ಸುಡುಗಾಡಲ್ಲಿ ದಣಿದಿರುವ ದಾರಿಹೋಕನಿಗೆ ಒಂದು ಹನಿ ನೀರು ಸಿಕ್ಕರೆ ಎಷ್ಟು ಖುಶಿಯಾಗಬಹುದಲ್ವಾ? ಅದೇ ರೀತಿಯ ಖುಶಿಯನ್ನು ‘ಪಿಲಿಬೈಲ್ ಯಮುನಕ್ಕ’ ಕೂಡ ನೀಡುತ್ತದೆ.
ಹಲವಾರು ಕಳಪೆ ಸಿನೆಮಾಗಳಿಂದ ಜರ್ಝರಿತವಾದ ತುಳು ಚಿತ್ರರಂಗಕ್ಕೆ ಭರವಸೆಯ ಟಾನಿಕ್ ನೀಡುವಲ್ಲಿ ಯಮುನಕ್ಕ ಯಶಸ್ವಿಯಾಗುತ್ತಾರೆ. ಎಕ್ಕಸಕ ನಿರ್ದೇಶಕ ಸೂರಜ್ ಶೆಟ್ಟಿ ನಿರ್ದೇಶನದ ‘ಪಿಲಿಬೈಲ್ ಯಮುನಕ್ಕ’ ಹಲವಾರು ತಿಂಗಳುಗಳಿಂದ ತುಳುನಾಡಿನಾದ್ಯಂತ ಗರಿಗೆದರಿದ ಅಪಾರ ನಿರೀಕ್ಷೆಯನ್ನು ತಣಿಸಿ ಅಪರೂಪಕ್ಕೊಂದು ಒಳ್ಳೆಯ ಸಿನೆಮಾ ಎಂಬ ಖ್ಯಾತಿಯನ್ನು ಪಡೆದಿದೆಯೆಂದರೆ ತಪ್ಪಗಲಾರದು.
ರೋಹನ್ ಶೆಟ್ಟಿ ನಿರ್ಮಾಣದ ಪಿಲಿಬೈಲ್ ಯಮುನಕ್ಕ ಸಂಪೂರ್ಣ ಹಾಸ್ಯಪ್ರಧಾನ ಚಿತ್ರ. ಕಥೆಗೆ ಮತ್ತು ಯಮುನಕ್ಕ ಪಾತ್ರಕ್ಕೆ ಅಷ್ಟೇನೂ ಪ್ರಾಮುಖ್ಯತೆ ಕೊಡದ ನಿರ್ದೇಶಕರು ಕಚಗುಳಿಯಿಡುವ ಸಂಭಾಷಣೆಗಳಿಂದ ಪ್ರೇಕ್ಷಕನ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ಹುಚ್ಚ ವೆಂಕಟ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಶರಣ್ ತಮ್ಮ ಬೆಚ್ಚ ವೆಂಕಟ್ ಪಾತ್ರದಲ್ಲಿ ಶಿಳ್ಳೆ ಗಿಟ್ಟಿಸುತ್ತಾರೆ. ಇನ್ನು ನವೀನ್.ಡಿ.ಪಡೀಲ್, ಅರವಿಂದ್ ಬೋಳಾರ್, ಸತೀಶ್ ಬಂದಲೆ, ಮಂಜು ರೈ ಮೂಳೂರು, ಉಮೇಶ್ ಮಿಜಾರ್, ಶರಣ್, ಸಂದೀಪ್ ಶೆಟ್ಟಿ ಬೈಲೂರು, ಪ್ರಸನ್ನ ಶೆಟ್ಟಿ ತೆರೆಮೇಲೆ ಇದ್ದಷ್ಟು ಹೊತ್ತು ಪ್ರೇಕ್ಷಕ ಎದ್ದು-ಬಿದ್ದು ನಗುತ್ತಾನೆ. ನಾಯಕ ಪೃಥ್ವಿ ಅಂಬರ್ ನೃತ್ಯ ಮತ್ತು ಅಭಿಯದಲ್ಲಿ ಗೆದ್ದಿದ್ದಾರೆ, ನಟಿ ಸೋನಾಲ್ ಮೊಂತೇರೊ ಸ್ವಲ್ಪ ದಪ್ಪಗಿದ್ದರೆ ಚೆನ್ನಾಗಿರ್ತಿತ್ತು. ಯಮುನಕ್ಕ ಪಾತ್ರಧಾರಿ ಚಂದ್ರಮೋಹನ್ ಅವರು ಸಪ್ಪೆ ಕಾಣಿಸುತ್ತಾರೆ.
ಹಾಸ್ಯವನ್ನೇ ಪ್ರಧಾನವಾಗಿ ಬಳಸಿಕೊಂಡಿರುವ ನಿರ್ದೇಶಕರು ಯಮುನಕ್ಕ ಕಥೆಯನ್ನು ತಲುಪುವಲ್ಲಿ ಮಾತ್ರ ಎಡವುತ್ತಾರೆ. ಕ್ಲೈಮ್ಯಾಕ್ಸನ್ನು ಅವಸರವಸರವಾಗಿ ಮುಗಿಸಿರುವುದರಿಂದ ಯಮುನಕ್ಕ ಪಾತ್ರದ ಬಗ್ಗೆ ಪ್ರೇಕ್ಷಕ ಸ್ವಲ್ಪ ಚಿಂತೆಗೀಡಾಗುತ್ತಾನೆ. ಸಂಪೂರ್ಣವಾಗಿ ಹಾಸ್ಯವನ್ನೇ ಬಳಸಿಕೊಂಡಿದ್ದರೆ ಪ್ರಮಾದವಿರುತ್ತಿರಲಿಲ್ಲ ಆದರೆ ಕೊನೆಗೊಂದು ಟ್ವಿಸ್ಟನ್ನು ಕೊಡಲು ಹೋಗಿ ಅಭಾಸವಾದಂತೆ ಅನಿಸುತ್ತದೆ. ಕೆಲವೊಂದು ದೃಶ್ಯಗಳನ್ನು ಪರಭಾಷೆಯಿಂದ ಸ್ಪೂರ್ತಿ ಪಡೆದಿದ್ದರೂ ಸಮರ್ಪಕವಾಗಿ ಬಳಸಿಕೊಂಡಿರುವುದರಿಂದ ಯಾವುದೇ ರೀತಿಯ ಕೀಳರಿಮೆ ಮೂಡುವುದಿಲ್ಲ.
ಎಕ್ಕಸಕ ಚಿತ್ರದ ನಂತರ ತನ್ನ ಮೇಲಿಟ್ಟ ನಿರೀಕ್ಷೆಯನ್ನು ಉಳಿಸಿರುವ ಚಿತ್ರತಂಡ ತುಳುಚಿತ್ರರಂಗದ ಸದ್ಯದ ಪರಿಸ್ಥಿತಿಗೆ ಆಶಾವಾದದ ಕಿರಣವೇ ಸರಿ. ತಾಂತ್ರಿಕ ವರ್ಗದಲ್ಲಿ ದುಡಿದಿರುವ ಎಲ್ಲರೂ ಪರಿಪೂರ್ಣತೆ ನೀಡಿರುವುದೇ ಪ್ರೇಕ್ಷಕ ಚಿತ್ರವನ್ನು ಹೊಗಳಲು ಕಾರಣವಾಗಿದೆ. ಬದುಕಿನ ಜಂಜಾಟಗಳಿಂದ ಬಳಲುತ್ತಿರುವವರಿಗೆ ನಕ್ಕು ಹಗುರಾಗಲು ಪಿಲಿಬೈಲ್ ಯಮುನಕ್ಕ ಒಂದು ಉತ್ತಮ ಪರಿಹಾರ.