News Kannada
Sunday, October 02 2022

ಮನರಂಜನೆ

‘ಹುಲಿರಾಯ’ನ ಬೆನ್ನ ಮೇಲೆ ಸವಾರಿ ಹೊರಟಿರುವ ಅರವಿಂದ್ ಕೌಶಿಕ್ - 1 min read

Photo Credit :

‘ಹುಲಿರಾಯ’ನ ಬೆನ್ನ ಮೇಲೆ ಸವಾರಿ ಹೊರಟಿರುವ ಅರವಿಂದ್ ಕೌಶಿಕ್

ಸ್ಯಾಂಡಲ್ ವುಡ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಡಿಜಿಟಲ್ ಕ್ಯಾಮೆರಾದದಲ್ಲಿ ‘ನಮ್ ಏರಿಯಾಲ್ ಒಂದಿನ’ ಎಂಬ ವಿಭಿನ್ನ ಸಿನಿಮಾವನ್ನು ಚಿತ್ರೀಕರಿಸಿ ಹೊಸ ಜಮಾನದ ಸಿನಿಮಾ ತಯಾರಕರಿಗೆ ದಾರಿ ತೋರಿದ ಸೃಜನಶೀಲ ನಿರ್ದೇಶಕ ಅರವಿಂದ್ ಕೌಶಿಕ್ ಈ ಬಾರಿ ‘ಹುಲಿರಾಯ’ನನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ರಕ್ಷಿತ್ ಶೆಟ್ಟಿಯವರ ಚೊಚ್ಚಲ ಸಿನಿಮಾ ‘ತುಘ್ಲಕ್’ ನ್ನು ನಿರ್ದೇಶಿಸಿದ ಅರವಿಂದ್ ಅವರು  ತಮ್ಮ ಹೊಸ ಸಿನಿಮಾದ ಬಗ್ಗೆ, ಹೊಸಬರ ಪ್ರಯೋಗಗಳ ಬಗ್ಗೆ ‘ನ್ಯೂಸ್ ಕನ್ನಡ’ ದ ಜೊತೆ ಮಾತಾಡಿದ ಕ್ಷಣ…

1.ತುಂಬಾ ಗ್ಯಾಪಿನ ನಂತರ ‘ಹುಲಿರಾಯ’ ಮಾಡಿದ್ರಿ, ಯಾಕಿಷ್ಟು ಗ್ಯಾಪ್?
2012 ರಲ್ಲಿ ತುಘ್ಲಕ್ ಸಿನ್ಮಾ ರೀಲಿಸ್ ಆದ್ಮೇಲೆ ಒಂದಷ್ಟು ಬರವಣಿಗೆ ಕಡೆ ಗಮನ ಕೊಡ್ಬೇಕು ಅನಿಸ್ತು. ಒಂದರ ಹಿಂದೆ ಒಂದರಂತೆ ಸಿನ್ಮಾಗಳನ್ನು ಮಾಡ್ತಾ ಹೋದ್ರೆ ಬರವಣಿಗೆಗೆ ಸಮಯ ಸಿಗೋದಿಲ್ಲ. ಹಾಗಾಗಿ ಒಂದಷ್ಟು ಕಥೆಗಳು, ಚಿತ್ರಕಥೆಗಳನ್ನು ಬರೆದು ಅದ್ರ ಮೇಲೆ ರಿಸರ್ಚ್ ಮಾಡಿ ಸುಮಾರು 17-18 ಸ್ಕ್ರಿಪ್ಟ್ ಗಳನ್ನು ರೆಡಿ ಮಾಡಿದೆ. ಇದೇ ಟೈಂನಲ್ಲಿ ಟೆಲಿವಿಷನ್ ನಲ್ಲಿ ಒಂದೆರಡು ಸೀರಿಯಲ್ ಗಳನ್ನು ಡೈರೆಕ್ಟ್ ಮಾಡಿದೆ. ಈಗ ಎಲ್ಲಾ ಪೂರ್ವಸಿದ್ಧತೆಗಳ ನಂತರ ಬರ್ತಾ ಇರೋ ಸಿನ್ಮಾ ಹುಲಿರಾಯ.

2.ಮೊದಲ ಬಾರಿಗೆ ಒಂದು ಸಿನ್ಮಾವನ್ನು ಡಿಜಿಟಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿ ಹೊಸ ಪೀಳಿಗೆಯ ಕನಸುಗಾರರಿಗೆ ದಾರಿ ತೋರಿಸಿದವರು ನೀವು, ಈ ಪ್ಲಾನ್ ಹೇಗೆ ಹೊಳೆಯಿತು ನಿಮ್ಗೆ?
ಡಿಜಿಟಲ್ ಕ್ಯಾಮೆರಾ 2002 ರಲ್ಲೇ ಬಂದಿತ್ತು ಅದ್ರೆ ಜಾಹೀರಾತುಗಳನ್ನು ಮಾಡಲು ಹೆಚ್ಚಾಗಿ ಬಳಸ್ತಿದ್ರು, ಬಾಂಬೆನಲ್ಲಿ ಇದರ ಬಳಕೆ ಜಾಸ್ತಿ ಇತ್ತು. ಸಿನ್ಮಾದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ನಡೆಯುವಂತಹ ಸಂಕಲನ ಮತ್ತು ಸಂಸ್ಕರಣದ ಕೆಲಸಗಳು ತುಂಬಾ ಸುಲಭವಾಗಿ ಮಾಡಲು ಸಹಾಯ ಆಗುತ್ತೆ, ಅಲ್ಲದೆ ತಂತ್ರಜ್ಞಾನದಿಂದ ತಂತ್ರಜ್ಞಾನಕ್ಕೆ ಬದಲಾವಣೆಗಳು ಖಂಡಿತವಾಗಿಯೂ ಆಗ್ಲೇಬೇಕು ಹಾಗಾಗಿ ಮುಂದಿನ ದಿನಗಳಲ್ಲಿ ಇದರ ಬಳಕೆ ಹೆಚ್ಚಾಗುತ್ತೆ ಅನ್ನೋದನ್ನು ಮೊದಲೇ ನಾನು ನಿರೀಕ್ಷೆ ಮಾಡಿದ್ದೆ. ಮೊದಲು ನನ್ನ ಶಾರ್ಟ್ ಫಿಲಂಗಳನ್ನು ಡಿಜಿಟಲ್ ಕ್ಯಾಮೆರದಲ್ಲೇ ಶೂಟ್ ಮಾಡ್ತಿದ್ದೆ ಹಾಗಾಗಿ ನನ್ನ ಸಿನಿಮಾವನ್ನು ಅದರಲ್ಲೇ ಶೂಟ್ ಮಾಡ್ಬೇಕು ಅನ್ನುವ ಆಸೆ ಇತ್ತು. ಅದಕ್ಕೆ ನಮ್ಮ ಕ್ಯಾಮೆರಾಮೆನ್ ಅಶೋಕ್ ಕಶ್ಯಪ್ ಅವರು ಕೂಡ ಸಾಥ್ ಕೊಟ್ರು. ಈಗ ಎಲ್ಲರೂ ಡಿಜಿಟಲ್ ಕ್ಯಾಮೆರಾಗಳನ್ನೇ ಬಳಸ್ತಾರೆ. ತುಂಬಾ ಒಳ್ಳೆಯ ಬದಲಾವಣೆ ಇದು.

3.ಇತ್ತೀಚಿನ ಹೊಸ ಪ್ರಯೋಗಶೀಲ ಸಿನ್ಮಾಗಳ ಬಗ್ಗೆ ನಿಮ್ಮ ಅನಿಸಿಕೆ?
ಇತ್ತೀಚಿನ ದಿನಗಳಲ್ಲಿ ಸಿನಿಮಾಗೆ ಒಂದಷ್ಟು ಓದ್ಕೊಂಡಿರೋರು ಬರ್ತಿರೋದುತುಂಬಾ ಖುಶಿಯ ವಿಚಾರ ಹಾಗಂತ ಮೊದಲಿನವರು ಓದಿರ್ಲಿಲ್ಲ ಅಂತ ಅಲ್ಲ. ಈಗೀಗ ವರ್ಲ್ಡ್ ಕ್ಲಾಸ್ ಸಿನ್ಮಾಗಳು ಇಂಟರ್ನೆಟ್ ನಲ್ಲಿ ಸಿಗ್ತಿರೋದ್ರಿಂದ ಜನ ಸಿನಿಮಾ ನೋಡೋ ದೃಷ್ಟಿ ಬದಲಾಗಿದೆ. ಇದೆಲ್ಲಾ ಆಗ್ತಿರೋದ್ರಿಂದ ಪ್ರಯೋಗಶೀಲತೆ ಬರೋದು ಸಹಜ. ಹೊಸಥರದ ಸಿನ್ಮಾಗಳು ಬರ್ಲೇಬೇಕು. ಇನ್ನೂ ಅದೇ ಹಳೇ ಕಥೆಗಳನ್ನು ಹೇಳ್ತಾ ಇದ್ರೆ ಜನ ನೋಡಲ್ಲ. ಇಂಡಸ್ಟ್ರಿಯ ಸರ್ವವೈಲ್ ಗೆ ಪ್ರಯೋಗಶೀಲತೆ ಅನ್ನೋದು ತುಂಬಾ ಮುಖ್ಯ ಆಗುತ್ತೆ. ಹಿಂದೆ ಘಟಶ್ರಾದ್ಧ, ಸಂಸ್ಕಾರದಂತಹ ಹೊಸ ಅಲೆಯ ಸಿನ್ಮಾಗಳು ಬರ್ತಿದ್ವು ಆದರೆ ಈಗಿನ ಹೊಸಬರು ಕಮರ್ಷಿಯಲ್ ಅಂಶಗಳನ್ನು ಇಟ್ಟುಕೊಂಡು ಹೊಸ ರೀತಿಯ ಕಥೆಗಳನ್ನು ಹೇಳ್ತಿರೋದು ಬಹಳ ಸಂತೋಷಪಡುವಂತಹ ವಿಚಾರ. ಆದ್ರೆ ಎಲ್ಲೋ ಒಂದು ಕಡೆ ಇನ್ನೂ ಹೊಸ ರೀತಿಯ ಸಿನ್ಮಾಗಳು ಬೇಕು ಅನ್ಸುತ್ತೆ. ಹಿಟ್ ಆಗ್ಲಿ ಫ್ಲಾಪ್ ಆಗ್ಲಿ ಹೊಸ ರೀತಿಯ ಸಿನ್ಮಾಗಳು ಬೇಕು ಅನ್ನುವುದು ನನ್ನ ಅನಿಸಿಕೆ. ಎಷ್ಟು ಜಾಸ್ತಿ ನಾವು ಪ್ರಯೋಗಾತ್ಮಕವಾಗಿ ಯೋಚ್ನೆ ಮಾಡ್ತೀವೋ ಅಷ್ಟು ಗಟ್ಟಿಯಾಗಿ ಇಂಡಸ್ಟ್ರಿ ಬೆಳೆಯುತ್ತೆ ಹಾಗೂ ಹೊಸ ಪ್ರೇಕ್ಷಕರನ್ನ ಸೃಷ್ಟಿಸೋಕೆ ಸಾಧ್ಯ ಆಗುತ್ತೆ.

See also  ಬೋಜ್ ಪುರಿ ನಟಿ ಅನುಪಮ ಪಾಠಕ್ ಆತ್ಮಹತ್ಯೆ

4.ಹುಲಿರಾಯನ ಘರ್ಜನೆ ಯಾವಾಗಿಂದ ಶುರು?
ಮೇ ತಿಂಗಳಲ್ಲಿ ತೆರೆಮೇಲೆ ಘರ್ಜಿಸೋಕೆ ಶುರುಮಾಡ್ತಾನೆ ಹುಲಿರಾಯ. ಅಲ್ಲಿವರೆಗೆ ಪಬ್ಲಿಸಿಟಿ ಮೂಲಕ ಘರ್ಜನೆ ಇರುತ್ತೆ.

5.ಹುಲಿರಾಯ ಸಿನ್ಮಾದಲ್ಲಿ ಏನಿದೆ ಹೊಸತು?
ಹುಲಿರಾಯ ಥ್ರಿಲ್ಲರ್ ಜಾನರ್ ಗೆ ಸೇರೋ ಸಿನಿಮಾ. ನಾರ್ಮಲ್ ಆಗಿಯೇ ಕಥೆ ಹೇಳಿದ್ದೇನೆ. ಸಿನಿಮಾದ ಟೋಟಲ್ ಕನ್ಸ್ ಟ್ರಕ್ಷನ್ ಸ್ವಲ್ಪ ಹೊಸತಾಗಿದೆ. ಈಗಿನ ಸಿನಿಮಾಗಳಲ್ಲಿ ತುಂಬಾ ರಾಪಿಡ್ ಕ್ಯಾಮೆರಾ ಮೂವ್ ಮೆಂಟ್ ಗಳು, ಫಾಸ್ಟ್ ಕಟಿಂಗ್ಸ್ ಇರೋ ಎಡಿಟಿಂಗ್, ಅನಾವಶ್ಯಕವಾಗಿ ಸಿನಿಮಾನ ಸ್ಪೀಡಪ್ ಮಾಡೋದು ಇದೆಲ್ಲಾ ಇಲ್ಲದೆ ಮಾಡಿರೋ ಒಂದೊಳ್ಳೆ ಎಂಟರ್ ಟೇನಿಂಗ್ ಆಗಿರೋ ಸಿನಿಮಾ ಹುಲಿರಾಯ. ಕನ್ನಡ ಸಿನಿಮಾರಂಗದಲ್ಲಿ ಇಲ್ಲಿವರೆಗೆ ಹೇಳಿರದ ಒಂದು ಕಥೆ ಅಂದ್ರೆ ವಲಸೆ ಬಂದವರ ಕಥೆ ಆಗಿರ್ಬಹುದು, ಕಾಡಲ್ಲಿ ಹುಲಿ ಇಲ್ಲ ಅನ್ನೋದಿರಬಹುದು, ಫ್ರೀಡಂ ಆಫ್ ಎಕ್ಸ್ ಪ್ರೆಷನ್ ಬಗ್ಗೆ ಅಂದ್ರೆ ತನಗೆ ಅನಿಸಿದ್ದನ್ನು ಮಾಡುವ, ಇಷ್ಟವಾದಲ್ಲಿ ಇರಲಿಚ್ಛಿಸುವ ವ್ಯಕ್ತಿಯ ಘರ್ಷಣೆ ಇಂಥ ಕಥೆಗಳು ಇಲ್ಲಿವರೆಗೆ ಬಂದಿಲ್ಲ. ಜೊತೆಗೆ ಹೊಸತರದ ಮ್ಯೂಸಿಕ್ ಇರುವಂತಹ ಒಂದು ಫ್ರೆಷ್ ಸಬ್ಜೆಕ್ಟ್ ಇದು. ಈಗಿನ ಕಾಲದ ಜನಕ್ಕೆ ಕನೆಕ್ಟ್ ಅಗುವಂತಹ ಒಂದು ಮುಖ್ಯವಾದ ಸಿನಿಮಾ ಆಗುತ್ತೆ ಅನ್ನುವ ನಂಬಿಕೆ ಇದೆ.

6.ನೀವು ಮಾಡ್ತಿರೋ ಚಾನೆಲ್ ಉದ್ದೇಶವೇನು?
ಇದೊಂದು ಹೊಸ ಸ್ಟೆಪ್ ಅಂತ ಹೇಳ್ಬಹುದು. ಈಗಿನ ಜನರೇಷನ್ ಟಿವಿ ನೋಡೋದಕ್ಕಿಂತಲೂ ಹೆಚ್ಚಾಗಿ ಫೇಸ್ ಬುಕ್, ಯೂಟ್ಯೂಬ್ ಗಳನ್ನೇ ಹೆಚ್ಚಾಗಿ ನೋಡ್ತಾ ಇರ್ತಾರೆ. ಸಿನಿಮಾ ಅಂತ ಬಂದಾಗ ಕಟ್ಟುಪಾಡುಗಳಿರುತ್ತವೆ ಆದರೆ ಯೂಟ್ಯೂಬ್ ಚಾನೆಲ್ ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಜಾಸ್ತಿ ಇರುತ್ತೆ. ಹೊಸ ಕಥೆಗಳನ್ನು ಹೊಸ ಕಂಟೆಂಟ್ ಗಳನ್ನು ಕೊಡ್ತಾ ಇರ್ಬಹುದು. ಬೇರೆ ಯೂಟ್ಯೂಬ್ ಚಾನೆಲ್ ಗಳಿಗಿಂತ ನಮ್ದು ಹೇಗೆ ಭಿನ್ನವಾಗಿರುತ್ತೆ ಅಂದ್ರೆ ಟಿವಿನಲ್ಲಿ ಟಿಆರ್ ಪಿಗಾಗಿ ಹೇಗೆ ಓದ್ದಾಡ್ತಾರೋ ಹಾಗೇ ಯೂಟ್ಯೂಬ್ ಚಾನೆಲ್ ಗಳಲ್ಲಿ ಹಿಟ್ಸ್, ಲೈಕ್ಸ್ ಗಾಗಿ ಒದ್ದಾಡ್ತಾರೆ ಆದರೆ ಅದ್ರಿಂದ ಏನೂ ಆಗಲ್ಲ. ನಮ್ಮಲ್ಲಿ ಹೊಸ ಕಂಟೆಂಟ್ ಅನ್ನೋದು ಹುಟ್ಟಿದ್ರೆ ರೀಚ್ ಅಗುತ್ತೆ ಅನ್ನೋದು ನನ್ನ ಪಾಲಿಸಿ. ಹಾಗಾಗಿ ನಾನು ಮತ್ತು ನನ್ನ ಹೆಂಡ್ತಿ ಶಿಲ್ಪಾ ಸೇರಿ ಈ ಥರದ್ದೊಂದು ಪ್ಲಾನ್ ಶುರುಮಾಡಿದ್ದೇವೆ. ಮೊದಲಿಗೆ 30 ನಿಮಿಷದ ಒಂದು ಶಾರ್ಟ್ ಫಿಲಂನ ಮಾಡ್ತಾ ಇದ್ದೇವೆ. ಇದು ನಮ್ಮನ್ನ ನಾವು ಜನರಿಗೆ ಹತ್ತಿರ ಮಾಡ್ತಿರೋ ಒಂದು ಯೋಚನೆ ಅಷ್ಟೆ. ಅರವಿಂದ್ ಕೌಶಿಕ್ ಮತ್ತೆ ಶಿಲ್ಪಾ ಅರವಿಂದ್ ಏನು, ಅವರ ವ್ಯಕ್ತಿತ್ವ ಎಂಥದ್ದು ಅನ್ನುವ ಒಂದು ಅಪ್ ಡೇಟೆಡ್ ವರ್ಷನ್ ಈ ಚಾನೆಲ್.

7.ಹುಲಿರಾಯನ ಮೇಕಿಂಗ್ ಬಗ್ಗೆ
ಕಥೆಗೆ ಧಕ್ಕೆ ಬರದಂತೆ ಎಂಟರ್ ಟೇನಿಂಗ್ ಅಂಶಗಳನ್ನು ಸೇರಿಸಿಕೊಂಡು ತುಂಬಾ ನೀಟಾಗಿ ಮಾಡಿರೋ ಸಿನಿಮಾ ಇದು. ಅನಗತ್ಯ ಅನಿಸುವಂತಹ ಯಾವುದೇ ಅಂಶಗಳು ಇಲ್ಲಿಲ್ಲ. ಬ್ಲ್ಯಾಕ್ ಮ್ಯಾಜಿಕ್ ಕ್ಯಾಮೆರಾದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಛಾಯಾಗ್ರಹಣ, ಸಂಕಲನ, ಸಂಗೀತ ಮತ್ತು ಸೌಂಡ್ ಎಫೆಕ್ಟ್ಸ್ ನಲ್ಲಿ  ಬೇರೆ ಕನ್ನಡ ಸಿನಿಮಾಗಳಿಗಿಂತ ತುಂಬಾ ವಿಭಿನ್ನವಾಗಿದೆ ಅಂತಾನೇ ಹೇಳ್ಬಹುದು. ಇದು ನಾನು ಮಾಡಿರೋ ಸಿನಿಮಾಗಳಲ್ಲೇ ತುಂಬಾ ವಿಶಿಷ್ಟ ಸಿನಿಮಾ. ಇಲ್ಲಿ ಕಾಡನ್ನು ತೋರಿಸಿರೋ ರೀತಿ, ಸಿಟಿಯನ್ನು ತೋರಿಸಿರೋ ರೀತಿ, ಡೈಲಾಗ್ ವರ್ಷನ್, ಎಡಿಟಿಂಗ್ ಪ್ಯಾಟರ್ನ್ ಎಲ್ಲನೂ ತುಂಬಾ ವಿಶಿಷ್ಟವಾಗಿದೆ. ವರ್ಲ್ಡ್ ಕ್ಲಾಸ್ ಸಿನ್ಮಾಗಳ ಜೊತೆ ಕಾಂಪಿಟ್ ಮಾಡುವಂತಹ ಸಾಮರ್ಥ್ಯ ಇದೆ ಹುಲಿರಾಯನಿಗೆ.

See also  ಗಾಜನೂರಿನ  ದೊಡ್ಮನೆಯಲ್ಲಿ  ಮದುವೆ  ಸಂಭ್ರಮ  

8.ಪ್ರಯೋಗಾತ್ಮಕ ಸಿನ್ಮಾಗಳನ್ನು ಉಳಿಸುವ ಬಗ್ಗೆ, ಹಾಕಿದ ಬಂಡವಾಳವನ್ನು ತೆಗೆಯೋ ಬಗ್ಗೆ ಐಡಿಯಾಗಳು ಏನಾದರೂ?
ಪ್ರಯೋಗಾತ್ಮಕ ಸಿನ್ಮಾಗಳಿಗೆ ಮಾರ್ಕೆಟ್ ಇದೆ. ಹಾಗಂತ ಏನು ಮಾಡಿದ್ರೂ ಪ್ರಯೋಗ ಅಂತ ಅನಿಸ್ಕೊಳ್ಳೋಕು ಆಗಲ್ಲ. ಅಲ್ಲದೇ ಮಾಡಿರೋ ಎಲ್ಲಾ ಸಿನಿಮಾಗಳನ್ನು ಜನ ನೋಡ್ಲೇಬೇಕು ಅಂತೇನಿಲ್ಲ. ಒಳ್ಳೆ ಪ್ರಯೋಗಗಳಿಗೆ ಮಾರ್ಕೆಟ್ ಇದ್ದೇ ಇದೆ ಅನ್ನುವುದಕ್ಕೆ ಲೂಸಿಯಾ, ರಂಗಿತರಂಗದಂತಹ ಉದಾಹರಣೆಗಳಿವೆ. ಕಡಿಮೆ ಬಂಡವಾಳ ಹಾಕಿ ಜಾಸ್ತಿ ಹಾರ್ಡ್ ವರ್ಕ್ ಮಾಡಿದ್ರೆ ಖಂಡಿತಾ ಹಾಕಿದ ಬಂಡವಾಳವನ್ನು ವಾಪಾಸ್ ತೆಗಿಬಹುದು. ಈಗಂತೂ ಕನ್ನಡ ಇಂಡಸ್ಟ್ರಿಗೆ ಸುವರ್ಣಯುಗ ಅಂತಾನೇ ಹೇಳ್ಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು