ಕೊಚ್ಚಿ: ಮಲಯಾಳಂನ ಖ್ಯಾತ ತಾರಾ ಜೋಡಿ ದೀಲಿಪ್ ಮತ್ತು ಕಾವ್ಯ ಮಾಧವನ್ ಅವರು ದಾಂಪತ್ಯ ಜೀವನಕ್ಕೆ ಇಂದು ಕಾಲಿಟ್ಟಿದ್ದಾರೆ.
ಮೊದಲ ಮದುವೆಯ ವಿವಾಹ ಬಂಧನ ಕಳಚಿಕೊಂಡಿರುವ ಈ ತಾರಾಜೋಡಿ ಈಗ ಶುಕ್ರವಾರದಂದು ಸತಿ ಪತಿಯಾಗಿದ್ದಾರೆ. ದಿಲೀಪ್ ಹಾಗೂ ಕಾವ್ಯ ಮಾಧವನ್ ಮದುವೆಗೆ ದಿಲೀಪ್ ಅವರ ಮಗಳು ಮೀನಾಕ್ಷಿಯ ಸಮ್ಮತಿ ಪಡೆದ ನಂತರವಷ್ಟೇ ದಿಲೀಪ್ ಅವರು ಹಸೆಮಣೆ ಏರಿದ್ದಾರೆ. ಮದುವೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೀನಾಕ್ಷಿ, ಅಪ್ಪ ದಿಲೀಪ್ ಮದ್ವೆಯಿಂದ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.
ಎರ್ನಾಕುಲಂನ ಹೊಟೇಲ್ ವೊಂದರಲ್ಲಿ ಬೆಳಗ್ಗೆ 9.30 ಸುಮಾರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾರಾ ಜೋಡಿ ಗಣ್ಯರ ಎದುರು ಮಲಯಾಳಿ ಸಂಪ್ರದಾಯದಂತೆ ಹಾರ ಬದಲಿಸಿಕೊಂಡರು. ಖ್ಯಾತ ತಾರಾ ಜೋಡಿಗೆ ಇದು ಎರಡನೇ ವಿವಾಹವಾಗಿದೆ. ದೀಲಿಪ್ ಅವರು ನಟಿ ಮಂಜು ವಾರಿಯರ್ ಅವರೊಂದಿಗೆ ವಿವಾಹವಾಗಿದ್ದು ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಪ್ರಸ್ತುತ ಅವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡು ಇಬ್ಬರು ವಿಚ್ಛೇಧನ ಪಡೆದಿದ್ದರು. ಕಾವ್ಯ ಮಾಧವನ್ ಸಹ ಪತಿಯಿಂದ ವಿಚ್ಛೇಧನ ಪಡೆದಿದ್ದರು.
ಕೊಚ್ಚಿಯ ಹೋಟೆಲ್ ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕಾವ್ಯ ಅವರ ಸೋದರ ಮಿಥುನ್ ಅವರು ಕನ್ಯಾದಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಆಪ್ತ ಬಂಧುಮಿತ್ರರು ಹಾಗೂ ನೀಲಶ್ವರಮ್ ಕುಟುಂಬಸ್ಥರು ಉಪಸ್ಥಿತರಿದ್ದರು.