ಸ್ಯಾಂಡಲ್ ವುಡ್ಡಿನಲ್ಲಿ ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಬಹುತೇಕ ಹೊಸಬರ ಸಿನಿಮಾಗಳು ವಿಭಿನ್ನ ಕಥಾಹಂದರ, ವಿಭಿನ್ನ ನಿರೂಪಣೆಯಿಂದ ಪ್ರೇಕ್ಷಕನಿಗೆ ಆಪ್ತವಾಗುತ್ತಾ ಶಹಬ್ಬಾಸ್ ಎನಿಸಿಕೊಳ್ಳುತ್ತಾ, ಪರಭಾಷಾ ಚಿತ್ರರಂಗಗಳು ಮೂಕವಿಸ್ಮಿತರಾಗಿ ನೋಡುವಂತೆ ಮಾಡಿರುವುದು ಸುಳ್ಳಲ್ಲ. ಇಂಥಹದೇ ವಿಭಿನ್ನತೆಗೆ ಸಾಕ್ಷಿಯಾದ ಕಳೆದ ಶುಕ್ರವಾರವಷ್ಟೇ ಬಿಡುಗಡೆಯಾದ ಮಹಿಳಾ ಪ್ರಧಾನ ಚಿತ್ರ ‘ಶುದ್ಧಿ’ ಚಿತ್ರದ ನಿರ್ದೇಶಕ ಆದರ್ಶ್.ಎಚ್.ಈಶ್ವರಪ್ಪನವರ ‘ಶುದ್ಧ’ವಾದ ಸಂದರ್ಶನ.
1. ಶುದ್ಧಿಗೆ ಒಳ್ಳೆಯ ವಿಮರ್ಶೆಗಳು ಬರ್ತಿವೆ, ಪ್ರೇಕ್ಷಕಕರು ಹೊಸ ಪ್ರಯತ್ನವನ್ನು ಹೊಗಳ್ತಾ ಇದ್ದಾರೆ, ಏನನಿಸ್ತಿದೆ? ನಿಮ್ಮ ನಿರೀಕ್ಷೆ ತಲುಪಿದೆಯಾ ಸಿನಿಮಾ?
ನಿಜವಾಗ್ಲೂ ತುಂಬಾನೇ ಖುಶಿಯಾಗ್ತಿದೆ. ನಾನು ಈ ಚಿತ್ರವನ್ನು ಒಂದು ವರ್ಗದ ಪ್ರೇಕ್ಷಕರನ್ನು ಮನಸ್ಸಲ್ಲಿಟ್ಟುಕೊಂಡು ಮಾಡಿದ್ದೆ ಆದರೆ ಈಗ ಸಿನಿಮಾ ಬಹುತೇಕ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಕನೆಕ್ಟ್ ಆಗಿಬಿಟ್ಟಿದೆ. ಸಿನಿಮಾದಲ್ಲಿ ಇಂಗ್ಲೀಷ್ ಭಾಷೆ ಇದ್ದರೂ ಎಷ್ಟೋ ಮಂದಿ ವಯಸ್ಸಾದವರು ಅವರಿಗೆ ಇಂಗ್ಲೀಷ್ ಬರುತ್ತೋ ಇಲ್ವೋ ಗೊತ್ತಿಲ್ಲ ಆದರೆ ಸಿನಿಮಾ ನೋಡಿ ಕಣ್ಣೀರು ಸುರಿಸ್ತಾ ಥಿಯೇಟರ್ ನಿಂದ ಆಚೆ ಬರುವುದನ್ನು ನೋಡಿ ತುಂಬಾನೇ ಖುಶಿಯಾಗ್ತಿದೆ. ನಮ್ಮ ಪ್ರಯತ್ನಕ್ಕೆ ಫಲ ಸಿಗ್ತಿದೆ ಅಂತನಿಸ್ತಿದೆ.
2. ಶುದ್ಧಿಯ ಬಜೆಟ್ ಬಗ್ಗೆ ಹೇಳೋದಾದ್ರೆ?
ಬಜೆಟ್ ಬಗ್ಗೆ ನಿಖರವಾಗಿ ಹೇಳೋ ಹಾಗಿಲ್ಲ. ನಿರ್ಮಾಪಕರು ಹಾಕಿದ ಬಂಡವಾಳಕ್ಕೆ ಈಗ ಕಮರ್ಷಿಯಲ್ಲಾಗಿ ಸಿನಿಮಾ ಓಡಬೇಕಿದೆ. ಸೋ ಎಲ್ಲಾ ರೀತಿಯ ಪ್ರಮೋಷನ್ ಪ್ಲಾನ್ ಮಾಡ್ತಾ ಇದ್ದೇವೆ.
3. ಶುದ್ಧಿಯ ಮೇಕಿಂಗ್ ಬಗ್ಗೆ ಪ್ರೇಕ್ಷಕನಲ್ಲಿ ಕುತೂಹಲಗಳು ಗರಿಗೆದರಿವೆ. ಮೇಕಿಂಗ್ ಬಗ್ಗೆ ಹೇಳಿ ಕುತೂಹಲವನ್ನು ತಣಿಸಬಹುದೇ?
2013 ರ ಡಿಸೆಂಬರ್ ನಲ್ಲಿ ನಾನು ಶುದ್ಧಿ ಸ್ಕ್ರಿಪ್ಟನ್ನು ಬರೆಯಲು ಶುರುಮಾಡಿದ್ದೆ ಅದಕ್ಕಿಂತ ಮೊದಲು ಆರು ತಿಂಗಳುಗಳ ಕಾಲ ಯಾವ ಸಿನಿಮಾ ಮಾಡ್ಬೇಕು ಅನ್ನುವ ಹುಡುಕಾಟದಲ್ಲಿದ್ದೆ. ಆ ಹುಡುಕಾಟಕ್ಕೆ ಸಿಕ್ಕ ಉತ್ತರ ‘ಶುದ್ಧಿ’. ಮೇಕಿಂಗ್ ವಿಷಯಕ್ಕೆ ಬಂದಾಗ ಸಿನಿಮಾಟೋಗ್ರಫಿ, ಎಡಿಟಿಂಗ್, ಸೌಂಡ್ ಡಿಸೈನ್ ಮತ್ತು ಮ್ಯೂಸಿಕ್ ನಲ್ಲಿ ಆಮೇರಿಕಾದ ತಂತ್ರಜ್ಞರು ನನ್ನ ಜೊತೆಗಿದ್ದರು. ಇವರು ‘ಶುದ್ಧಿ’ಯ ಆಧಾರ ಸ್ತಂಭಗಳು ಅಂತಾನೇ ಹೇಳ್ಬಹುದು. ಸಂಪೂರ್ಣ ಮೇಕಿಂಗ್ ಬಗ್ಗೆ ಹೇಳೋದು ತುಂಬಾನೆ ಇದೆ, ಇಲ್ಲಿ ಅಷ್ಟೊಂದು ಹೇಳೋದು ಕಷ್ಟ.
4. ಸಿನಿಮಾದಲ್ಲಿ ನೀವು ನಡೆದಿರೋ ಕೆಲವು ಸತ್ಯಘಟನೆಗಳ ಅದರಲ್ಲೂ ಮಹಿಳೆಯ ಮೇಲೆ ನಡೆದಿರುವ ದೌರ್ಜನ್ಯಗಳ ಮೇಲೆ ರೀವೆಂಜ್ ತಗೊಂಡಿದ್ದೀರಾ ಅಂತಾನೇ ಹೇಳ್ಬಹುದು, ಇದಕ್ಕೆಲ್ಲಾ ಹೇಗೆ ತಯಾರಿ ಮಾಡಿದ್ರಿ?
ಸತ್ಯಘಟನೆಗಳ ಮೇಲೆ ರೀವೆಂಜ್ ತಗೊಂಡಿರೋದು ನಿಜ ಅಂತಾನೇ ಹೇಳ್ಬಹುದು. ನಾನು ಅಂತಹ ಪರಿಸ್ಥಿಯಲ್ಲಿ ಇದ್ದಿದ್ರೆ ಒಬ್ಬ ಮನುಷ್ಯನಾಗಿ ಆ ಸಂದರ್ಭದಲ್ಲಿ ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೆ ಎಂಬ ಸ್ಟ್ರಾಂಗ್ ಎಮೋಷನಲ್ ಫೀಲಿಂಗ್ ಈ ಸಿನಿಮಾ ಮಾಡೋಕೆ ಸ್ಪೂರ್ತಿಯಾಯ್ತು. ಹಾಗಂತ ಈ ಘಟನೆಗಳಿಗೆ ಹಿಂಸೆಯೇ ಪರಿಹಾರ ಅಂತ ಹೇಳ್ತಿಲ್ಲ. ಸಿನಿಮಾದಲ್ಲಿ ಸೊಸೈಟಿಗೆ ಮೆಸೇಜ್ ಕೊಟ್ಟಿಲ್ಲ ಆದರೆ ‘ಶುದ್ಧಿ’ ನಡೆದಿರುವ ದುಷ್ಕೃತ್ಯಗಳಿಗೆ ನಾನು ಕೊಟ್ಟ ಪರಿಹಾರ ಅಷ್ಟೇ.
5. ಚಿತ್ರದ ಪಾತ್ರವರ್ಗದ ಬಗ್ಗೆ ಹೇಳಿ?
ಸಿನಿಮಾದಲ್ಲಿ ಸುಮಾರು 40 ಜನ ಕಲಾವಿದರು ಬರ್ತಾರೆ. ಎಲ್ಲರೂ ಥಿಯೇಟರ್ ಬ್ಯಾಕ್ ಗ್ರೌಂಡ್ ಇರೋರು. ಕಾಸ್ಟಿಂಗ್ ಡೈರೆಕ್ಟರ್ ನನ್ನ ಸ್ನೆಹಿತ ಸಂದೀಪ್ ಜೈನ್ ಅಂತ, ಥಿಯೇಟರ್ ನಲ್ಲಿ ಹತ್ತು ವರ್ಷದ ಅನುಭವ ಇರೋನು, ಇವನ ಮೂಲಕ ನಟನೆಯಲ್ಲಿ ಪಳಗಿದ ಕಲಾವಿದರೇ ಸಿಕ್ಕಿದ್ದಾರೆ. ಇವರನ್ನೆಲ್ಲಾ ಕರೆಸಿ ಸ್ಕ್ರೀನ್ ಟೆಸ್ಟ್ ಮಾಡಿಸಿದ್ದೆವು. ಆಮೇಲೆ ಅಮೇರಿಕನ್ ನಟಿ ಲಾರೆನ್ ನನಗೆ ಏಳೆಂಟು ವರುಷದಿಂದ ಪರಿಚಯ. ನಿವೇದಿತಾ ಎರಡು ಬಾರಿ ರಾಜ್ಯ ಪ್ರಶಸ್ತಿ ಪಡೆದಿರುವ ನಟಿ. ಅವರು ಸ್ಕ್ರಿಪ್ಟನ್ನು ಇಷ್ಟಪಟ್ಟು ಬಂದು ಸಿನಿಮಾ ಮಾಡಿದ್ದಾರೆ.ಅಮೃತಾ ಕರಗತ, ಶಶಾಂಕ್ ಪುರುಷೋತ್ತಮ್, ಸಿದ್ಧಾರ್ಥ್ ಮಾಧ್ಯಮಿಕ, ಅಜಯ್ ರಾಜ್, ಸಂಚಾರಿ ವಿಜಯ್, ನಾಗಾರ್ಜುನ್ ನಾಗಶೇಖರ್ ಇವರೆಲ್ಲರೂ ಸಂದೀಪ್ ಜೈನ್ ಮೂಲಕ ಬಂದವರು.
6. ಚಿತ್ರದಲ್ಲಿ ಆಯಾ ಪಾತ್ರಗಳ ಮೂಲಭಾಷೆಯನ್ನೇ ಬಳಸಿದ್ದೀರಾ, ಅಂದರೆ ಲಾರೆನ್ ಸ್ಪಾರ್ಟಾನೋ ಅವರಿಂದ ಇಂಗ್ಲೀಷ್ ಭಾಷೆ, ಮಂಗಳೂರಿನ ಹೋಂಸ್ಟೇ ದಾಳಿ ಸನ್ನಿವೇಶದಲ್ಲಿ ತುಳು ಭಾಷೆಯನ್ನೇ ಬಳಸಿದ್ದೀರಾ, ಸಮಸ್ಯೆ ಅನಿಸಿಲ್ವಾ? ನೆಗೆಟಿವ್ ಕಾಮೆಂಟ್ಸ್ ಬಂದಿಲ್ವಾ?
ಇಂಗ್ಲೀಷ್ ಜಾಸ್ತಿ ಇದೆಯಂತ ನೆಗೆಟಿವ್ ಕಮೆಂಟ್ಸ್ ಬಂದಿದೆ. ಹಾಗಂತ ಒಬ್ಬ ಆಮೆರಿಕನ್ ಪಾತ್ರಧಾರಿಯ ಬಳಿ ಕನ್ನಡ ಮಾತಾಡ್ಸೋಕೆ ಅಗಲ್ಲ. ಸಿನ್ಮಾ ಅಂದ್ರೆ ಅಥೆಂಟಿಕ್ ಆಗಿ ಇರ್ಬೇಕು. ಹಾಗೇ ಮಂಗಳೂರು ಅಂತ ಬಂದಾಗ ಅವರ ನೇಟಿವ್ ಭಾಷೆಯಲ್ಲೇ ಮಾತಾಡಿಸ್ಬೇಕಾಗುತ್ತೆ. ನೆಗೆಟಿವ್ ಕಮೆಂಟ್ಸ್ ಬರುತ್ತೆ ಅಂತ ನಾನು ಯೋಚ್ನೇನೇ ಮಾಡ್ಲಿಲ್ಲ. ನನಗೆ ಸರಿ ಅನಿಸಿದ್ದನ್ನು ಮಾಡಿದ್ದೇನೆ. ಎಲ್ಲಾ ವಿಷಯಗಳಲ್ಲಿ ಎಲ್ರನ್ನೂ ತೃಪ್ತಿ ಪಡಿಸೋಕೆ ಅಗಲ್ಲ.
7.ಮುಂದಿನ ಯೊಜನೆಗಳೇನು?
ಶುದ್ಧಿಯ ಮೂರು ವರ್ಷದ ಪ್ರಯಾಣದಲ್ಲಿ ತುಂಬಾ ಸುಸ್ತಾಗಿದ್ದೇನೆ. ಸಿನ್ಮಾ ನಿಧಾನವಾಗಿ ಯಶಸ್ಸು ಕಾಣ್ತಾ ಇದೆ. ಹಾಗಾಗಿ ಸ್ವಲ್ಪ ದಿನ ಬ್ರೇಕ್ ತಗೊಬೇಕು ಅಂದ್ಕೊಂಡಿದ್ದೇನೆ. ಆಮೇಲೆ ಹೊಸ ಸಿನ್ಮಾದ ಕಾನ್ಸೆಪ್ಟ್ ಮೇಲೆ ಕೆಲ್ಸ ಮಾಡ್ಬೇಕು. ಬೇರೆಯವರು ಬರೆದ ಸ್ಕ್ರಿಪ್ಟನ್ನು ಡೈರೆಕ್ಟ್ ಮಾಡೋಕೆ ಗೊತ್ತಿಲ್ಲ ನನಗೆ, ಹಾಗಾಗಿ ನಾನೇ ಕೂತು ಬರೀಬೇಕು. ಒಂದಷ್ಟು ಕಾನ್ಸೆಪ್ಟ್ ಗಳು ಇವೆ, ಶುದ್ಧಿಯ ಯಶಸ್ಸಿನ ಮೇಲೆ ಮುಂದಿನ ಸಿನ್ಮಾದ ಕಾನ್ಸೆಪ್ಟ್ ಡಿಪೆಂಡ್ ಅಗಿದೆ.