ಮಡಿಕೇರಿ: ತೆಳ್ಂಗ್ ನೀರ್ ಕೊಡವ ಸಿನಿಮಾ ಬಿಡುಗಡೆ ಕಾರ್ಯಕ್ರಮ ಜ. 15ರಂದು ಬೆಳಗ್ಗೆ 10.30ಕ್ಕೆ ಮಡಿಕೇರಿಯ ಕಾವೇರಿ ಕಲಾಕ್ಷೇತ್ರ (ಟೌನ್ಹಾಲ್)ದಲ್ಲಿ ಬಿಡುಗಡೆಯಾಗಲಿದೆ.
ಯೋಧನೊಬ್ಬ ತನ್ನ ನಿವೃತ್ತಿಯ ನಂತರ ತನ್ನ ಬದುಕನ್ನು ಶೂನ್ಯದಿಂದ ಶುರು ಮಾಡಬೇಕಾದ ದುಸ್ಥಿತಿ ಹಾಗೂ ಈ ದಿನಗಳ ಜೀವನ ಶೈಲಿ ಮತ್ತು ಜಾಗತೀಕರಣವು ಕೊಡಗಿನ ಪ್ರಕೃತಿ, ಕೃಷಿ, ಸಂಸ್ಕೃತಿಯ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ತಯಾರಾದ ಚಿತ್ರವು ಜಗತ್ತಿನಾದ್ಯಂತ ಚಿತ್ರಪ್ರಿಯರ ಗಮನ ಸೆಳೆದಿದೆ ಎಂಬುದಾಗಿ ಚಿತ್ರ ನಿರ್ದೇಶಕ ಗೋಪಿ ಪೀಣ್ಯ ತಿಳಿಸಿದ್ದಾರೆ.
2015ರ ಸಾಲಿನ ಕರ್ನಾಟಕ ರಾಜ್ಯ ಸರ್ಕಾರ ಕೊಡಮಾಡುವ ಅತ್ಯುತ್ತಮ ಭಾಷಾ ಚಲನಚಿತ್ರ ಪ್ರಶಸ್ತಿ ಸಂದಿದೆ. ಅಮೆರಿಕದ ಎರಡು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಆಯ್ಕೆಗೊಂಡು ಪ್ರದರ್ಶನಗೊಂಡಿದೆ. ಲಂಡನ್ನಿನ ಪೋರ್ಟ್ಸ್ ಮೌತ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಾಲ್ಕು ವಿಭಾಗಗಳಲ್ಲಿ ಆಯ್ಕೆಗೊಂಡು ಜಗತ್ತಿನ ಸಿನಿಮಾಗಳ ಜೊತೆ ಪೈಪೋಟಿ ನೀಡಿದೆ. ಈ ಚಿತ್ರವನ್ನು ಮೊದಲ ಹಂತದಲ್ಲಿ ಮಡಿಕೇರಿಯ ಕಾವೇರಿ ಕಲಾಕ್ಷೇತ್ರ (ಟೌನ್ಹಾಲ್)ದಲ್ಲಿ ಚಿತ್ರವನ್ನು ಪ್ರದರ್ಶಿಸಲು ವ್ಯವಸ್ಥೆ ಮಾಡಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಜನವರಿ 15ರಂದು ಬೆಳಗ್ಗೆ 10:30ಕ್ಕೆ ಮೊದಲ ಪ್ರದರ್ಶನ. ಕೊಡಗಿನ ಗಣ್ಯರು ಚಿತ್ರವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲಿದ್ದಾರೆ. ಜನವರಿ 15 ರಿಂದ ಜನವರಿ 21 ಶನಿವಾರದವರೆಗೆ ಪ್ರತಿದಿನ ಎರಡು ಪ್ರದರ್ಶನಗಳು. ಬೆಳಗ್ಗೆ 10.30ಕ್ಕೆ ಮೊದಲ ಪ್ರದರ್ಶನ ಮತ್ತು ಸಂಜೆ 7ಕ್ಕೆ ಎರಡನೆಯ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.