ಪವರ್ ಸ್ಟಾರ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಚಕ್ರವ್ಯೂಹ ಚಿತ್ರ ದಿನೇ ದಿನೇ ಒಂದಿಲ್ಲೊಂದು ಕಾರಣಗಳಿಂದಾಗಿ ಸದ್ದುಮಾಡುತ್ತಾ ಇದೇ ಮಾರ್ಚ್ 17 ರಂದು ಎಸ್.ಎಸ್.ತಮನ್ ಸಂಗೀತವಿರುವ ಆಡಿಯೋ ಬಿಡುಗಡೆ ಮಾಡಲು ತಯಾರಾಗಿದೆ.
ಚಕ್ರವ್ಯೂಹ ಚಿತ್ರವು ತಮಿಳಿನ “ಇವನ್ ವೀರಮಾದಿರಿ” ಚಿತ್ರದ ರಿಮೇಕ್ ಆದರೂ ಕನ್ನಡದಲ್ಲಿ ಪವರ್ ಸ್ಟಾರ್ ಪವರ್ ಗೆ ತಕ್ಕಂತೆ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರಂತೆ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ “ಎಂಗೆಯುಂ ಎಪ್ಪೋದುಂ”, “ಇವನ್ ವೀರ ಮಾದಿರಿ”, “ಗಣೇಶ್ ಜಸ್ಟ್ ಗಣೇಶ್” ಮತ್ತು “ವಾಲಿಯವನ್” ಚಿತ್ರಗಳನ್ನು ನಿರ್ದೇಶಿಸಿರುವ ಸೂಪರ್ ಹಿಟ್ ನಿರ್ದೇಶಕ ತನ್ನ ಸೂಪರ್ ಹಿಟ್ ಸಿನೆಮಾ “ಇವನ್ ವೀರ ಮಾದಿರಿ” ಚಿತ್ರವನ್ನು ಕನ್ನಡಕ್ಕೆ ಚಕ್ರವ್ಯೂಹವನ್ನಾಗಿ ಮಾಡುತ್ತಿದ್ದಾರೆ. “ಎನ್ನೈ ಅರಿಂದಾಲ್” ಚಿತ್ರದಲ್ಲಿ ಖಳನಾಗಿ ಮೆರೆದ ಅರುಣ್ ವಿಜಯ್ ಮತ್ತು ಬಾಲಿವುಡ್ ಖಳ ಅಭಿಮನ್ಯು ಸಿಂಗ್ ಚಕ್ರವ್ಯೂಹದಲ್ಲಿ ಖಳರಾಗಿ ಅಪ್ಪು ಒದೆಗಳನ್ನು ತಿನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಧುಕೋಕಿಲ ಮತ್ತು ರಂಗಾಯಣ ರಘುರವರ ಜುಗಲ್ ಬಂಧಿ ಚಕ್ರವ್ಯೂಹಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್.
ಎನ್.ಕೆ.ಲೋಹಿತ್ ಸನ್ ಶೈನ್ ಬ್ಯಾನರ್ ನಲ್ಲಿ ಚಕ್ರವ್ಯೂಹವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಷಣ್ಮುಗ ಸುಂದರಂ ಛಾಯಾಗ್ರಹಣ, ಎಂ ಸುಬಾರಕ್ ಸಂಕಲನವಿದೆ. ಚಿತ್ರದಲ್ಲಿ “ಗೆಳೆಯ ಗೆಳೆಯ” ಎಂಬ ಹಾಡನ್ನು ಅಪ್ಪು ಗೆಳೆಯ, ತೆಲುಗು ಚಿತ್ರರಂಗದ ಬಾದ್ ಷಾ ಜ್ಯೂನಿಯರ್ ಎನ್.ಟಿ.ಆರ್ ಹಾಡಿದರೆ, ಮತ್ತೊಂದು ಹಾಡಿಗೆ ತೆಲುಗು ತಾರೆ ಕಾಜಲ್ ಅಗರ್ ವಾಲ್ ದನಿಯಾಗಿದ್ದಾರೆ. ಈಗಾಗಲೇ ಭಾರಿ ಮೊತ್ತಕ್ಕೆ ಟಿ.ವಿ ರೈಟ್ಸ್ ಮಾರಟವಾಗಿರುವ ಚಕ್ರವ್ಯೂಹ ಇದೇ ತಿಂಗಳು ಬಿಡುಗಡೆಯಾಗುತ್ತಿದೆ.