ಮೈಸೂರು: ನಿವೃತ್ತರಾಗುವ ರಂಗಯಾಣ ಕಲಾವಿದರೂ ಹಾಗೂ ಸಿಬ್ಬಂದಿಯವರಿಗೆ ಆರ್ಥಿಕ ಭದ್ರತೆಯ ಬಗ್ಗೆ ವರದಿಯನ್ನ ಅನುಷ್ಟಾನಗೊಳಿಸಿಲ್ಲ ಎಂದು ಸಿಬ್ಬಂದಿ ಕಲಾವಿದರು ಕಪ್ಪು ಪಟ್ಟಿ ಧರಿಸಿ ಅನಿರ್ಧೀಷ್ಟ ಕಾಲ ಅಸಹಾಕರ ಚಳುವಳಿ ಆರಂಭಿಸಿದ್ದಾರೆ.
ರಂಗಾಯಣದ ಕಲಾವಿದರು ಮತ್ತು ಸಿಬ್ಬಂದಿ ವರ್ಗದವರಾದ ನಮ್ಮ ನಿವೃತ್ತಿಯ ನಂತರದ ಆರ್ಥಿಕ ಭದ್ರತೆ ಕೋರಿ ಸಲ್ಲಿಸಿದ ಮನವಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ರಂಗಸಮಾಜದ ಸದಸ್ಯರು ಸ್ಪಂದಿಸಿ ಕಳೆದ 2 ವರ್ಷಗಳ ಹಿಂದೆಯೇ ಈ ಸಂಬಂಧವಾಗಿ ಉಪ ಸಮಿತಿಯೊಂದನ್ನು ರಚಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ವರದಿಯೊಂದನ್ನು ಸಿದ್ಧಪಡಿಸಿ ಸಲ್ಲಿಸಿದೆಯಾದರೂ ಈ ವರದಿಯ ಅನುಷ್ಟಾನವಾಗದೆ ಹಾಗೆಯೇ ಉಳಿದಿದೆ.
ಈಗಾಗಲೇ ರಂಗಾಯಣದಿಂದ ಶ್ರೀ ಪಿ. ಗಂಗಾಧರಸ್ವಾಮಿ ಮತ್ತು ಶ್ರೀ ಶ್ರೀನಿವಾಸಭಟ್ ರವರಿಬ್ಬರು ನಿವೃತ್ತರಾಗಿ ತಮ್ಮ ಬದುಕನ್ನು ಸಾಗಿಸಲು ಸಂಕಟ ಪಡುತ್ತಿರುವುದನ್ನು ದಿನ ಬೆಳಗಾದರೆ ನೋಡುತ್ತಿದ್ದೇವೆ. ಅಲ್ಲದೆ ಈ ಹಿಂದೆ ಶ್ರೀ ಬಸವರಾಜ ಕೊಡಗೆ, ಶ್ರೀ ಜಯರಾಮ್ ಮತ್ತು ಪುಟ್ಟಣ್ಣರವರು ದೈವಾಧೀನರಾಗಿದ್ದು, ಅವರ ಕುಟುಂಬದವರಿಗೆ ಯಾವುದೇ ರೀತಿಯ ಆರ್ಥಿಕ ನೆರವು ದೊರಕಿರುವುದಿಲ್ಲ. ಆ ಕುಟುಂಬಗಳು ಅನುಭವಿಸುತ್ತಿರುವ ಪರಿಪಾಟಲುಗಳನ್ನು ನಾವು ಅಸಹಾಯಕರಾಗಿ ನೋಡುತ್ತಿದ್ದೇವೆ.
ಪ್ರಸ್ತುತ 19 ರಂದು ರಂಗಾಯಣದ ನಮ್ಮ ಸಹೋದ್ಯೋಗಿ ಕಲಾವಿದ ಶ್ರೀ ಮಂಜುನಾಥ ಬೆಳಕೆರೆಯವರು ಅಕಾಲ ಮರಣಕ್ಕೀಡಾಗಿರುವುದು ನಮಗೆ ಅಪಾರ ಅಘಾತವನ್ನುಂಟುಮಾಡಿದೆ. ನಿರುದ್ಯೋಗಿ ಪತ್ನಿ, ವಿದ್ಯಾಭ್ಯಾಸ ಮಾಡುತ್ತಿರುವ ಮಗ ಮುಂದಿನ ಬದುಕನ್ನು ಸಾಗಿಸುವುದು ಹೇಗೆಂದು ದಿಕ್ಕು ಕಾಣದೆ ಪರಿತಪಿಸುತ್ತಿದ್ದಾರೆ. ಅವರ ಕುಟುಂಬಕ್ಕೆ ಯಾವುದೇ ರೀತಿಯ ಆರ್ಥಿಕ ಆಧಾರವಿಲ್ಲ. ನಿರಂತರ 28 ವರ್ಷಗಳ ಕಾಲ ರಂಗಾಯಣ ಸಂಸ್ಥೆಯಲ್ಲಿ ದುಡಿದ ಶ್ರೀ ಮಂಜುನಾಥ ಬೆಳಕೆರೆಯವರ ಕುಟುಂಬದವರು ಇಂದು ಭವಿಷ್ಯದ ಬದುಕನ್ನು ನಿರ್ವಹಿಸುವಲ್ಲಿ ಆರ್ಥಿಕವಾಗಿ ನಿಸ್ಸಹಾಯಕರಾಗಿದ್ದಾರೆ. ಕಳೆದ 2 ವರ್ಷಗಳಿಂದಲೂ ಅನುಷ್ಠಾನಗೊಳ್ಳದೆ ಇರುವ ರಂಗ ಸಮಾಜದ ಉಪ ಸಮಿತಿಯ ವರದಿ ಅನುಷ್ಠಾನಗೊಂಡಿದ್ದಲ್ಲಿ ಈಗಾಗಲೇ ನಿವೃತ್ತಿ ಹೊಂದಿರುವವರು, ಮರಣ ಹೊಂದಿದ ಕುಟುಂಬದವರು ಒಂದಿಷ್ಟು ನಿಟ್ಟುಸಿರು ಬಿಡಲು ಅವಕಾಶವಾಗುತ್ತಿತ್ತು.
ಪ್ರಸ್ತುತ ಮುಂದಿನ ಒಂದೂವರೆ ವರ್ಷಗಳಲ್ಲಿ ರಂಗಾಯಣದ 3 ಜನ ಹಿರಿಯ ಕಲಾವಿದರು ನಿವೃತ್ತಿ ಹೊಂದುವವರಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ರಂಗಾಯಣದ ಕಲಾವಿದರು ಹಾಗೂ ಸಿಬ್ಬಂದಿ ವರ್ಗದವರಾದ ನಮಗೂ ಕೂಡ ಮುಂದಿನ ನಮ್ಮ ಭವಿಷ್ಯದ ಭದ್ರತೆ ಕುರಿತಂತೆ ಆತಂಕ ಎದುರಾಗಿದೆ. ಹೀಗಾಗಿ ನಮ್ಮ ಭವಿಷ್ಯ ಭದ್ರತೆಯನ್ನು ಕುರಿತಂತೆ ರಂಗಸಮಾಜದಲ್ಲಿ ಅನುಮೋದನೆಯಾಗಿಯೂ ಇನ್ನೂ ಜಾರಿಯಾಗದಿರುವ ಉಪಸಮಿತಿಯ ವರದಿಯನ್ನು ಅನುಷ್ಠಾನಗೊಳಿಸುವವರೆಗೂ ನಾವು ರಂಗಾಯಣದ ಎಲ್ಲಾ ಚಟುವಟಿಕೆಗಳನ್ನು ಕೈಬಿಟ್ಟು ರಂಗಾಯಣ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಅಸಹಕಾರವನ್ನು ವ್ಯಕ್ತಪಡಿಸುವ ನಿಟ್ಟಿನಲ್ಲಿ ಇಂದಿನಿಂದ ಅನಿರ್ಧೀಷ್ಟ ಕಾಲ ಅಸಹಾಕರ ಚಳುವಳಿ ರಂಗಯಾಣದಲ್ಲಿ ಆರಂಭಿಸಲಾಗಿದೆ.