ಯು2 ಸಿನೆಮಾಸ್ ಲಾಂಛನದಲ್ಲಿ ಉದಯ್ ಶೆಟ್ಟಿ ಕಾಂತಾವರ ಮತ್ತು ಉದಯ್ ಕುಮಾರ್ ಸಾಲ್ಯಾನ್ ನಿರ್ಮಾಣದ ಚೊಚ್ಚಲ ಚಿತ್ರ ‘ಏಸ’ದ ಧ್ವನಿಸುರುಳಿ ಮಂಗಳೂರು ಪುರಭವನದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿ ಚಿತ್ರದ ಎಲ್ಲಾ ಹಾಡುಗಳು ಪ್ರೇಕ್ಷಕರ ಮನ ಗೆದ್ದಿರುವುದು ಸತ್ಯ.
ಶೋಭರಾಜ್ ಪಾವೂರು ಕಥೆ-ಸಂಭಾಷಣೆ ಬರೆದಿರುವ ಏಸ ಚಿತ್ರವನ್ನು ಕನ್ನಡದ ಖ್ಯಾತ ನಿರ್ದೇಶಕ ಎಂ.ಎನ್.ಜಯಂತ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಗುರುರಾಜ್ ಎಂ.ಬಿ ಮತ್ತು ಗುರು ಬಾಯಾರ್ ಅವರ ಸಂಗೀತ ನಿರ್ದೇಶನವಿರುವ ಏಸ ಚಿತ್ರಕ್ಕೆ ತುಳುಚಿತ್ರರಂಗದ ಕಲಾಸಾಮ್ರಾಟ್ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಶಶಿರಾಜ್ ಕಾವೂರು ಮತ್ತು ಲೋಕು ಕುಡ್ಲ ಅವರ ಸಾಹಿತ್ಯವಿದ್ದರೆ ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್, ಸಂತೋಷ್ ವೆಂಕಿ, ಸಂಗೀತಾ ಬಾಲಚಂದ್ರ, ಸುಪ್ರಿಯಾ ಜೋಷಿ ಮತ್ತು ತುಳುಚಿತ್ರರಂಗದ ಹಾಸ್ಯ ಚಕ್ರವರ್ತಿ ಭೋಜರಾಜ್ ವಾಮಂಜೂರು ದನಿಯಾಗಿದ್ದಾರೆ.
1. ‘ಏಸ’ ಶೀರ್ಷಿಕೆ ಹಾಡಿಗೆ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಸಾಹಿತ್ಯ ಬರೆದರೆ ಕನ್ನಡದ ಪ್ರಖ್ಯಾತ ಗಾಯಕ ವಿಜಯ್ ಪ್ರಕಾಶ್ ದನಿಯಾಗಿದ್ದಾರೆ.
2. ‘ಕೃಷ್ಣ ಉಡಲ್ ಡ್ ನಲಿಪುಬಲ’ ಹಾಡನ್ನು ಲೋಕು ಕುಡ್ಲ ಬರೆದರೆ ಸಂಗೀತಾ ಬಾಲಚಂದ್ರ ಹಾಡಿದ್ದಾರೆ.
3. ‘ತೋಟ ನಿಲಿಕೆ’ ಹಾಡನ್ನು ಶಶಿರಾಜ್ ಕಾವೂರು ಅವರು ಬರೆದರೆ ಸಂತೋಷ್ ವೆಂಕಿ ಮತ್ತು ಸುಪ್ರಿಯಾ ಜೋಷಿ ಹಾಡಿದ್ದಾರೆ.
4. ‘ಕಲೆಕ್ಕ್ ಲೆ ಕಲೊಟು’ ಎಂಬ ಯಕ್ಷಗಾನ ಕುರಿತಾದ ಹಾಡನ್ನು ಶಶಿರಾಜ್ ಕಾವೂರು ಬರೆದಿದ್ದು ತುಳು ಚಿತ್ರರಂಗದ ಹಾಸ್ಯದರಸ ಭೋಜರಾಜ್ ವಾಮಂಜೂರು ದನಿಯಾಗಿದ್ದಾರೆ.
5. ‘ಬೀಜಿ ಗಾಳಿಗ್’ ಹಾಡನ್ನು ಕೂಡ ಶಶಿರಾಜ್ ಕಾವೂರು ಅವರು ಬರೆದರೆ ನಿತಿನ್ ರಾಜ್ ಹಾಡಿದ್ದಾರೆ.
ಹಾಡು ಕೇಳಿದವರೆಲ್ಲಾ ಹಾಡುಗಳ ಬಗ್ಗೆ ಸಿಕ್ಕಾಪಟ್ಟೆ ಹೊಗಳೋಕೆ ಶುರುಮಾಡಿರುವುದು ಅಲ್ಲದೇ ಸಿನೆಮಾ ಬಿಡುಗಡೆಗಾಗಿ ಕಾತುರರಾಗಿದ್ದಾರೆ. ಇನ್ನು ಗಾಯಕರು, ಸಾಹಿತಿಗಳು ಹಾಡುಗಳ ಬಗ್ಗೆ ಮತ್ತು ಸಿನೆಮಾದ ಬಗ್ಗೆ ಹೇಳಿರುವುದು ಇಲ್ಲಿದೆ.
ವೈಯಕ್ತಿಕವಾಗಿ ನನಗೆ ಭೋಜರಾಜ್ ವಾಮಂಜೂರು ಅವರು ಹಾಡಿರುವ ಹಾಡು ತುಂಬಾ ಇಷ್ಟವಾಯ್ತು. ಮೊದಲ ಬಾರಿಗೆ ಹಾಡಿದರೂ ಅದ್ಭುತವಾಗಿ ಹಾಡಿದ್ದಾರೆ. ಇನ್ನು ನನಗೆ ಸಾಹಿತ್ಯ ಬರೆಯಲು ಸಿಕ್ಕಿರುವ ರಾಗ ಕೂಡ ತುಂಬಾ ಚೆನ್ನಾಗಿತ್ತು. ನಿರ್ದೇಶಕರಾಗಲಿ ಅಥವಾ ಶೋಭರಾಜ್ ಆಗಲಿ ಯಾವುದೇ ರೀತಿಯಲ್ಲೂ ರಾಜಿಯಾಗದೆ ಪೂರ್ಣ ಪ್ರಮಾಣದ ಡೆಡಿಕೇಷನ್ ಕೊಟ್ಟಿದ್ದಾರೆ. ಹಾಗಾಗಿ ಹಾಡುಗಳಲ್ಲಿ ಹೊಸತನ ಕಾಣ್ತಿದೆ. ಇನ್ನು ಸಿನೆಮಾಕ್ಕೂ ಸರಿಯಾದ ಪೂರ್ವ ತಯಾರಿಗಳನ್ನು ಮಾಡಿಕೊಂಡೇ ವಿಭಿನ್ನ ಸಿನೆಮಾವನ್ನು ಮಾಡಿದ್ದಾರೆ. ಈ ತಂಡವನ್ನು ನೋಡಿ ಉಳಿದವರು ಕಲಿಯಬೇಕು.
-ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಚಿತ್ರನಿರ್ದೇಶಕ, ಸಾಹಿತಿ-
“ನಾನು ಸಿನೆಮಾಕ್ಕಾಗಿ ಹಾಡು ಹಾಡಿರುವುದು ಇದೇ ಮೊದಲು. ನಾನು ಹಾಡುತ್ತೇನೆಂದು ನಿರೀಕ್ಷಿಸಿಯೂ ಇರಲಿಲ್ಲ. ಸಂಗೀತ ನಿರ್ದೇಶಕರಿಂದ ಇದೆಲ್ಲಾ ಸಾಧ್ಯವಾಗಿದೆ. ಹಾಡುಗಳು ಹಿಟ್ ಆಗಿರುವುದು ನಿಜಕ್ಕೂ ಖುಶಿ ಕೊಟ್ಟಿದೆ. ಹಾಗೇ ಸಿನೆಮಾದ ಮೇಲೆಯೂ ನಿರೀಕ್ಷೆ ಇದೆ.”
-ಭೋಜರಾಜ್ ವಾಮಂಜೂರು, ನಟ
ಏಸ ಒಂದು ವಿಭಿನ್ನತೆಯನ್ನು ಕಾಯ್ದುಕೊಂಡು ಬಂದಿರುವ ಚಿತ್ರ. ಅದರ ಭಿತ್ತಿಚಿತ್ರವೇ ಅದನ್ನು ಸಾರಿ ಹೇಳುತ್ತಿದೆ. ಶೋಭರಾಜ್ ನನ್ನು ನಾನು ಬಹಳ ವರ್ಷದಿಂದ ಬಲ್ಲೆ, ಅವನೊಬ್ಬ ಕ್ರಿಯಾಶೀಲ ವ್ಯಕ್ತಿ. ನನಗೆ ರಾಗಗಳನ್ನು ಕಳಿಸಿ, ಪದ್ಯ ಬರೆದು ಕೊಡಿ ಅಂತ ಕೇಳಿದ್ರು. ರಾಗ ಕೇಳಿ ತುಂಬಾ ಖುಶಿಯಾಯ್ತು. ಒಂದು ಪದ್ಯ ಜನರನ್ನು ತಲುಪಬೇಕಾದ್ರೆ ರಾಗ ತುಂಬಾ ಆಕರ್ಷಕವಾಗಿರಬೇಕು. ಈ ರಾಗಗಳಲ್ಲಿ ಒಂದು ರೀತಿಯ ಆಕರ್ಷಣೆ ಇತ್ತು. ನಿರ್ದೇಶಕರು ಕಥೆ ಹೇಳಿದ್ರು. ಸಂದರ್ಭಕ್ಕೆ ತಕ್ಕ ಹಾಗೆ ಬರೆದೆ. ತಂಡಕ್ಕೆ ಖುಶಿಯಾಗಿದೆ. ಜನರೂ ಇಷ್ಟಪಡಬಹುದೆಂಬ ನಿರೀಕ್ಷೆಯಿದೆ.
-ಶಶಿರಾಜ್ ಕಾವೂರು, ಸಾಹಿತಿ
“ಏಸ, ನನಗೊಂದು ಅದ್ಭುತ ಅನುಭವ. ಮಲಯಾಳಂ ಮತ್ತು ತಮಿಳು ಚಿತ್ರಗಳಿಗೆ ನಾನು ಹಾಡಿದ್ದರೂ ಇಂತಹ ಒಂದು ಲವ್ಲೀ ಫೀಲ್ ಸಿಕ್ಕಿರಲಿಲ್ಲ. ಗುರುರಾಜ್ ಮತ್ತು ಗುರು ಬಾಯಾರ್ ಅವರ ಸಂಗೀತ ನಿಜವಾಗಿಯೂ ಮೋಡಿ ಮಾಡುವಂಥದ್ದು. ನನ್ನ ಬಾಯಲ್ಲಿ ತುಳುಪದಗಳನ್ನು ಹಾಡಿಸಲು ತುಂಬಾ ಕಷ್ಟಪಟ್ಟಿದ್ದಾರೆ. ನನಗೆ ಈ ಅವಕಾಶ ನೀಡಿರುವ ಗ್ರಾಫಿಕ್ ಡಿಸೈನರ್ ದೇವಿ ರೈ ಮತ್ತು ಶೋಭರಾಜ್ ಪಾವೂರು ಅವರಿಗೆ ಕೃತಜ್ಞನಾಗಿದ್ದೇನೆ”
-ನಿತಿನ್ ರಾಜ್, ಗಾಯಕ
“ಏಸ ಚಿತ್ರದ ಹಾಡಿಗೆ ದನಿಯಾಗಿರುವುದು ನನ್ನ ಬದುಕಿನ ಮೊದಲ ಸುವರ್ಣಾವಕಾಶ. ಗುರುರಾಜ್ ಮತ್ತು ಗುರು ಬಾಯಾರ್ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್. ಸಿನೆಮಾದ ಬಗ್ಗೆ ನನಗೆ ಬಹಳ ನಿರೀಕ್ಷೆಯಿದೆ. ಥ್ಯಾಂಕ್ಸ್ ಟೀಂ ಏಸ”
-ಸುಪ್ರಿತಾ ಜೋಷಿ, ಗಾಯಕಿ
“ಏಸ ಚಿತ್ರದ ‘ಕೃಷ್ಣ ಉಡಲ್ ಡ್ ನಲಿಪುಬಲ’ ಹಾಡನ್ನು ನಾನು ಬರೆದಿದ್ದೇನೆ. ಒಟ್ಟು ಐದು ಹಾಡುಗಳಿವೆ. ಖ್ಯಾತನಾಮರು ಹಾಡುಗಳನ್ನು ಹಾಡಿದ್ದಾರೆ. ‘ಕಲೆಕ್ಕ್ ಲೆ ಕಲೊಟ್ಟು’ ಹಾಡು ನನ್ನ ಫೇವರಿಟ್ ಹಾಡು. ಹಾಡುಗಳ ಬಗ್ಗೆ ಈಗಾಗಲೇ ಒಳ್ಳೆಯ ಪ್ರತಿಕ್ರಿಯೆ ಬರುತ್ತಿರುವುದು ಖುಶಿ ಕೊಟ್ಟಿದೆ.”
-ಲೋಕು ಕುಡ್ಲ
“ಏಸ ಸಿನೆಮಾದ ಎಲ್ಲಾ ಹಾಡುಗಳನ್ನು ಹದಿನೈದು ಬಾರಿ ಕೇಳಿದ್ದೇನೆ. ನಿಜವಾಗಿಯೂ ತುಂಬಾ ಚೆನ್ನಾಗಿವೆ. ಭೋಜರಾಜ್ ವಾಮಂಜೂರು ಅವರು ಹಾಡಿರುವ ಹಾಡು ಮಾತ್ರ ಸೂಪರ್ ಹಿಟ್ ಆಗುವುದರಲ್ಲಿ ಸಂಶಯವಿಲ್ಲ. ಜೊತೆಗೆ ಲೋಕು ಕುಡ್ಲ ಬರೆದ ‘ಕೃಷ್ಣ ಉಡಲ್ ಡ್’ ಹಾಡು ಮತ್ತು ಕೊಡಿಯಾಲ್ ಬೈಲ್ ಅವರು ಬರೆದ ‘ಏಸ’ ಟೈಟಲ್ ಸಾಂಗ್ ಹೊಸ ಫೀಲ್ ಕೊಡುತ್ತದೆ. ಸಿನೆಮಾದ ಮೇಲೆ ಈಗ ನಿರೀಕ್ಷೆ ಹೆಚ್ಚಾಗಿದೆ.
-ಸಂದೀಪ್ ಟೆಲ್ಲಿಸ್, ಚಿತ್ರಪ್ರೇಮಿ