ಮುಂಬೈ: ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ, ಪದ್ಮವಿಭೂಷಣ ಪುರಸ್ಕೃತೆ ಕಿಶೋರಿ ಅಮೋನ್‌ಕರ್ ಮುಂಬೈನ ತಮ್ಮ ನಿವಾಸದಲ್ಲಿ ಸೋಮವಾರ ರಾತ್ರಿ ವಿಧಿವಶರಾಗಿದ್ದಾರೆ.
ಅವರಿಗೆ 84 ವರ್ಷ ವಯಸ್ಸಾಗಿತ್ತು. ರಾತ್ರಿ 9 ಸುಮಾರಿಗೆ ಊಟ ಮಾಡಿದ ನಂತರ ಕಿಶೋರಿ ಅವರು ಮಲಗಿಕೊಂಡಿದ್ದರು. ಇದಾದ 10 ನಿಮಿಷದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗಾಯಕಿ ಕಿಶೋರಿ ಅವರು ಜೈಪುರ ಘರಾನಾ ಶೈಲಿಯ ಹಿಂದೂಸ್ತಾನಿ ಗಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದರು. ಹಿಂದೂಸ್ತಾನಿ ಪಾರಂಪರಿಕ ರಾಗಗಳಲ್ಲಿ ಖ್ಯಾಲ್ ಹಾಡುವುದರಲ್ಲಿ ಅವರು ಖ್ಯಾತರಾಗಿದ್ದರು. ಜೊತೆಗೆ ಲಘು ಸಂಗೀತದ ಠುಮರಿ, ಭಜನೆ ಹಾಗೂ ಚಿತ್ರಗೀತೆಗಳ ಗಾಯನದಲ್ಲೂ ಕಿಶೋರಿ ಅವರು ಹೆಸರು ಗಳಿಸಿದ್ದರು. ದೇಶದ ಅತ್ಯುನ್ನತ ಪುರಸ್ಕಾರಗಳಾದ ಪದ್ಮಭೂಷಣ (1987), ಪದ್ಮವಿಭೂಷಣ (2002) ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಅವರು ಪಾತ್ರರಾಗಿದ್ದರು.