ಹೈದರಾಬಾದ್: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರಿಗೆ ಸೋಮವಾರ ಹೈದರಾಬಾದಿನ ಮೌಲಾನಾ ಆಜಾದ್ ನ್ಯಾಷನಲ್ ಉರ್ದು ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ವಿಶ್ವ ವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶಾರುಖ್ ಅವರಿಗೆ ಡಾಕ್ಟರೇಟ್ ಪ್ರದಾನ ಮಾಡಿದರು.
‘ನನ್ನ ತಂದೆ ತಾಯಿಗೆ ಮೌಲಾನಾ ಆಜಾದ್ ಬಗ್ಗೆ ಅಪಾರ ಗೌರವ. ಇಂದು ಇರುತ್ತಿದ್ದರೆ ಅವರಿಗೆ ಅತೀವ ಸಂತಸವಾಗುತ್ತಿತ್ತು’ ಎಂದು ಗೌರವ ಸ್ವೀಕರಿಸಿದ ಬಳಿಕ ಮಾತನಾಡಿ, ವಿಶ್ವ ವಿದ್ಯಾಲಯಕ್ಕೆ ಧನ್ಯವಾದ ಸಲ್ಲಿಸಿದರು.
ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಜಾಮಿಯಾ ಮಿಲಿಯಾ ವಿಶ್ವ ವಿದ್ಯಾಲಯದಲ್ಲಿ ನಡೆಸಿ, ಶಿಕ್ಷಣವನ್ನು ಮಧ್ಯದಲ್ಲೇ ಬಿಟ್ಟು ತನ್ನ ಎಲ್ಲಾ ಸಮಯವನ್ನು ನಟನೆಗೆ ಮೀಸಲಿಟ್ಟಿದ್ದರು. ನಟನಾಗುವುದರಲ್ಲಿಯೇ ಹೆಚ್ಚು ಆಸಕ್ತಿ ಹೊಂದಿದ್ದ ಶಾರುಖ್, ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ದಲ್ಲೂ ಸ್ವಲ್ಪ ಕಾಲ ಕಲಿತಿದ್ದರು. ದೆಹಲಿ ವಿಶ್ವ ವಿದ್ಯಾಲಯದ ಹನ್ಸ್ರಾಜ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ಶಾರುಖ್, ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.