ಮಡಿಕೇರಿ: ಲ್ಯಾಟಿಟ್ಯೂಡ್ ನಿರ್ಮಾಣದ ಆರ್ಯನ್ ಮೋಷನ್ ಪಿಕ್ಚರ್ಸ್ ಅರ್ಪಿಸುವ ‘ತಳಂಗ್ ನೀರ್’ ಕೊಡವ ಚಲನಚಿತ್ರ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಒಂದು ವಾರಗಳ ಕಾಲ ಪ್ರದರ್ಶನಗೊಳ್ಳಲಿದೆ.
ಸೇನಾ ದಿನವಾದ ಇಂದು ನಗರದ ಯುದ್ಧ ಸ್ಮಾರಕಕ್ಕೆ ಗೌರವ ಅರ್ಪಿಸಿದ ನಂತರ ಚಿತ್ರಪ್ರದರ್ಶನವನ್ನು ಆರಂಭಿಸಲಾಯಿತು. ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಮಾಜಿ ಸಚಿವ ಎಂ.ಸಿ.ನಾಣಯ್ಯ, ಕಾಂಗ್ರೆಸ್ ಪ್ರಮುಖ ಮಿಟ್ಟು ಚಂಗಪ್ಪ ಮತ್ತಿತರರು ಹಾಜರಿದ್ದು ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ತಳಂಗ್ ನೀರ್ ಕೊಡವ ಚಲನಚಿತ್ರಕ್ಕೆ ಮಾರುಕಟ್ಟೆಯ ಕೊರತೆಯಿದ್ದು, ಈ ಹಿನ್ನೆಲೆಯಲ್ಲಿ ತೊಡಗಿಸಿದ ಬಂಡವಾಳವನ್ನು ಪಡೆಯುವ ಪ್ರಯತ್ನವಾಗಿ ಬೆನಿಫಿಟ್ ಶೋ ರೂಪದಲ್ಲಿ ಚಲನಚಿತ್ರವನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ ಎಂದು ಚಿತ್ರ ನಿರ್ದೇಶಕರಾದ ಗೋಪಿ ಪೀಣ್ಯ ತಿಳಿಸಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಲ್ಲಿ ಮುಂಬರುವ ದಿನಗಳಲ್ಲಿ ವೀರಾಜಪೇಟೆ, ನಾಪೋಕ್ಲು ಮೊದಲಾದೆಡೆಗಳಲ್ಲಿಯೂ ಚಿತ್ರ ಪ್ರದರ್ಶನ ಮಾಡುವ ಉದ್ದೇಶವಿರುವುದಾಗಿ ಹೇಳಿದರು.
ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ 40 ಕ್ಕೂ ಹೆಚ್ಚಿನ ದಿನ ಕೊಡಗಿನ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ತಳಂಗ್ ನೀರ್ ಚಿತ್ರ 2015ನೇ ಸಾಲಿನ ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂದು ರಾಜ್ಯ ಪ್ರಶಸ್ತಿಯನ್ನು ಗಳಿಸಿದೆ. ಅಮೇರಿಕ ಮತ್ತು ಲಂಡನ್ ಗಳ ಅನೇಕ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಆಯ್ಕೆಗೊಂಡು ಪ್ರದರ್ಶನಗೊಂಡಿದೆ. ಕೊಡವ ಚಿತ್ರವೊಂದು ವಿದೇಶದಲ್ಲಿ ಪ್ರದರ್ಶನಗೊಂಡು ಚಿತ್ರ ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದು, ಇದಕ್ಕೆ ಕಥಾ ವಸ್ತು ಕಾರಣವೆಂದು ಅಭಿಪ್ರಾಯಪಟ್ಟರು.
ಯೋಧರ ಸಂಕಷ್ಟದ ಜೀವನದ ಕಥಾ ವಸ್ತುವನ್ನು ಹೊಂದಿರುವ ಈ ಚಿತ್ರ ಕೊಡಗಿನ ಎಲ್ಲಾ ಜನರಿಗೆ ತಲುಪಬೇಕೆನ್ನುವುದು ಚಿತ್ರ ತಂಡದ ಉದ್ದೇಶವಾಗಿದೆ. ತಾಲ್ಲೂಕು ಮಟ್ಟದಲ್ಲಿ, ಶಾಲಾ ಕಾಳೇಜುಗಳಲ್ಲೂ ಚಿತ್ರ ಪ್ರದರ್ಶನ ಮಾಡುವ ಚಿಂತನೆ ಇರುವುದಾಗಿ ಗೋಪಿ ಪೀಣ್ಯ ತಿಳಿಸಿದರು.