ಲೂಸಿಯಾ ಚಿತ್ರದಿಂದ ಸ್ಯಾಂಡಲ್ ವುಡ್ ಗೆ ಪರಿಚಿತವಾದ ಶ್ರುತಿ ಹರಿಹರನ್ ಪಾದರಸದ ಚುರುಕಿನಂಥ ಚೆಲುವೆಯೆಂದರೆ ಅತಿಶಯೋಕ್ತಿಯೇನಲ್ಲ. ಯಾವುದೇ ಪಾತ್ರಗಳಿಗೂ ಸಲೀಸಾಗಿ ಒಗ್ಗುವ, ಯಾವುದೇ ರೀತಿಯ ಹಮ್ಮುಬಿಮ್ಮಿಲ್ಲದೆ ಬೆಳೆದು ಕನ್ನಡದ ನಂ.1 ನಟಿ ಪಟ್ಟಕ್ಕೇರಿದ ಶ್ರುತಿ ಹರಿಹರನ್ ನ್ಯೂಸ್ ಕನ್ನಡದ ಜೊತೆ ಮಾತಿಗೆ ಸಿಕ್ಕಾಗ…
1.ಇಷ್ಟು ಸಣ್ಣ ಅವಧಿಯಲ್ಲಿ ಕನ್ನಡದ ನಂ.1 ನಟಿಯಾಗಿ ಬೆಳೆದಿದ್ದೀರಾ, ಪ್ರತಿಯೊಂದು ಸಿನೆಮಾನೂ ವಿಭಿನ್ನವಾಗಿರ್ತದೆ, ಇದೆಲ್ಲಾ ಹೇಗೆ ಸಾಧ್ಯವಾಗುತ್ತೆ ನಿಮ್ಗೆ?
ಹಾಗೇನಿಲ್ಲ. ಈವರೆಗೂ ನಾನು ಯಾವುದೇ ಕಥೆಗಳನ್ನು ಹುಡುಕ್ಕೊಂಡು ಹೋಗಿಲ್ಲ. ಆ ಕಥೆಗಳೇ ನನ್ನನ್ನು ಹುಡುಕ್ಕೊಂಡು ಬಂದಿವೆ. ನಂತರ ನಾನು ಕಥೆಯಲ್ಲಿನ ಪಾತ್ರಕ್ಕೆ 100% ಇನ್ವಾಲ್ವ್ ಆಗಿದ್ದೀನಿ. ಸಿಪಾಯಿ ನಿರ್ದೇಶಕ ರಜತ್ ಮಯೀ ನನ್ನ ಬೆಸ್ಟ್ ಫ್ರೆಂಡ್, ಸಿನ್ಮಾಗಳ ವಿಷಯದಲ್ಲಿ ಅವರು ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ.
2.ನೀವು ಸಿನ್ಮಾಗಳನ್ನು ಆಯ್ಕೆ ಮಾಡೋದರ ಬಗ್ಗೆ ಹೇಳಿ?
ನಾನು ಯಾವುದೇ ಸಿನ್ಮಾಗಳನ್ನು ಸ್ಪೆಷಲ್ಲಾಗಿ ಆಯ್ಕೆ ಮಾಡೋದಿಲ್ಲ. ಬಂದಿರುವಂಥವುಗಳು ಒಳ್ಳೆಯ ಸಿನ್ಮಾಗಳೇ ಆಗಿವೆ. ಕೆಲವೊಂದು ದುಡ್ಡಿಗೋಸ್ಕರ ಮಾಡ್ತೀನಿ, ಇನ್ನು ಕೆಲವು ಮನಸಿಗೋಸ್ಕರ. ಮೊದಮೊದಲು ಸುಮಾರು ತಪ್ಪುಗಳನ್ನು ಮಾಡಿದ್ದೇನೆ. ಅವಕಾಶಗಳಿಲ್ಲ ಅನ್ನುವ ಕಾರಣಕ್ಕೆ ಬಂದ ಸಿನ್ಮಾಗಳನ್ನು ಒಪ್ಪಿಕೊಳ್ತಿದ್ದೆ. ಅದೊಂಥರಾ ಲರ್ನಿಂಗ್ ಪ್ರೊಸೆಸ್ ಆಗಿತ್ತು. ಟೋಟಲ್ಲಾಗಿ ಹೇಳ್ಬೇಕಂದ್ರೆ ನಟನೆ ಅಂದ್ರೆ ಅದೊಂಥರಾ ಹುಚ್ಚು ನನಗೆ.
3.ಮಹಿಳಾ ಪ್ರಧಾನ ಚಿತ್ರ ಊರ್ವಿ ಬಗ್ಗೆ ಹೇಳಿ
ಊರ್ವಿ ತುಂಬಾ ಒಳ್ಳೆಯ ಸ್ಕ್ರಿಪ್ಟ್. ಅದೇ ರೀತಿ ಬ್ಯೂಟಿಫುಲ್ ಮನಸುಗಳು ಕೂಡ. ಈ ಎರಡೂ ಸಿನ್ಮಾಗಳೂ ಕನ್ನಡ ಸಿನ್ಮಾರಂಗಕ್ಕೆ ಹೊಸರೀತಿಯ ಸಿನ್ಮಾಗಳಾಗೋದ್ರಲ್ಲಿ ಡೌಟಿಲ್ಲ. ಮೊದಲು ಪುಟ್ಟಣ್ಣ ಕಣಗಾಲ್ ನಾಯಕಿ ಪ್ರಧಾನ ಪಾತ್ರಗಳನ್ನು ಸೃಷ್ಟಿ ಮಾಡ್ತಿದ್ರು ಆಮೇಲೆ ನಾಯಕಿ ಅಂದ್ರೆ ಬರೀ ಗ್ಲಾಮರ್ ಅನ್ನುವಂತಾಯ್ತು. ನಟಿಯರಿಗೆ ಬೆಲೆನೇ ಇಲ್ಲದಾಯ್ತು. ಈಗ ಮತ್ತೆ ಟ್ರೆಂಡ್ ಚೇಂಜ್ ಆಗಿದೆ. ಈ ರೀತಿಯ ಬದಲಾವಣೆ ತುಂಬಾ ಖುಶಿಯಾಗ್ತಿದೆ.
4.ಊರ್ವಿನಲ್ಲಿ ನಿಮ್ಮ ಪಾತ್ರ?
ಊರ್ವಿನಲ್ಲಿ ನಾನು ಅನಾಥೆ. ಸುಶಿಕ್ಷಿತ ಅನಾಥೆ ಹೆಣ್ಣೊಬ್ಬಳು ತನ್ನಂಥ ಹಲವಾರು ಅಸಹಾಯಕ ಹೆಣ್ಣುಮಕ್ಕಳ ಪರವಾಗಿ ನಿಂತು ಸಿಸ್ಟಂ ವಿರುದ್ಧ ಹೋರಾಡುವ ಪಾತ್ರ ನನ್ನದು.
5.ನಿಮ್ಮ ನಿರ್ಮಾಣದ ‘ಲಾಸ್ಟ್ ಕನ್ನಡಿಗ’ ಕಿರುಚಿತ್ರದ ಬಗ್ಗೆ ಹೇಳಿ?
ನಿರ್ದೇಶಕ ಮದನ್ ರಾಮ್ ವೆಂಕಟೇಶ್ ಬಂದು ಕಥೆ ಹೇಳಿದ್ರು. ತುಂಬಾ ಹಿಡಿಸ್ತು. ಫ್ರೆಂಡ್ಸ್ ಎಲ್ಲಾ ಸೇರಿ ಪ್ರೊಡ್ಸೂಸ್ ಮಾಡೋದು ಅವರ ಪ್ಲಾನ್ ಆಗಿತ್ತು. ಆದರೆ ಕಥೆ ಕೇಳಿ ಇಂಪ್ರೆಸ್ ಆದ ನಾನೇ ಪ್ರೊಡ್ಯೂಸ್ ಮಾಡಲು ಒಪ್ಕೊಂಡೆ. ಬೆಂಗ್ಳೂರಲ್ಲಿ ಕನ್ನಡ ಭಾಷೆಯ ಮೇಲಾಗುವ ದೌರ್ಜನ್ಯದ ಬಗ್ಗೆ ಸಿನ್ಮಾ ಮಾತಾಡುತ್ತೆ. ಇದರಲ್ಲಿ ಉತ್ತರ ಹೇಳಿಲ್ಲ, ಪ್ರಶ್ನೆಗಳನ್ನು ಕೇಳಿದ್ದೇವೆ. ವಷಿಷ್ಠ ಸಿಂಹ, ರಘು ದೀಕ್ಷಿತ್ ಇವರೆಲ್ಲಾ ಪೇಮೆಂಟ್ ಇಲ್ಲದೆ ದುಡಿದಿದ್ದಾರೆ.
6.ನಾಯಕಿ ಶ್ರುತಿ ಹರಿಹರನ್, ನಿರ್ದೇಶಕಿ ಪಟ್ಟ ಅಲಂಕರಿಸುವುದು ಯಾವಾಗ?
ಇನ್ನೂ ಸ್ವಲ್ಪ ಟೈಮಿದೆ. ನಿರ್ದೇಶನದ ಬಗ್ಗೆ ಯೋಚ್ನೆ ಮಾಡ್ತಿದ್ದೇನೆ. ಅದೊಂಥರಾ ತುಂಬಾ ಜವಾಬ್ದಾರಿ ಇರುವ ಕೆಲ್ಸ. ಸೋ ಅದ್ರ ಬಗ್ಗೆ ತುಂಬಾನೇ ಕಲಿಯೋದಿದೆ.
7.ಶಾರ್ಟ್ ಫಿಲಂ ಈಗ ಬೇಕಿತ್ತಾ? ಈ ಥರ ಯಾರೂ ಕೇಳಿಲ್ವಾ?
ನನಗೆ ಸುಮ್ನಿರೋದಕ್ಕೆ ಆಗಲ್ಲ. ಏನಾದ್ರೂ ಹೊಸತನ್ನು ಟ್ರೈ ಮಾಡೋಣ ಅನ್ನುವ ಆಸೆ. ಆರ್ಟ್ ಅಂದ್ರೇನೆ ಒಂಥರಾ ಹುಚ್ಚು ನಂಗೆ. ಕಲೆಗೆ ಸಂಬಂಧಪಟ್ಟ ಯಾವುದಾದ್ರೂ ಓಕೆ. ಶಾರ್ಟ್ ಫಿಲಂ, ಫೀಚರ್ ಫಿಲಂ ಅನ್ನುವ ಭೇದ ಇಲ್ಲ. ಸಿನ್ಮಾ ಅನ್ನೋದು ಕಥೆ ಹೇಳ್ಬೇಕು. ಇಲ್ಲಿ ಡ್ಯೂರೇಷನ್ ಮಾತ್ರ ಹೆಚ್ಚು ಕಮ್ಮಿ ಹೊರತು ಡೆಡಿಕೇಷನ್ ಸೇಮ್.
8.ನೀವು ಸಾಗಿಬಂದ ದಾರಿಯ ಮೇಲೊಂದು ಫ್ಲ್ಯಾಶ್ ಬ್ಯಾಕ್ ಹೋಗೋದಾದ್ರೆ…
ಕಾಲೇಜಿನಲ್ಲಿ ಓದುತ್ತಿರುವಾಗ ಎಲ್ಲಾ ಬಿಟ್ಟು ಪ್ರೊಫೆಷನಲ್ ಡ್ಯಾನ್ಸರ್ ಆಗೋಕೆ ಹೋದೆ, ಅಲ್ಲಿಂದ ಇಮ್ರಾನ್ ಸರ್ದಾರಿಯಾ ಅವರ ಟೀಂ ಸೇರಿಕೊಂಡೆ. ನಂತರ ಆ್ಯಡ್ಸ್, ಡಾಕ್ಯುಮೆಂಟರೀಸ್, ಶಾರ್ಟ್ ಮೂವೀಸ್ ನಲ್ಲಿ ಆ್ಯಕ್ಟ್ ಮಾಡಿದೆ. ನನ್ನ ಮೊದಲ ಸಿನೆಮಾ ‘ಸಿನೆಮಾ ಕಂಪನಿ’ ಅನ್ನುವ ಮಲಯಾಳಂ ಸಿನೆಮಾ. ನಂತರ ಲೂಸಿಯಾ ಸಿಕ್ತು. ಲೂಸಿಯಾ ಒಂದು ಅದ್ಭುತ ಅನುಭವ. ನಂತರ ರಾಟೆ. ರಾಟೆ ಫಿಲಂನಿಂದ ನಾನು ಕನ್ನಡ ಕಲ್ತಿರೋದು. ನನ್ನ ತಾಯಿಭಾಷೆ ತಮಿಳು. ರಾಟೆನಲ್ಲಿ ಎ.ಪಿ.ಅರ್ಜುನ್ ಮತ್ತು ಧನಂಜಯ್ ಅವರಿಂದ ಕನ್ನಡ ಕಲಿತೆ. ಸೋ ಜರ್ನಿ ಬಗ್ಗೆ ತುಂಬಾ ಖುಶಿಯಿದೆ.