ಕೊಪ್ಪಳ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದ ಕೆರೆ ಅಭಿವೃದ್ಧಿಗೆ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ರಾಕಿಂಗ್ ಸ್ಟಾರ್ ಯಶ್ ಚಾಲನೆ ನೀಡಿದರು.
ಯಶ್ ಜತೆಗೆ ಪತ್ನಿ ರಾಧಿಕಾ ಪಂಡಿತ್ ಕೂಡ ಸಾಥ್ ನೀಡಿದ್ದು, ರಾಜ್ಯಾದ್ಯಂತ ಕೆರೆ ಅಭಿವೃದ್ಧಿ ಮಾಡುವುದು ನನ್ನ ಕನಸು. ಇದಕ್ಕಾಗಿ ತಲ್ಲೂರು ಕೆರೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿದ್ದೇನೆ. ಈ ಕಾರ್ಯವನ್ನು ಆತ್ಮ ಸಂತೋಷಕ್ಕಾಗಿ ಮಾಡುತ್ತಿದ್ದೇನೆ ಎಂದು ನಟ ಯಶ್ ಹೇಳಿದರು.
ನಾನು ಯಾರನ್ನು ದೂಷಿಸುವುದಿಲ್ಲ. ಕೆರೆ ಅಭಿವೃದ್ಧಿಗೆ ಕೋಟ್ಯಂತರ ರೂ. ಸರ್ಕಾರದಿಂದ ಅನುದಾನ ಬರುತ್ತದೆ. ಆ ಅನುದಾನದ ಹಣ ಏನಾಯ್ತು? ಎಂದು ಪ್ರಶ್ನಿಸುವ ಮನಸ್ಸು ಎಲ್ಲರಿಗೂ ಬರಬೇಕು. ಯಾವುದೇ ಸರ್ಕಾರವನ್ನು ದೂಷಿಸುತ್ತಿಲ್ಲ. ಬದಲಾಗಿ ವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದೇನೆ. ಯಾರು ಏನೇ ಅಂದುಕೊಂಡರು ತಲೆಕೆಡಿಸಿಕೊಳ್ಳುವುದಿಲ್ಲ. ಕೆರೆ ಅಭಿವೃದ್ಧಿಗೆ ಜನರ ಸಹಭಾಗಿತ್ವ ಅಗತ್ಯ ಎಂದು ಹೇಳಿದ್ದಾರೆ.