ಮೈಸೂರಿನ ಬೋಗಾದಿ ರಸ್ತೆಯಲ್ಲಿರುವ ಧ್ವನ್ಯಾಲೋಕದಲ್ಲಿ ಕನ್ನಡ ಒಕ್ಕೂಟದ ವತಿಯಿಂದ ಆಯೋಜಿಸಲಾದ ಜಯಂತ ಕಾಯ್ಕಿಣಿ ಅವರ ಜೊತೆ ಒಂದಿಷ್ಟು ಹೊತ್ತು ಕಾರ್ಯಕ್ರಮದಲ್ಲಿ, ಗ್ರಂಥಾಲಯಗಳ ಬದಲು ಜಿಮ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಥೆಗಾರ, ಕವಿ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.
ಇಂದು ಗ್ರಂಥಾಲಯಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದರ ಬದಲು ಜಿಮ್ ಗಳ ಸಂಖ್ಯೆ ಹೆಚ್ಚುತ್ತಿದೆ. ಬುದ್ಧಿಮತ್ತೆಯನ್ನು ಹೆಚ್ಚಿಸಿಕೊಳ್ಳುವುದಕ್ಕಿಂತ ನಾವಿಂದು ಫಿಟ್ ನೆಸ್ ಕಡೆ ಗಮನ ನೀಡುತ್ತಿದ್ದೇವೆ. ಫಿಟ್ ನೆಸ್ ಜೊತೆ ಸಾಹಿತ್ಯಾಸಕ್ತಿಯನ್ನೂ ಬೆಳೆಸಿಕೊಳ್ಳುವ ಕೆಲಸವಾಗಬೇಕು. ಸಾಹಿತ್ಯ ನಮ್ಮನ್ನು ಬೇರೆಯ ಲೋಕಕ್ಕೇ ಕೊಂಡೊಯ್ಯಲಿದೆ. ಮಾನಸಿಕವಾಗಿ ನೆಮ್ಮದಿಯನ್ನು ನೀಡಲಿದೆ ಎಂದು ತಿಳಿಸಿದರು.
ಸಾಹಿತ್ಯ ಸಮ್ಮೇಳನ ಓದುಗರ ಸಮ್ಮೇಳನವಾಗಿರಬೇಕು. ಓದುಗನಾಗದೇ ಲೇಖಕನಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ಸಾಹಿತಿಯಲ್ಲೂ ಒಬ್ಬ ಓದುಗ ಇರುತ್ತಾನೆ ಎಂದರು. ಮೈಸೂರು ಮತ್ತು ಧಾರವಾಡ ಮಾನಸಿಕ ತೀರ್ಥ ಕ್ಷೇತ್ರಗಳಾಗಿದ್ದು, ಇಲ್ಲಿ ಬಂದಾಗ ಮನಸ್ಸು ಪ್ರಶಾಂತಗೊಳ್ಳುತ್ತದೆ ಎಂದು ತಿಳಿಸಿದರು.
ಸಾಹಿತ್ಯದ ಮೂಲ ಉದ್ದೇಶ ಚಿಂತನಾಶೀಲತೆಯನ್ನು ಬೆಳೆಸುವಂತಿರಬೇಕು. ಜನರನ್ನು ಜಾಗೃತಗೊಳಿಸುವಂತಿರಬೇಕು. ಪ್ರಶಸ್ತಿ, ಪುರಸ್ಕಾರಗಳಿಗೋಸ್ಕರ ಸಾಹಿತ್ಯವನ್ನು ರಚಿಸಬಾರದು. ಪ್ರಶಸ್ತಿ-ಪುರಸ್ಕಾರವನ್ನು ಪಡೆಯುವುದೇ ಮೂಲ ಉದ್ದೇಶವೂ ಆಗಿರಬಾರದು. ಸಮಾಜಕ್ಕೇನಾದರೂ ಕೊಡುಗೆಯನ್ನು ನೀಡಬೇಕು ಎಂದು ಸಲಹೆ ನೀಡಿದರು.
ಮುಂಬೈ ಶಹರಿನಲ್ಲಿ ಜಾತಿ, ಮತ, ಪಂಥಗಳ ಗಲೀಜಿಲ್ಲ. ಮನುಷ್ಯತ್ವಕ್ಕೆ ಉತ್ತಮ ವಾತಾವರಣವಿದೆ. ಅದರಿಂದ ನನಗೆ ಮುಂಬೈ ಇಷ್ಟ ಎಂದರು.
ಈ ಸಂದರ್ಭದಲ್ಲಿ ಒಕ್ಕೂಟದ ಶುಭಾಸಂಜಯ್ ಅರಸ್ ಉಪಸ್ಥಿತರಿದ್ದರು.