ಲಕ್ನೋ ಟು ಬೆಂಗಳೂರು.. ಕೇಳೋದಕ್ಕೆ ಯಾವುದೋ ಬಸ್ ನ ಬೋರ್ಡ್ ಇದ್ದಂತೆ ಇರುವ ಇದು ಭಾರೀ ಭರವಸೆಯನ್ನಿಟ್ಟುಕೊಂಡು ತಯಾರು ಮಾಡುತ್ತಿರುವ ಚಿತ್ರ.
ಸ್ಯಾಂಡಲ್ವುಡ್ ನಲ್ಲಿ ಹವಾ ಮೂಡಿಸಿ ಗಟ್ಟಿಯಾಗಿ ನೆಲೆಯೂರಿ ಪ್ರೇಕ್ಷಕರ ಸೆಳೆಯಬೇಕೆಂದೇ ಈ ಚಿತ್ರವನ್ನು ತಯಾರು ಮಾಡಲಾಗುತ್ತಿದೆ. ಬಹಳಷ್ಟು ಚಿತ್ರಗಳು ತೆರೆಕಾಣುತ್ತಿರುವ ಮಧ್ಯೆ ಒಂದಷ್ಟು ಹೊಸತನದ ಚಿತ್ರವನ್ನು ತರುವ ಚಿಂತನೆ ಲಕ್ನೋ ಟು ಬೆಂಗಳೂರು ಚಿತ್ರ ತಂಡದ ಚಿಂತನೆಯಾಗಿದೆ.
ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ಶಿವರಾತ್ರಿಯಂದು ಬಿಡುಗಡೆ ಮಾಡಲಾಗಿದೆ. ಎಲ್ಲವೂ ಸರಿ ಹೋದರೆ ಏಪ್ರಿಲ್ ನಿಂದಲೇ ಚಿತ್ರೀಕರಣ ಆರಂಭಮಾಡುವ ಬಗ್ಗೆ ಚಿತ್ರತಂಡ ಯೋಚಿಸುತ್ತಿದೆ. ಕಿರುತೆರೆಯಲ್ಲಿ ಕ್ರೇಜ್ ಹುಟ್ಟು ಹಾಕಿರುವ ವಿಜಯ್ ಸೂರ್ಯ ನಾಯಕ ಮತ್ತು ಕೀರ್ತಿ ಲಕ್ಷ್ಮಿ ಚಿತ್ರದ ಹೈಲೈಟ್ಸ್ ಆಗಿದ್ದಾರೆ. ಅಂದರೆ ಇವರೇ ಸಿನಿಮಾದ ನಾಯಕ ನಾಯಕಿ. ಇವರ ಸುತ್ತ ಸುತ್ತುವ ರೋಮ್ಯಾಂಟಿಕ್ ಲವ್ ಸ್ಟೋರಿಯೇ ಲಕ್ನೋ ಟು ಬೆಂಗಳೂರು ಚಿತ್ರದ ತಿರುಳಾಗಿದೆ.
ಈ ಹಿಂದೆ ಬ್ರಹ್ಮ ವಿಷ್ಣು ಮಹೇಶ್ವರ ಚಿತ್ರ ನಿರ್ದೇಶಿಸಿದ್ದ ಸ್ವರೂಪ್ ಅವರೇ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಅವರು ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾಕ್ಕೆ ಸಂಬಂಧಿಸಿದಂತೆ ಫೋಟೋ ಶೂಟ್ ಅನ್ನು ಭುವನ್ ಗೌಡ ಮಾಡಿದ್ದಾರೆ. ಮೈ ಫಿಲಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿನಿಮಾ ತಯಾರಾಗುತ್ತಿದೆ. ಆನಂದ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ವಿನೀತ್ ರಾಜ್ ಅವರು ಸಂಗೀತ ನಿರ್ದೇಶಕರಾಗಿದ್ದಾರೆ. ಉಳಿದಂತೆ ತಾರಾಗಣ ಮತ್ತು ತಾಂತ್ರಿಕ ವರ್ಗದ ಆಯ್ಕೆ ಇನ್ನಷ್ಟೆ ಆಗಬೇಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಏಪ್ರಿಲ್ ತಿಂಗಳಿನಿಂದಲೇ ಚಿತ್ರಕರಣಕ್ಕೆ ಚಾಲನೆ ಸಿಗಲಿದೆ ಎನ್ನುತ್ತಿದೆ ಚಿತ್ರತಂಡದ ಮೂಲಗಳು. ಹೊಸ ಸಿನಿಮಾ ಯಾವ ರೀತಿಯಲ್ಲಿ ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡುತ್ತದೆ ಎಂಬುದನ್ನು ಕಾದು ನೋಡುವ ಸರದಿ ಪ್ರೇಕ್ಷಕರದ್ದಾಗಿದೆ.