ಮಂಗಳೂರು: ವರ್ಧನ್ ಪೈ ಎನ್ನುವ ಮಂಗಳೂರಿನ ನವ ತರುಣ ಆಕಸ್ಮಿಕವಾಗಿ ನಟನಾಗಿ ಇದೀಗ ನಟನೆಯನ್ನೇ ಆಯ್ಕೆಮಾಡಿಕೊಂಡು ಕನ್ನಡ ಕಿರುತೆರೆಯಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ.
ಮಂಗಳೂರಿನ ಖ್ಯಾತ ವಿದ್ಯಾಸಂಸ್ಥೆಗಳಲ್ಲೊಂದಾದ ಎಸ್.ಡಿ.ಎಂ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ವರ್ಧನ್ ಎಮ್.ಬಿ.ಎ ಪಧವೀಧರನಾಗಿದ್ದಾರೆ. ಅದೃಷ್ಟ ಯಾವಾಗಲೂ ಪ್ರಾಮಾಣಿಕತೆಯ ಪರವಾಗಿರುತ್ತದೆ ಮತ್ತು ಪರಿಶ್ರಮಕ್ಕೆ ಎಂದಿಗೂ ಪ್ರತಿಫಲ ತಪ್ಪಿದ್ದಲ್ಲ ಎಂದು ನಂಬಿರುವ ಕುಡ್ಲದ ಈ ಹುಡುಗ ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದು, ತನ್ನ ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರುಮಾಡುವ ಕಾತುರದಲ್ಲಿದ್ದಾರೆ.
ವರ್ಧನ್ ಇದೀಗ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕಿರುತೆರೆ ಧಾರವಾಹಿಯಾದ “ಮಂಗಳ ಗೌರಿ” ಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸೋಮವಾರದಿಂದ ಶುಕ್ರವಾರ ರಾತ್ರಿ 8.30 ರಿಂದ 9 ಗಂಟೆಗೆ ಪ್ರಸಾರವಾಗುತ್ತಿರುವ ಈ ಧಾರವಾಹಿಯೂ ಈಗಾಗಲೇ ಯಶಸ್ವಿಯಾಗಿ ತನ್ನ ಐವತ್ತು ದಿನಗಳನ್ನು ಪೂರೈಸಿದೆ. ಸಕಲೇಶಪುರ ಮೂಲದ ಶೋಭಿತಾ ಅವರು ಈ ಧಾರವಾಹಿಯಲ್ಲಿ ‘ಮಂಗಳ ಗೌರಿ’ಯಾಗಿ ನಟಿಸುತ್ತಿದ್ದು, ರಾಜು ಮತ್ತು ಬಾಲಾಜಿ ಈ ಧಾರವಾಹಿಯ ನಿರ್ಮಾಪಕರಾಗಿದ್ದು, ಖ್ಯಾತ ನಿರ್ದೇಶಕರಾದ ಶ್ರೀನಿವಾಸ ಶಿಡ್ಲಘಟ್ಟ ಅವರ ನಿರ್ದೇಶನ ಈ ಧಾರಾವಾಹಿಗಿದೆ.
ನಿವೃತ್ತ ಆರಕ್ಷಕ ಅಧೀಕ್ಷಕ ವಿಠ್ಠಲ್ ದಾಸ್ ಪೈ ಅವರ ಮಗನಾಗಿರುವ ವರ್ಧನ್, ಶೀಘ್ರವೇ ಕಿರುತೆರೆಯಿಂದ ಹಿರಿತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ. ನ್ಯೂಸ್ ಕನ್ನಡ.com ಜೊತೆ ದೂರವಾಣಿಯಲ್ಲಿ ಮಾತನಾಡಿದ ವರ್ಧನ್ ತನ್ನ ವೈಯಕ್ತಿಕ ಅಭಿಪ್ರಾಯವನ್ನು ಈ ರೀತಿ ಹಂಚಿಕೊಂಡರು. ಹಿಂದಿಯ ಧೂಮ್-2 ನೆಚ್ಚಿನ ಚಿತ್ರವಾಗಿದ್ದು, ಹೃತಿಕ್ ರೋಶನ್ ಅಚ್ಚುಮೆಚ್ಚಿನ ನಾಯಕ ನಟನಾಗಿದ್ದು, ಸುಶ್ಮಿತಾ ಮತ್ತು ಕಾಜೊಲ್ ಮೆಚ್ಚಿನ ನಾಯಕ ನಟಿಯರು. ಜೊತೆಗೆ ಹೃತಿಕ್ ಡ್ಯಾನ್ಸ್, ಆಕ್ಷನ್ ಅಂದರೆ ವರ್ಧನ್ ಗೆ ತುಂಬಾ ಇಷ್ಟ.
ಮಾಡೆಲ್ ಕೂಡ ಆಗಿರುವ ಇವರಿಗೆ ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ಮತ್ತು ಯಶ್ ಇಷ್ಟವಾಗುವ ನಟರಾಗಿದ್ದಾರೆ. ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸಿರುವ ವರ್ಧನ್ ಹೆಚ್ಚಿನ ಸಮಯವನ್ನು ಜಿಮ್ ನಲ್ಲಿ ಕಳೆಯುತ್ತಾರೆ.
ಚಿತ್ರರಂಗದಲ್ಲಿ ಇನ್ನಷ್ಟು ಸಾಧನೆ ಮಾಡುವ ಹಂಬಲದಲ್ಲಿರುವ ವರ್ಧನ್ ತನ್ನ ವಿರಾಮದ ವೇಳೆಯಲ್ಲಿ ನಟನೆಗೆ ಸಂಬಂಧ ಪಟ್ಟ ವಿಡಿಯೋಗಳನ್ನು ವೀಕ್ಷಿಸುತ್ತಾರೆ. ಕನ್ನಡ ಚಿತ್ರರಂಗದ ಖ್ಯಾತ ನಾಯಕನಟರಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವರ್ಧನ್ ಅವರ ನಟನೆ ಮತ್ತು ಪ್ರತಿಭೆಯನ್ನು ನೋಡಿ ಬೆನ್ನುತ್ತಟ್ಟಿ ಶುಭಹಾರೈಸಿದ್ದಾರೆ.
ಸಮಾಜಸೇವೆಯಲ್ಲಿಯೂ ಕೂಡ ತನ್ನನ್ನು ತಾನು ತೊಡಗಿಸಿಕೊಂಡಿರುವ ವರ್ಧನ್ “ಶೀಲ್ಢ್ ಟ್ರಸ್ಟ್” ಎನ್ನುವ ಮಂಗಳೂರಿನ ಎನ್.ಜಿ.ಒ ಒಂದರಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.