ಮೈಸೂರು: ಬೆಂಗಳೂರು ಮತ್ತು ಮೈಸೂರಿನಲ್ಲಿ ಏಕದಲ್ಲಿ ಆಯೋಜಿಸಿದ್ದ 9ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ (ಬಿಫೆಸ್) ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಅರಮನೆ ಮುಂದೆ ಫೆ. 9 ರಂದು ಸಂಜೆ 6.30 ನಡೆಯಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಉಪ ನಿರ್ದೇಶಕರ ಎಸ್.ವಿ. ಲಕ್ಷ್ಮಿನಾರಾಯಣ್ ಅವರು ತಿಳಿಸಿದ್ದಾರೆ.
ಗೌರವಾನ್ವಿತ ರಾಜ್ಯಪಾಲರಾದ ಶ್ರೀ ವಜುಭಾಯಿ ರುಡಾಭಾಯಿ ವಾಲಾ ಅವರು ಸಿನಿಮೋತ್ಸವದ ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಗಳಾಗಿ ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ತನ್ವೀರ್ ಸೇಠ್, ಪ್ರವಾಸೋದ್ಯಮ ಸಚಿವರಾದ ಪ್ರಿಯಾಂಕ್ ಖರ್ಗೆ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಎಂ.ಜೆ. ರವಿಕುಮಾರ್, ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಎಂ.ಕೆ.ಸೋಮಶೇಖರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ. ಗೋವಿಂದು, ಅವರು ಭಾಗವಹಿಸುವರು.
ಮನರಂಜನಾ ಕಾರ್ಯಕ್ರಮ: ಖ್ಯಾತ ನೃತ್ಯ ಕಲಾವಿದರಾದ ನಿರುಪಮಾ ರಾಜೇಂದ್ರ ಹಾಗೂ ತಂಡದವರಿಂದ ಸಿನಿಮೋತ್ಸವದ ಅಂಗವಾಗಿ ನೃತ್ಯ ರೂಪಕ ಹಾಗೂ ಹೆಸರಾಂತ ಚಲನಚಿತ್ರ ಕಲಾವಿದರ ತಂಡಗಳಿಂದ ಮನರಂಜನಾ ಕಾರ್ಯಕ್ರಮಗಳನ್ನು ಸಿನಿಮೋತ್ಸವದ ಅಂಗವಾಗಿ ಏರ್ಪಡಿಸಲಾಗಿದೆ.
ಕಳೆದ ವರ್ಷ ಆಯೋಜಿಸಿದ್ದ 8ನೇ ಅಂತಾರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕದ ಇತಿಹಾಸ ಹಾಗೂ ಪರಂಪರೆ ಬಿಂಬಿಸುವ ನೃತ್ಯ ರೂಪಕ ಪ್ರದರ್ಶಿಸಿದ್ದ ನಿರುಪಮಾ ರಾಜೇಂದ್ರ ಅವರು, ಈ ಸಮಾರೋಪ ಕಾರ್ಯಕ್ರಮದಲ್ಲಿ `ಸಿಲ್ವರ್ ಟು ಸಿಲಿಕಾನ್’ ಹಾಗೂ `ಸಂಭ್ರಮ’ ನೃತ್ಯ ರೂಪಕ ಪ್ರಸ್ತುತಿ ಪಡಿಸುವರು. ಇದಲ್ಲದೆ, ಚಲನಚಿತ್ರ ನಾಯಕ ನಟ ನಟಿಯರು ಮನರಂಜನಾ ಕಾರ್ಯಕ್ರಮ ನೀಡುವರು.
ನಾಲ್ಕು ವಿಭಾಗಗಳಲ್ಲಿ 10 ಪ್ರಶಸ್ತಿಗಳು: ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಒಟ್ಟು 18 ವಿಭಾಗಗಲ್ಲಿ 240 ಚಿತ್ರಗಳು ಪ್ರದರ್ಶನ ಕಂಡಿದ್ದು, ಕನ್ನಡದ 40 ಚಿತ್ರಗಳೂ ಸೇರಿವೆ. ಈ ಪೈಕಿ 4 ನಾಲ್ಕು ವಿಭಾಗಗಳಲ್ಲಿ ಒಟ್ಟು 10 ಪ್ರಶಸ್ತಿಗಳನ್ನು ತೀರ್ಪುಗಾರರು ಸಮಾರೋಪ ಸಮಾರಂಭದಲ್ಲಿ ಪ್ರಕಟಿಸಲಿದ್ದು, ಗೌರವಾನ್ವಿತ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡುವರು.
ಕನ್ನಡ ಸಿನಿಮಾಗಳ ವಿಭಾಗ ಹಾಗೂ ಕನ್ನಡ ಜನಪ್ರಿಯ ಸಿನಿಮಾಗಳ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಕನ್ನಡ ಸಿನಿಮಾಗಳ ವಿಭಾಗದಲ್ಲಿ ಅತ್ಯುತ್ತಮ ಮೊದಲ, ದ್ವಿತೀಯ ಹಾಗೂ ತೃತೀಯ ಚಿತ್ರಗಳ ಜೊತೆಗೆ 1 ಅಂತಾರಾಷ್ಟ್ರೀಯ ಜ್ಯೂರಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕನ್ನಡ ಜನಪ್ರಿಯ ಸಿನಿಮಾಗಳಲ್ಲಿ ಅತ್ಯುತ್ತಮ ಮೊದಲ, ದ್ವಿತೀಯ ಹಾಗೂ ತೃತೀಯ ಸಿನಿಮಾ ಪ್ರಶಸ್ತಿ ನೀಡಲಾಗುತ್ತದೆ.
ಭಾರತೀಯ ಸಿನಿಮಾ ವಿಭಾಗದಲ್ಲಿ 2 ಅತ್ಯುತ್ತಮ ಜ್ಯೂರಿ ಪ್ರಶಸ್ತಿ ಹಾಗು 1 ವಿಮರ್ಶಕರ ಪ್ರಶಸ್ತಿ ನೀಡಲಾಗುತ್ತದೆ. ಇದಲ್ಲದೆ ಏಷ್ಯಾ ವಿಭಾಗದಲ್ಲಿ 1 ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗುತ್ತದೆ.