ಮೈಸೂರು: ನಗರದ ಉಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕಿದ್ದ ಡಬ್ಬಿಂಗ್ ಚಿತ್ರ ಸತ್ಯದೇವ್ ಐಪಿಎಸ್ ಸಿನಿಮಾ ಪೊಲೀಸರು ಮಧ್ಯಪ್ರವೇಶದಿಂದ ರಾತ್ರೋರಾತ್ರಿ ಚಿತ್ರ ಮಂದಿರದಿಂದ ಎತ್ತಂಗಡಿಯಾಗಿದ್ದು ನಗರದ ಇತರ ಚಿತ್ರ ಮಂದಿರಗಳಲ್ಲಿ ಈ ಚಿತ್ರ ಪ್ರದರ್ಶನವನ್ನ ರದ್ದು ಪಡಿಸಲಾಗಿದೆ.
ಡಬ್ಬಿಂಗ್ ಚಿತ್ರ ಸತ್ಯದೇವ್ ಐಪಿಎಸ್ ಬಿಡುಗಡೆಗೆ ಕನ್ನಡಪರ ಹಾಗೂ ಚಿತ್ರರಂಗದ ಹಲವರ ವಿರೋಧದ ನಡುವೆ ಇಂದು ಬಿಡುಗಡೆ ಆಗಲು ಸಿದ್ದವಾಗಿತ್ತು. ಮೈಸೂರಿನ ಉಮಾ ಚಿತ್ರಮಂದಿರದಲ್ಲಿ ನಿನ್ನೆ ರಾತ್ರಿಯೇ ಈ ಚಿತ್ರದ ಪ್ಲೆಕ್ಸನ್ನ ಚಿತ್ರಮಂದಿರದಲ್ಲಿ ಹಾಕಲಾಗಿತ್ತು.
ಇದನ್ನ ತಿಳಿದ ಕನ್ನಡಪರ ಸಂಘಟನೆಗಳು ರಾತ್ರೋರಾತ್ರಿ ಪ್ರತಿಭಟನೆಗೆ ಮುಂದಾಗುತ್ತಿದಂತೆ ಮಧ್ಯಪ್ರವೇಶಿಸಿದ ಲಷ್ಕರ ಪೊಲೀಸರು ಥಿಯೇಟರ್ ಮಾಲೀಕರಿಗೆ ಈ ಚಿತ್ರವನ್ನ ಸ್ಥಗಿತಗೊಳಿಸುವಂತೆ ತಿಳಿಸಿದರು. ಇದಕ್ಕೆ ಒಪ್ಪಿದ ಚಿತ್ರಮಂದಿರದ ಮಾಲೀಕರು ಸತ್ಯದೇವ್ ಐಪಿಎಸ್ ಚಿತ್ರದ ನಾಲ್ಕು ಪ್ರದರ್ಶವನ್ನ ರದ್ದುಗೊಳಿಸಿದರು.
ಏಕಾಂಗಿ ಪ್ರತಿಭಟನೆ:
ಡಬ್ಬಿಂಗ್ ಚಿತ್ರದಿಂದ ಕನ್ನಡ ಚಿತ್ರರಂಗದ ಕಲಾವಿದರಿಗೆ ಕಷ್ಟವಾಗಲಿದ್ದು, ಇದರಿಂದ ಕರ್ನಾಟಕಕ್ಕೆ ಡಬ್ಬಿಂಗ್ ಚಿತ್ರ ಬೇಡ ಎಂದು ಆಗ್ರಾಹಿಸಿ ಮೈಸೂರು ಮಹಾನಗರ ಪಾಲಿಕೆಯ ಸದಸ್ಯ ಸ್ನೇಕ್ ಶ್ಯಾಮ್ ಅರಮನೆ ಮುಂಭಾಗದ ರಾಜ್ ಕುಮಾರ್ ಉದ್ಯಾನವನದಲ್ಲಿರುವ ರಾಜಕುಮಾರ್ ಪ್ರತಿಮೆಯ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು.