ಬೆಂಗಳೂರು: ಸ್ಯಾಂಡಲ್ವುಡ್ ನ ಸ್ಟಾರ್ ಜೋಡಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇಂದು ಮಧ್ಯಾಹ್ನ ಅಭಿಜಿನ ಲಗ್ನದಲ್ಲಿ 12.37ಕ್ಕೆ ಯಶ್ ಅವರು ರಾಧಿಕಾಗೆ ಮಾಂಗಲ್ಯ ಧಾರಣೆ ಮಾಡಿದರು. ಈ ವೇಳೆ ಈ ಜೋಡಿಯ ವಿವಾಹ ಬಂಧನಕ್ಕೆ ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಸೇರಿದಂತೆ ಸ್ಯಾಂಡಲ್ವುಡ್ನ ಅನೇಕ ಗಣ್ಯರು ಸಾಕ್ಷಿಯಾಗಿದರು.
ಬೆಂಗಳೂರಿನ ದಿ ತಾಜ್ ವೆಸ್ಟೆಂಡ್ ಹೊಟೇಲ್ ನಲ್ಲಿ ಕಲಾ ನಿರ್ದೇಶಕ ಅರುಣ್ ಸಾಗರ್ ಅವರು ಭವ್ಯ ವೇದಿಕೆ ಸಿದ್ಧಪಡಿಸಿದ್ದು, ಗಣ್ಯರ ಸಮ್ಮುಖದಲ್ಲಿಯಶ್ ರಾಧಿಕಾ ಪಂಡಿತ್ ಅವರ ಕೈಹಿಡಿದರು. ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಬೆಳ್ಳಿಪರೆದೆಗೆ ಪಾದಾರ್ಪಣೆ ಮಾಡಿದ್ದು ಬಳಿಕ ಡ್ರಾಮಾ ಚಿತ್ರದಲ್ಲಿ ಒಂದಾಗಿದ್ದರು. ಡ್ರಾಮಾ ಚಿತ್ರದ ಯಶಸ್ಸಿನ ಬಳಿಕ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ಈ ಜೋಡಿ ಮೋಡಿ ಮಾಡಿತ್ತು. ಕಳೆದ ವರ್ಷ ಬಿಡುಗಡೆಯಾಗಿದ್ದ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರದ ಈ ಜೋಡಿ ಅಭಿನಯದ ನಾಲ್ಕನೇ ಚಿತ್ರವಾಗಿತ್ತು.
ಈ ವೇಳೆ ರಾಧಿಕಾ ಪಂಡಿತ್ ಗೋಲ್ಡ್ ಮತ್ತು ರೆಡ್ ಕಲರ್ ಸೀರೆ ಧರಿಸಿ ಸಾಂಪ್ರದಾಯಿಕ ಲುಕ್ನಲ್ಲಿ ಮಿಂಚಿದರು. ಸಾನಿಯಾ ಇಮ್ರಾನ್ ಯಶ್ ಮತ್ತು ರಾಧಿಕಾ ಪಂಡಿತ್ಗೆ ಕಾಸ್ಟ್ಯೂಮ್ಸ್ ಮತ್ತು ಜ್ಯುವೆಲ್ಲರಿ ಡಿಸೈನ್ ಮಾಡಿದ್ದರು. ಇನ್ನು ಯಶ್ ರಾಧಿಕಾ ಕಲ್ಯಾಣ ಅರ್ಚಕರಾದ ಭರತ್ ಭಟ್ ಹಾಗೂ ಮಹೇಶ್ ಭಟ್ ನಿರ್ದೇಶನದಲ್ಲಿ ನೆರವೇರಿತು. ವಿವಾಹಕ್ಕೆ ಬಂದಿದ್ದ ಗಣ್ಯರಿಗೆ ಕೊಂಕಣಿ ಹಾಗೂ ಒಕ್ಕಲಿಗ ಶೈಲಿಯ ಭೋಜನ ವ್ಯವಸ್ಥೆ ಮಾಡಲಾಗಿತ್ತು.