‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಮೂಲಕ ಸ್ಯಾಂಡಲ್ ವುಡ್ಡಿನಲ್ಲಿ ತಮ್ಮದೇ ಹೊಸ ಖಾತೆಯನ್ನು ಶುರುಮಾಡಿದ ಸುನಿ, ಸಿನಿಮಾ ಹೆಸರಿನಂತೆ ತಮ್ಮ ವೈಯಕ್ತಿಕ ಬದುಕಿನಲ್ಲಿಯೂ ತೀರಾ ಸಿಂಪಲ್ ಆಗಿರುವ ವ್ಯಕ್ತಿ. ಯಾವುದೇ ಹಮ್ಮು-ಬಿಮ್ಮಿಲ್ಲದೆ ಎಲ್ಲರ ಜೊತೆ ಬೆರೆಯುವ ಸುನಿ ನಾಲ್ಕು ವರುಷದ ಹಿಂದೆ ತಮ್ಮ ‘ರಿಯಲ್’ ಬದುಕಿನ ಲವ್ ಸ್ಟೋರಿಯನ್ನು ಸೌಂದರ್ಯ ಗೌಡ ಎಂಬವರ ಜೊತೆ ಶುರುಮಾಡಿದ್ದರು.
ವೃತ್ತಿಯಲ್ಲಿ ವಕೀಲೆಯಾಗಿರುವ ಸೌಂದರ್ಯ ಗೌಡ ಸುನಿಯ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ಗೆ ಮನಸೋತ ಹುಡುಗಿ. ಫೆಬ್ರವರಿ 17 ರಂದು ಮಲೆನಾಡಿನಲ್ಲಿ ಹಸೆಮಣೆಯೇರುವ ಮೂಲಕ ತಮ್ಮ ನಾಲ್ಕು ವರುಷದ ಪ್ರೀತಿಗೆ ಹೊಸ ಭಾಷ್ಯ ಬರೆದಿರುವ ಸಿಂಪಲ್ ಸುನಿ ಬಾಳಿಗೆ ಸೌಂದರ್ಯ ಗೌಡ ‘ಚಮಕ್’ ನೀಡಲಿದ್ದಾರೆ. ತಮ್ಮ ನಿರ್ದೇಶನದ ನಾಲ್ಕನೇ ಸಿನಿಮಾ ‘ಆಪರೇಷನ್ ಆಲಮೇಲಮ್ಮ’ಳನ್ನು ತೆರೆ ಮೇಲೆ ತರುವ ತರಾತುರಿಯಲ್ಲಿರುವ ಸುನಿ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಕಿರಿಕ್ ಗರ್ಲ್ ರಶ್ಮಿಕಾಗೆ ‘ಚಮಕ್’ ನಿರ್ದೇಶಿಸಲಿದ್ದಾರೆ. ಹೊಸಬಾಳಿನ ಹೊಸ್ತಿಲಲ್ಲಿರುವ ‘ಸಿಂಪಲ್ ಜೋಡಿ’ ದಾಂಪತ್ಯ ಜೀವನ ಬಂಗಾರವಾಗಲೆಂದು ‘ನ್ಯೂಸ್ ಕನ್ನಡ’ ಹರಸುತ್ತದೆ.