ಬೆಂಗಳೂರು: ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಚಿತ್ರ ‘ಪುಷ್ಪಕ ವಿಮಾನ’ ಸಿನಿರಸಿಕರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ರಮೇಶ್ ಅರವಿಂದ್ ನಟನೆಯ ನೂರನೇ ಚಲನಚಿತ್ರ ಇದಾಗಿದೆ.
‘ಪುಷ್ಪಕ ವಿಮಾನ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯಾವುದೇ ಕಟ್ ಗಳಿಲ್ಲದೆ “ಯು-ಪ್ರಮಾಣಪತ್ರ” ನೀಡಿದೆ. ಮಾತ್ರವಲ್ಲ, ‘ಸೆನ್ಸಾರ್ ಮಂಡಳಿ ಸದಸ್ಯರು ಸಿನೆಮಾ ನೋಡಿ ಮೆಚ್ಚಿ, ತಂಡದ ಶ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೊಸ ವರ್ಷಕ್ಕೆ ನಮ್ಮ ಸಿನೆಮಾ ಬಿಡುಗಡೆಯಾಗುತ್ತಿರುವುದನ್ನು ಘೋಷಿಸಲು ನಮಗೆ ಸಂತಸವಿದೆ’ ಎಂದು ‘ಪುಷ್ಪಕ ವಿಮಾನ’ ನಿರ್ಮಾಪಕರಲ್ಲಿ ಒಬ್ಬರಾದ ವಿಖ್ಯಾತ್ ಹೇಳಿದ್ದಾರೆ.
ಜನವರಿ 6 ಕ್ಕೆ ‘ಪುಷ್ಪಕ ವಿಮಾನ’ ಬಿಡುಗಡೆಯಾಗಲಿದ್ದು, ತೂಗುದೀಪ ಡಿಸ್ಟ್ರಿಬ್ಯುಟರ್ಸ್ ಈ ಸಿನೆಮಾವನ್ನು ವಿತರಿಸುತ್ತಿದ್ದಾರೆ. ಸುಮಾರು 120 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಚರಣ್ ರಾಜ್ ಅವರ ಸಂಗೀತ, ಭುವನ್ ಗೌಡ ಅವರ ಸಿನೆಮ್ಯಾಟೋಗ್ರಫಿ, ಎಸ್ ರವೀಂದ್ರನಾಥ್ ಅವರ ನಿರ್ದೇಶನ ಈ ಚಿತ್ರಕ್ಕಿದೆ.
ಜೂಹಿ ಚಾವ್ಲಾ ಅತಿಥಿ ನಟರಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಬಾಲನಟಿ ಯುವಿನಾ ಪಾರ್ಥವಿ ಮತ್ತು ರಚಿತಾ ರಾಮ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.