ರಾಮನಗರ: ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಖಳನಟರಿಬ್ಬರ ದುರ್ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಗೆ ರಾಮನಗರದ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿದೆ.
ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಬುಧವಾರ ತಿಪ್ಪಗೊಂಡನಕೆರೆಯಲ್ಲಿ ನಡೆದ ದುರಂತ ಪ್ರಕರಣದ ಸಂಬಂಧ ಐವರು ಆರೋಪಿಗಳ ಜಾಮೀನು ಅರ್ಜಿ ವಿಚಾರವಾಗಿ ವಾದ-ಪ್ರತಿವಾದಗಳನ್ನು ನಡೆಸಲಾಯಿತು. ವಿಚಾರಣೆಯಲ್ಲಿ ಪ್ರಕರಣದ ಮೂರನೇ ಆರೋಪಿ ಸಹ ನಿರ್ದೇಶಕ ಸಿದ್ದಾರ್ಥ್ ಎಂಬುವರಿಗೆ ಮಾತ್ರ ಜಾಮೀನು ಮಂಜೂರಾಗಿದ್ದು, ಉಳಿದ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.
ಇನ್ನು ಪ್ರಕರಣದ ಪ್ರಮುಖ ಆರೋಪಿಯಾದ ಚಿತ್ರದ ನಿರ್ಮಾಪಕ ಸುಂದರ್ ಗೌಡ ಸೇರಿದಂತೆ ಉಳಿದ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ಈ ಹಿಂದೆಯೇ ನ್ಯಾಯಾಲಯ ವಜಾಗೊಳಿಸಿ ಆದೇಶ ನೀಡಿತ್ತು. ಪ್ರಕರಣದ ಎಲ್ಲ ಆರೋಪಿಗಳಿಗೂ ಜಾಮೀನು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ನಾಯಕನಟ ದುನಿಯಾ ವಿಜಯ್ ರಾಮನಗರದ ನ್ಯಾಯಾಲಯಕ್ಕೆ ಆಗಮಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ 3ನೇ ಹೆಚ್ಚುವರಿ ನ್ಯಾಯಾಧೀಶರಾದ ಗೋಪಾಲಕೃಷ್ಣ ರೈ ಅವರು ಸಹ ನಿರ್ದೇಶಕ ಸಿದ್ದಾರ್ಥ್ ಹೊರತುಪಡಿಸಿ ಬೇರೆ ಯಾರಿಗೂ ಜಾಮೀನು ನೀಡದ ಹಿನ್ನಲೆಯಲ್ಲಿ ದುನಿಯಾ ವಿಜಯ್ ನಿರಾಶೆಯಿಂದ ವಾಪಸ್ ತೆರಳಿದರು. ನಿರ್ದೇಶಕ ಆರ್.ಚಂದ್ರು, ವಾಣಿಜ್ಯ ಮಂಡಳಿ ಕಾರ್ಯದರ್ಶಿ ರಮೇಶ್ ಸೇರಿದಂತೆ ಇನ್ನಿತರ ಕನ್ನಡ ಚಿತ್ರರಂಗದ ಪ್ರಮುಖರು ಸಹ ದುನಿಯಾ ವಿಜಿ ಜತೆ ನ್ಯಾಯಾಲಯಕ್ಕೆ ಭೇಟಿ ನೀಡಿದ್ದರು.
ಆರೋಪಿ ಸಿದ್ದಾರ್ಥ್ ಗೆ ಒಬ್ಬರು ಶ್ಯೂರಿಟಿ ಹಾಗೂ ಒಂದು ಲಕ್ಷ ವೈಯುಕ್ತಿಕ ಮುಚ್ಚಳಿಕೆ ಬರೆದುಕೊಡುವಂತೆ ನ್ಯಾಯಾಧೀಶರು ಆದೇಶಿಸಿದ್ದು, ಉಳಿದ ನಾಲ್ವರು ಆರೋಪಿಗಳ ಜಾಮೀನಿಗಾಗಿ ಆರೋಪಿ ಪರ ವಕೀಲ ಸಿದ್ದರಾಜು ನಾಳೆ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಆರೋಪಿಗಳಿಗೆ ಜಾಮೀನು ನೀಡದಂತೆ ಪ್ರಾಸಿಕ್ಯೂಷನ್ ಪರ ಸರ್ಕಾರಿ ವಕೀಲರಾದ ಡಿ. ರಘು ವಾದ ಮಂಡಿಸಿದರು.