ಬೆಂಗಳೂರು: ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಮದುವೆ ಶಾಸ್ತ್ರಗಳಿಗೆ ಚಾಲನೆ ಸಿಕ್ಕಿದ್ದು, ಡಿಸೆಂಬರ್ 9ರ ಶುಕ್ರವಾರದಂದು ಯಶ್ – ರಾಧಿಕಾ ಪಂಡಿತ್ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ ಮಂಟಪದಲ್ಲಿ ಹಸೆಮಣೆಯೇರಲಿದ್ದಾರೆ.
ಈಗಾಗಲೇ ಎರಡೂ ಕುಟುಂಬಗಳಲ್ಲಿ ಮದುವೆಯ ಸಂಭ್ರಮ ಕಳೆಗಟ್ಟಿದೆ. ವಿವಿಧ ಶಾಸ್ತ್ರಗಳು ಶುರುವಾಗಿವೆ. ಯಶ್ ಮನೆಯಲ್ಲಿ ಚಪ್ಪರದ ಪೂಜೆ ಮುಗಿದಿದೆ. ಇಂದು ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮಗಳು ನಡೆಯಲಿವೆ. ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಯಶ್ ನಿವಾಸದಲ್ಲಿ ಚಪ್ಪರ ಪೂಜೆ ನೆರವೇರಿಸಲಾಯಿತು. ಒಕ್ಕಲಿಗ ಸಂಪ್ರದಾಯದ ಪ್ರಕಾರ ಯಶ್ ಚಪ್ಪರಕ್ಕೆ ಪೂಜೆ ಮಾಡಿದರು. ಈ ವೇಳೆ ತಂದೆ ಅರುಣ್ ಕುಮಾರ್, ತಾಯಿ ಪುಷ್ಪಾ, ಸಹೋದರಿ ನಂದಿನಿ ಜತೆಗಿದ್ದರು. ಇದೇ ವೇಳೆ ರಾಧಿಕಾ ಪಂಡಿತ್ ಮನೆಯಲ್ಲೂ ಮದುವೆ ಶಾಸ್ತ್ರಗಳು ಆರಂಭಗೊಂಡಿವೆ.
ಮದುವೆಗೆ ಮುನ್ನ ನಡೆಯುವ ಮೆಹಂದಿ, ಸಂಗೀತ್ ಕಾರ್ಯಕ್ರಮಗಳ ಕುರಿತು ಗೌಪ್ಯತೆ ಕಾಪಾಡಲಾಗಿದೆ. ಬೆಂಗಳೂರಿನ ಹೊರವಲಯದ ರೆಸಾರ್ಟ್ವೊಂದರಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಲಾಗಿದೆ. ಮಧ್ಯಾಹ್ನ ಮೆಹಂದಿ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಎರಡೂ ಕುಟುಂಬದ ಹೆಣ್ಮಕ್ಕಳು ಕೈಗೆ ಮೆಹಂದಿ ಹಾಕಿಸಿಕೊಳ್ಳುತ್ತಿದ್ದಾರೆ. ಇನ್ನು ರಾತ್ರಿ ನಡೆಯುವ ಸಂಗೀತ್ ಕಾರ್ಯಕ್ರಮದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರೂ ತಮ್ಮ ಹಾಡುಗಳಿಗೆ ಹೆಜ್ಜೆ ಹಾಕುವುದರ ಜೊತೆಗೆ, ಎರಡೂ ಕುಟುಂಬದವರೂ ಹಾಡುಗಳಿಗೆ ನೃತ್ಯ ಮಾಡಲಿದ್ದಾರಂತೆ.
ಧಾರಾ ಮುಹೂರ್ತದ ದಿನ (ಡಿ.9ರಂದು) ಕುಟುಂಬದ ಆಪ್ತರು ಬಂಧುಗಳಷ್ಟೇ ಹಾಜರಿರಲಿದ್ದು ಡಿಸೆಂಬರ್ 10ರಂದು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆರತಕ್ಷತೆ ನಡೆಯಲಿದೆ.