ಇತ್ತೀಚಿನ ದಿನಗಳಲ್ಲಿ ಒಂದರ ಹಿಂದೊಂದರಂತೆ ಬಿಡುಗಡೆಯಾಗುತ್ತಿರುವ ಬಹುತೇಕ ಕನ್ನಡ ಸಿನೆಮಾಗಳು ಪರಭಾಷಾ ಚಿತ್ರರಂಗಗಳನ್ನು ತಿರುಗಿ ನೋಡುವಂತೆ ಮಾಡುತ್ತಿರುವುದು ಸುಳ್ಳಲ್ಲ. ನಿನ್ನೆ ಬಿಡುಗಡೆಯಾದ ‘ಬ್ಯೂಟಿಫುಲ್ ಮನಸುಗಳು’ ಕೂಡ ಇಂಥದ್ದೇ ಒಂದು ಭರವಸೆಯನ್ನು ಮೂಡಿಸಿದೆ.
ತನ್ನ ಗಟ್ಟಿ ಕಥೆ ಮತ್ತು ನಿರೂಪಣೆಯಿಂದ ಸಿನೆಮಾ ಪ್ರೇಕ್ಷಕನ ಹೃದಯ ಮುಟ್ಟುತ್ತದೆ. ‘ಒಲವೇ ಮಂದಾರ, ಟೋನಿ ಮತ್ತು ಬುಲೆಟ್ ಬಸ್ಯಾ’ ಸಿನೆಮಾಗಳ ಸೃಜನಶೀಲ ನಿರ್ದೇಶಕ ಕಂ ಬರಹಗಾರ ಜಯತೀರ್ಥ ಅವರು ಪ್ರತಿ ಚಿತ್ರದಲ್ಲಿ ವಿಭಿನ್ನವಾದ ಕಥೆ ಹೇಳುತ್ತಾ ಬಂದವರು, ಈ ಬಾರಿ ಕಳೆದ ಕೆಲವು ವರುಷಗಳ ಹಿಂದೆ ಮಂಗಳೂರಿನ ಕದ್ರಿಯಲ್ಲಿರುವ ಬ್ಯೂಟಿಪಾರ್ಲರ್ ಮೇಲೆ ಪೋಲಿ ಪೋಲಿಸನೊಬ್ಬ ನಡೆಸಿರುವ ದಾಳಿಯ ಸತ್ಯಘಟನೆಯನ್ನಿಡಿದು ಪ್ರೇಕ್ಷಕ ಪ್ರಭು ಮೆಚ್ಚುವಂತೆ ತಮ್ಮದೇ ಶೈಲಿಯಲ್ಲಿ ನ್ಯಾಯಕೊಡಿಸಿ, ನೊಂದ ಹೆಣ್ಣಿನ ಪರವಾಗಿ ನಿಂತು ತನ್ನೊಳಗಿನ ಬ್ಯೂಟಿಫುಲ್ ಮನಸ್ಸಿಗೆ ಪ್ರೇಕ್ಷಕ ತಲೆಬಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಕಂದ ಎಂಟರ್ ಟೇನ್ ಮೆಂಟ್ ಮೂಲಕ ಎಸ್.ಪ್ರಸನ್ನ ಮತ್ತು ಎಸ್. ಶಶಿಕಲಾ ಬಾಲಾಜಿ ನಿರ್ಮಾಣದ ಬ್ಯೂಟಿಫುಲ್ ಮನಸುಗಳಿಗೆ ಸತೀಶ್ ನೀನಾಸಂ, ಶ್ರುತಿ ಹರಿಹರನ್, ಅಚ್ಯುತ್ ಕುಮಾರ್, ತಬಲಾನಾಣಿ ಮತ್ತು ಇನ್ನಿತರ ಪ್ರತಿಭಾನ್ವಿತ ‘ಬ್ಯೂಟಿಫುಲ್’ ಕಲಾವಿದರು ತಂತಮ್ಮ ಪಾತ್ರಗಳಿಗೆ ಸಂಪೂರ್ಣ ನ್ಯಾಯ ನೀಡಿದ್ದಾರೆನ್ನುವುದರಲ್ಲಿ ಎರಡು ಮಾತಿಲ್ಲ. ತಿಳಿ ಹಾಸ್ಯದೊಂದಿಗೆ ಸಾಗುವ ಚಿತ್ರವು ಮಧುರವಾದ ಪ್ರೇಮದ ಘಮಲಿನ ಸ್ಪರ್ಶದೊಂದಿಗೆ ಹೆಣ್ಣಿನ ಅಸಾಹಯಕತೆಯನ್ನು ತೆರೆದಿಡುತ್ತಾ, ಮಾಧ್ಯಮಗಳ ಹುಚ್ಚುತನವನ್ನು ಬಯಲಿಗೆಳೆಯುತ್ತಾ ಹೆಣ್ಣುಮಗಳ ಮೌಲ್ಯವನ್ನು ತಿಳಿಸುವುದರೊಂದಿಗೆ ಕೊನೆಯಾಗುತ್ತದೆ. ರಘುದೀಕ್ಷಿತ್ ಅವರ ಕಂಠಸಿರಿಯಲ್ಲಿ ಸನ್ನಿವೇಶಕ್ಕನುಗುಣವಾಗಿ ಬಳಕೆಯಾಗಿರುವ ಶಿಶುನಾಳ ಶರೀಫರ ‘ಸೋರುತಿಹುದು ಮನೆಯ ಮಾಳಿಗಿ’ ಹಾಡು ಮುಗ್ಧನಂತೆ ಕೂತಿರುವ ಪ್ರೇಕ್ಷಕನಿಗೂ ಪಾಠ ಹೇಳಿ ಎಚ್ಚರಿಸುತ್ತದೆ.
ತಾಂತ್ರಿಕ ವರ್ಗದಲ್ಲಿ ದುಡಿದಿರುವ ಬ್ಯೂಟಿಫುಲ್ ಮನಸುಗಳಾದ ಸಂಗೀತ ನಿರ್ದೇಶಕ ಬಿ.ಜೆ.ಭರತ್, ಛಾಯಾಗ್ರಾಹಕ ಕಿರಣ್ ಹಂಪಾಪುರ, ಸಂಕಲನಕಾರ ಕೆ.ಎಂ.ಪ್ರಕಾಶ್ ಮತ್ತು ಇಡೀ ತಂಡಕ್ಕೆ ಅತ್ಯುತ್ತಮ ಸಿನಮಾವನ್ನು ನೀಡಿ ಮತ್ತಷ್ಟು ಹೊಸ ಸಿನೆಮಾಗಳಿಗೆ ಸ್ಫೂರ್ತಿಯಾಗಿರುವುದಕ್ಕೆ ‘ಥ್ಯಾಂಕ್ಸ್’ ಹೇಳಲೇಬೇಕು.