ಮೈಸೂರು: ಮೈಸೂರಿನ ಜೀವಿತ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ತಯಾರಾಗಿದ್ದ ದಕ್ಷಯಜ್ನ ಚಿತ್ರವು ಹೆಸರಾಂತ ಐಎಸ್ಎಫ್ಎಫ್ಐ ಇಂಡಿಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ಇದೇ ತಿಂಗಳ ಮಾರ್ಚ್ 17, 18 ಮತ್ತು 19 ರಂದು 3 ದಿನಗಳ ಕಾಲ ವಾರಣಾಸಿಯಲ್ಲಿ ನಡೆಯುವ ಈ ಚಿತ್ರೋತ್ಸವದಲ್ಲಿ 18 ರಂದು ಸಂಜೆ 4:15ಕ್ಕೆ, ತಾಜ್ ವಾರಣಾಸಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಈ ಚಿತ್ರವನ್ನ ಹೆಚ್, ಡಿ, ಕೋಟೆ ತಾಲ್ಲೂಕಿನ ಜಿ,ಬಿ, ಸರಗೂರಿನ ಅಪ್ಪಟ ಗ್ರಾಮೀಣ ಪ್ರತಿಭೆ ಸಿದ್ದೇಗೌಡ ಜಿ,ಬಿ,ಎಸ್, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿ ಯಶಸ್ವಿಯಾಗಿ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಎಸ್. ಬಿ. ಶಿವುರವರ ಬಂಡವಾಳ, ಪ್ರಕಾಶ್ ಚಿಕ್ಕಪಾಳ್ಯರವರ ಕಲಾ ನಿರ್ದೇಶನ ಮತ್ತು ರಾಮು ನರಹಳ್ಳಿಯವರ ಛಾಯಾಗ್ರಹಣವಿದೆ. ಚಿತ್ರದ ಬಹುತೇಕ ಕಲಾವಿದರೆಲ್ಲ ರಂಗಭೂಮಿ ಹಿನ್ನೆಲೆಯುಳ್ಳವರಾಗಿರುವುದು ಈ ಚಿತ್ರದ ಇನ್ನೊಂದು ವಿಶೇಷ.
ಈಗಾಗಲೇ ಚಿತ್ರ ಬಿಡುಗಡೆಯಾಗಿ ಅಪಾರ ಜನಮನ್ನಣೆಗಳಿಸಿತ್ತು. ಪ್ರೇಕ್ಷಕರು ಅಲ್ಲದೆ ಮಾಧ್ಯಮದವರು ಕೂಡ ಚಿತ್ರವನ್ನ ನೋಡಿ ಚಿತ್ರವನ್ನ ಬಹುವಾಗಿ ಮೆಚ್ಚಿಕೊಂಡಿದ್ದರು. ಒಂದು ವಿಶಿಷ್ಟ ಪೌರಾಣಿಕ ವಸ್ತುವುಳ್ಳ ಕಥೆ, ಅದರ ಗಟ್ಟಿ ನಿರೂಪಣೆ, ಕಲಾವಿದರ ಹದವರಿತ ಅಭಿನಯ ಹಾಗು ತಾಂತ್ರಿಕವಾಗಿಯೂ ಚಿತ್ರದ ಶ್ರೀಮಂತಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಚಿತ್ರರಸಿಕರ ಗಮನ ಸೆಳೆದಿತ್ತು.