.
ಗೋವಾ ಮೂಲದ ಸೆವ್ರಿನೋ ಫೆರ್ನಾಂಡಿಸ್ ಅವರು ಚಿತ್ರಕ್ಕೆ ಕಥೆ ಬರೆಯುವುದರೊಂದಿಗೆ ತನ್ನ ಟ್ರಿನಿಟ್ ಫಿಲಂಸ್ ಬ್ಯಾನರ್ ಮೂಲಕ ಬಂಡವಾಳವನ್ನೂ ಹೂಡುತ್ತಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಗೋವಾ ಮೂಲದ ತಪನ್ ಆಚಾರ್ಯ, ನಾಯಕಿಯರಾಗಿ ಸಿಸಿಲ್ ಗೋವಾ ಮತ್ತು ಸೀಮಾ ಬುತೆಲ್ಲೊ ಕುಂದಾಪುರ ಅಭಿನಯಿಸಿದರೆ ಮಿಕ್ಕುಳಿದ ಪಾತ್ರಗಳಲ್ಲಿ ಸ್ಟ್ಯಾನಿ ಅಳ್ವಾರಿಸ್, ಎಡ್ಡಿ ಫೆರ್ನಾಂಡಿಸ್, ಪ್ರಿನ್ಸ್ ಜಾಕೊಬ್, ಜಾನ್ ಡಿಸಿಲ್ವಾ, ರೋನ್ಸ್ ಲಂಡನ್ ಅಭಿನಯಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಪ್ರಖ್ಯಾತ ಕ್ಯಾಮೆರಾಮೆನ್ ರಮೇಶ್ ಬಾಬು “ಪ್ಲಾನಿಂಗ್” ಅನ್ನು ಸೆರೆ ಹಿಡಿಯುತ್ತಿದ್ದಾರೆ, ಥ್ರಿಲ್ಲರ್ ಮಂಜು ಸಾಹಸ, ವಿನಯ್ ರಫಾಯೆಲ್ ಸಂಗೀತ, ವಿಲ್ಸನ್ ಕಟೀಲ್ ಮತ್ತಿತರರ ಸಾಹಿತ್ಯ, ಜೋಕಿಂ ಪಿಂಟೊ ಪ್ರಚಾರ ವಿನ್ಯಾಸ ಮತ್ತು ಶಿವು ಸಂಕಲನವಿದೆ.
ಪ್ಲಾನಿಂಗ್” ಚಿತ್ರ ಬೆಂಗಳೂರು, ಮಂಗಳೂರು, ಗೋವಾ, ಕಾರವಾರ ಮತ್ತು ಹೊನ್ನಾವರ ಸುತ್ತಮುತ್ತ ಚಿತ್ರೀಕರಣಗೊಂಡು ಸೆಪ್ಟೆಂಬರ್ ಹೊತ್ತಿಗೆ ಬಿಡುಗಡೆಯಾಗಲಿದೆ.