ಕಳೆದ ಶುಕ್ರವಾರ ಬಿಡುಗಡೆಯಾದ ‘ಕಿರಿಕ್ ಪಾರ್ಟಿ’ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ. ಶುಕ್ರವಾರ ಬೆಳಗ್ಗೆಯಿಂದಲೇ ಏರಿದ ಕಿರಿಕ್ ಕಿಕ್ಕು ಹೊಸ ವರುಷದ ಸಂಭ್ರಮದ ಕಿಕ್ಕೆದುರಲ್ಲಿಯೂ ಕಡಿಮೆಯಾಗದೆ ಸಖತ್ ಹವಾ ಕ್ರಿಯೇಟ್ ಮಾಡಿ ಯುವಜನಾಂಗವನ್ನು ಹುಚ್ಚೆಬ್ಬಿಸಿ ಚಿತ್ರಮಂದಿರಗಳಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ.
ಉಳಿದವರು ಕಂಡಂತೆ ಚಿತ್ರದ ನಂತರ ಯುವಜನತೆಯ ಡಾರ್ಲಿಂಗ್ ಆಗಿರುವ ರಕ್ಷಿತ್ ಶೆಟ್ಟರು ಏನೇ ಮಾಡಿದರೂ ಅಲ್ಲೊಂದು ಅಗಾಧವಾದ ನಿರೀಕ್ಷೆಯ ಹುತ್ತ ಬೆಳೆದಿರುತ್ತದೆ. ಹಾಗಂತ ಶೆಟ್ರೂ ಅಭಿಮಾನಿಗಳ ನಿರೀಕ್ಷೆಯನ್ನು ಯಾವತ್ತೂ ಹುಸಿಮಾಡಿದ್ದಿಲ್ಲ. ಉಳಿದವರು ಕಂಡಂತೆಯ ನಂತರ ಬಿಡುಗಡೆಯಾದ ರಿಷಭ್ ಶೆಟ್ಟಿಯವರ ನಿರ್ದೇಶನದ ರಿಕ್ಕಿ ಚಿತ್ರ ತಕ್ಕಮಟ್ಟಿಗಿದ್ದರೂ ನಂತರ ಸೆಟ್ಟೇರಿದ ಕಿರಿಕ್ ಪಾರ್ಟಿಯ ಮೇಲೆ ಅಪಾರವಾದ ನಿರೀಕ್ಷೆಗಳು ಹೆಗಲೇರಿದ್ದವು. ಎಷ್ಟೇ ನಿರೀಕ್ಷೆಗಳಿದ್ದರೂ ಕಿರಿಕ್ ಪಾರ್ಟಿ ಅಭಿಮಾನಿಗಳ ಮನದಿಂಗಿತವನ್ನು ತಣಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂಬುವುದು ಚಿತ್ರ ನೋಡಿ ಬಂದ ಪ್ರೇಕ್ಷಕನ ಪ್ರತಿಕ್ರಿಯೆ ನೋಡಿದಾಗ ತಿಳಿಯುತ್ತದೆ.
ಇಡೀ ಚಿತ್ರದಲ್ಲಿ ಕಾಲೇಜು ಹುಡುಗರ ತುಂಟಾಟ, ಒಂದಷ್ಟು ಪಾಠ, ಸಣ್ಣ ಮನಸ್ತಾಪ, ಹೃದಯಗಳ ಚೆಲ್ಲಾಟ, ಪ್ರೌಢತೆಯ ಕಣ್ಣಾಮುಚ್ಚಾಲೆಯಾಟ ಎಲ್ಲವೂ ಹದವಾಗಿ ಬೆರೆತು ಕಿರಿಕ್ ಪಾರ್ಟಿ ನೇರವಾಗಿ ಪ್ರೇಕ್ಷಕನ ಹೃದಯ ಮುಟ್ಟಿಬಿಡುತ್ತಾನೆ. ಪ್ರಮುಖ ಪಾತ್ರಧಾರಿ ಕರ್ಣ ಹಲವಾರು ಯುವಕರ ಮೂರ್ತರೂಪದಂತೆ ಕಾಣುತ್ತಾ ತನ್ನ ಕಪಿಚೇಷ್ಟೆಗಳಿಂದ ಕಚಗುಳಿಯಿಡುತ್ತಾನೆ. ಆತನ ತುಡಿತ-ಮಿಡಿತ, ತುಂಟ-ತರಲೆಗಳು ನೋಡುಗನ ಒಳಗೆ ಅವಿತಿರುವ ತುಂಟನೊಬ್ಬನನ್ನು ಬಡಿದೆಬ್ಬಿಸುತ್ತವೆ. ಕರ್ಣನ ಜೊತೆಗಿರುವ ಗೆಳೆಯರು ನಾಮ್ ಕೇ ವಾಸ್ತೆ ಆಗದೆ ಚಿತ್ರದ ಕೊನೆವರೆಗೆ ಇದ್ದು ಪರಮಾಪ್ತರಾಗುತ್ತಾರೆ. ಇನ್ನು ಕರ್ಣನ ನಿದ್ದೆಗೆಡಿಸುವ ಮುದ್ದುಬೊಂಬೆ ಶಾನ್ವಿ ಜೋಸೆಫ್ ಇದ್ದಷ್ಟು ಹೊತ್ತು ಪ್ರೇಕ್ಷಕರ ಹೃದಯಗಳಿಗೆ ಕಚಗುಳಿಯಿಡುತ್ತಾ, ಒಮ್ಮಿಂದೊಮ್ಮೆಲೇ ಮರೆಯಾಗಿ ಕಣ್ಣಾಲಿಗಳನ್ನು ತೇವಗೊಳಿಸುತ್ತಾಳೆ. ನಂತರ ಎಂಟ್ರಿಯಾಗುವ ಪ್ರಿನ್ಸಿಪಾಲರ ಮಗಳು ಆರ್ಯ ತನ್ನ ಚೆಲ್ಲಾಟಗಳಿಂದ ನೋಡುಗನನ್ನು ಹುಚ್ಚೆಬ್ಬಿಸಿಬಿಡುತ್ತಾಳೆ.
ಒಂದರ್ಥದಲ್ಲಿ ಶೆಟ್ರು ಆ್ಯಂಡ್ ಟೀಂ ತಮ್ಮದೇ ಉಳಿದವರು ಕಂಡಂತೆ ಸಿನೆಮಾವನ್ನು ಮೀರುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು. ತಾಂತ್ರಿಕತೆಯಲ್ಲಿ ಕಿಕ್ ನೀಡಿದ ನಿರ್ದೇಶಕ ರಿಷಭ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಛಾಯಾಗ್ರಾಹಕ ಕರಮ್ ಚಾವ್ಲಾ, ಸಂಕಲನಕಾರ ಸಚಿನ್ ಹೀಗೆ ಎಲ್ಲರೂ ಫುಲ್ ಮಾರ್ಕ್ಸ್ ಗಿಟ್ಟಿಸುತ್ತಾರೆ.
2016 ರ ಕೊನೆಕ್ಷಣದಲ್ಲಿ ಬಿಡುಗಡೆಯಾದ ಕಿರಿಕ್ ಪಾರ್ಟಿ ಹೊಸ ವರ್ಷದ ಆರಂಭದಲ್ಲಿ ಸ್ಯಾಂಡಲ್ ವುಡ್ ಗೊಂದು ಶುಭಶಕುನವೆಂದರೆ ಅತಿಶಯೋಕ್ತಿಯೇನಲ್ಲ. ಪರಭಾಷಾ ಯುವಜನರನ್ನೂ ಚಿತ್ರಮಂದಿರಕ್ಕೆ ಸೆಳೆದು ತಂದ ಕೀರ್ತಿಗೆ ‘ಕಿರಿಕ್ ಪಾರ್ಟಿ’ ಹೊಣೆಯಾಗುತ್ತದೆ.