ಗಾಂಧಿನಗರದ ನಿರ್ಮಾಪಕರನ್ನು ಕಾಯದೇ ಕ್ರೌಡ್ ಫಂಡಿಂಗ್ ಮೂಲಕ ಹೊಸ ರೀತಿಯ ಕಥೆ, ಹೊಸತಾದ ನಿರೂಪಣೆ ಮತ್ತು ಕಡಿಮೆ ಬಜೆಟ್ಟಿನಲ್ಲಿ ಹೊಸ ರೀತಿಯ ಸಿನಿಮಾ ಕಟ್ಟಿ, ಹೊಸ ಪ್ರೇಕ್ಷಕರನ್ನು ಸೆಳೆಯುವುದರೊಂದಿಗೆ ಪರಭಾಷಿಗರೂ ಕನ್ನಡ ಸಿನಿಮಾಗಳನ್ನು ಬೆರಗಾಗಿ ನೋಡುವಂತೆ ಮಾಡಿದ ನಿರ್ದೆಶಕ ಕಂ ನಟ ಪವನ್ ಕುಮಾರ್ ತಮ್ಮ ಬ್ಯುಸಿ ಕೆಲಸಗಳ ನಡುವೆ ‘ನ್ಯೂಸ್ ಕನ್ನಡ’ದ ಜೊತೆ ಮಾತಿಗೆ ಸಿಕ್ಕಾಗ…
1. ಲೂಸಿಯಾ ನಂತರ ಯೂಟರ್ನ್ ಎರಡು ವಿಭಿನ್ನ ಸಿನಿಮಾಗಳು. ಯೂಟರ್ನ್ ನಂತರ ಏನು?
ಯೂಟರ್ನ್ ನಂತರ ಏನು ಅಂತ ನನಗೂ ಇನ್ನೂ ಗೊತ್ತಿಲ್ಲ. ಒಂದು ವರ್ಷ ಆಗ್ತಾ ಬಂತು. ನಿಧಾನಕ್ಕೆ ಯಾವ ಕಾನ್ಸೆಪ್ಟು ಆಗುತ್ತೆ ಅಂತ ಗೊತ್ತಿಲ್ಲ. ಆಮೇಲೆ ನಮ್ಮ ಮಾರ್ಕೆಟ್ ಕೂಡ ‘unpredictable’ ಹಾಗಾಗಿ ಯಾವ್ದಕ್ಕೆ ಎಷ್ಟು ಹಣ ಹಾಕಿದ್ರೆ ‘worthy’ ಅನ್ನೋದರ ಬಗ್ಗೆ ಯೋಚ್ನೆ ಮಾಡ್ತಾ ಟೈಂ ಕಳೆಯ್ತಾ ಇದ್ದೀನಿ. ಇದೆಲ್ಲಾದರ ನಡುವೆ ‘ಒಂದು ಮೊಟ್ಟೆಯ ಕಥೆ’ ಅಂತ ಒಂದು ಸಿನ್ಮಾ ನೋಡ್ದೆ. ಅದನ್ನ ‘immediately acquire’ ಮಾಡಿ ನಮ್ಮ ಸ್ಟುಡಿಯೋ ಬ್ಯಾನರ್ ಕೆಳಗೆ ರಿಲೀಸ್ ಮಾಡೋ ಪ್ಲಾನ್ ಮಾಡ್ತಾ ಇದ್ದೀವಿ.
2. ಲೂಸಿಯಾ ಸಿನೆಮಾದಲ್ಲಿ ನೀವು ಗಾಂಧಿನಗರದ ಸಿದ್ಧಸೂತ್ರಗಳಿಗೆ ವಿರುದ್ಧವಾಗಿ ಹೋಗುವಾಗ ನೀವು ಅನುಭವಿಸಿದ ತೊಂದರೆಗಳು?
ಲೂಸಿಯಾ ಸಿನ್ಮಾ ಮಾಡುವಾಗ ಯಾವುದೇ ಥರ ರೂಲ್ಸ್ ಅನ್ನೋದು ಬ್ರೇಕ್ ಮಾಡಿಲ್ಲ. ಕಾನೂನಿನಲ್ಲಿ ಇರುವ ಹಕ್ಕನ್ನೇ ಉಪಯೋಗಿಸಿಕೊಂಡಿದ್ದೇನೆ ಅಷ್ಟೇ. ಯಾವುದೇ ಒಂದು ಆರ್ಟ್ ಫಾರ್ಮನ್ನು ನಿಮಗೆ ಹೇಗೆ ಬೇಕೋ ಹಾಗೆ ಮಾಡ್ಬಹುದು ಆದರೆ ಕೊನೆಗೆ ಅದನ್ನು ಜನಕ್ಕೆ ತೋರಿಸ್ಬೇಕಿದ್ರೆ ಸೆನ್ಸಾರ್ ಮಾಡ್ಲೆಬೇಕು ಅನ್ನೋ ರೂಲ್ ಇದೆ. ಗಾಂಧಿನಗರದ ರೂಲ್ಸ್ ಗಳಲ್ಲಿ ಒಬ್ರಿಗೆ ಒಳ್ಳೆದಾಗುತ್ತೆ, ಒಬ್ರಿಗೆ ಮೋಸ ಆಗುತ್ತೆ. ನಮಗೆ ಒಂದು ಸಿನ್ಮಾ ಮಾಡ್ಬೇಕಿತ್ತು ಮಾಡಿದ್ವಿ. ಲೀಗಲ್ಲಾಗಿ ಏನೆಲ್ಲಾ ಮಾಡ್ಬೇಕೋ ಅದನ್ನು ಮಾಡಿದ್ವಿ. ಗಾಂಧಿನಗರನೂ ಈ ಥರನೇ ಮಾಡ್ಬೇಕು ಅಂತ ಏನೂ ಹೇಳಲ್ಲ. ಗಾಂಧಿನಗರದ ರೂಲ್ಸು ಅದು ಇದು ಅಂತ ಜನ ಅಂದ್ಕೊಂಡಿದ್ದಾರೆ ಅಷ್ಟೇ. ಒಂದೊಳ್ಳೆ ಸಿನ್ಮಾ ಮಾಡೋಕೆ ಹೊರಟಾಗ ಯಾರೂ ಯಾವ್ದೇ ರೀತಿ ಪ್ರಾಬ್ಲಂ ಕೊಡಲ್ಲ.
3. ಪವನ್ ಕುಮಾರ್ ಸ್ಟುಡಿಯೋಸ್ ನಲ್ಲಿ ಹೊಸ ನಿರ್ದೇಶಕರ ಸಿನ್ಮಾಗಳು ಯಾವಾಗ?
ನಮ್ಮ ಸ್ಟುಡೀಯೊಸ್ ನಿಂದ ತುಂಬಾ ಫಾಸ್ಟಾಗಿ ಏನೋ ಮಾಡ್ಬೇಕು ಅಂತ ನುಗ್ತಾ ಇಲ್ಲ. ನಿಧಾನಕ್ಕೆ ಹೊಸತರದ ಸಿನ್ಮಾಗಳಿಗೆ ಫೈನಾನ್ಸ್ ಮಾಡೋಣ ಅಂತ. ಇವಾಗ ‘ಒಂದು ಮೊಟ್ಟೆಯ ಕಥೆ’ ಅಂತ ಮೊದಲನೇ ಸಿನಿಮಾ. ಇದೇ ಥರ ಬೇರೆಯವರು ಮಾಡಿರೋ ಸಿನ್ಮಾಗಳನ್ನು ತಗೊಂಡು ರಿಲೀಸ್ ಮಾಡೋ ಪ್ಲಾನ್ಸ್ ಇದೆ. ನಿಧಾನಕ್ಕೆ ಅರ್ಥ ಮಾಡ್ಕೊಳ್ತಾ ಇದ್ದೀವಿ. ಕನ್ನಡ ಇಂಡಸ್ಟ್ರಿನಲ್ಲಿ ತುಂಬಾ ಹಣ ಹಾಕಿ ಸಿನ್ಮಾ ಮಾಡೋದಿದ್ರೆ ಅದು ಸ್ಟಾರ್ ಗಳ ಜೊತೆನೇ ಮಾಡ್ಬೇಕು. ಹಾಗಾಗಿ ಯಾವ್ಯಾವ ಡಿಪಾರ್ಟ್ ಮೆಂಟ್ ನಲ್ಲಿ ನುಗ್ಬೇಕು ಅನ್ನೋದರ ಬಗ್ಗೆ ಸ್ಟಡಿ ಮಾಡ್ತಾ ಇದ್ದೀವಿ. ನಿಧಾನಕ್ಕೆ ಅದ್ರೂ ಒಳ್ಳೆ ಮೀನಿಂಗ್ ಇರೋ ಸಿನ್ಮಾಗಳನ್ನೇ ಮಾಡ್ಬೇಕು, ಮಾಡಿರೋ ಸಿನ್ಮಾ ಲಾಂಗ್ ಟೈಂ ಉಳೀಬೇಕು ಅನ್ನೋ ಡ್ರೀಂ ಇದೆ.
4. ಸಮಂತಾ ಅವರಿಗೆ ನೀವು ಡೈರೆಕ್ಷನ್ ಮಾಡೋದು ಯಾವಾಗ?
ಸಮಂತಾ ಅವರಿಗೆ ಯೂಟರ್ನ್ ಮಾಡ್ಬೇಕು ಅಂತ ಈಗ್ಲೂ ತುಂಬಾ ಆಸೆ ಇದೆ. ಇನ್ನೂ ಪ್ರೊಡಕ್ಷನ್ ಮೌಂಟ್ ಆಗೋದಕ್ಕೆ ತುಂಬಾ ಪ್ರಾಬ್ಲಮ್ಸ್ ಆಗ್ತಾ ಇದೆ. ಅವರ ಡೇಟ್ಸು, ನನ್ನ ಡೇಟ್ಸು ಮತ್ತು ಪ್ರೊಡ್ಯುಸರ್ ಇನ್ವೆಸ್ಟ್ ಮೆಂಟ್ ಪ್ಲಾನ್ಸ್ ನಿಂದ ನಿಧಾನ ಆಗ್ತಿದೆ. ಇನ್ನು ಯಾವಾಗ ಆಗ್ಬಹುದು ಅಥವಾ ತುಂಬಾ ನಿಧಾನ ಆದ್ರೆ ನಾನೇ ಮಾಡ್ತೀನಾ ಅನ್ನೋದು ಡೌಟು. ಈ ಟಾಪಿಕಿಗೆ ರೈಟ್ಸ್ ತಗೊಂಡಿದ್ದಾರೆ, ಡೇಟ್ಸ್ ಕೊಟ್ಟಿದ್ದಾರೆ ಅದ್ರೆ ಇನ್ನೂ ಅದು ಕೂಡಿ ಬರ್ತಾ ಇಲ್ಲ.
5. ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಸಿನಿಮಾ ಮಾಡುವ ಸುದ್ದಿ ಏನಾಯ್ತು?
ಗಣೇಶ್ ಅವರು ಮತ್ತು ನಾನು ನನ್ನ ಹೊಸ ಐಡಿಯಾ ಬಗ್ಗೆ ಮಾತಾಡ್ತಾ ಇದ್ವಿ. ಹೀಗೆ ಮಾತಾಡ್ಬೇಕಿದ್ರೆ ನನ್ನ ಐಡಿಯಾ ಅವರಿಗೂ ಇಷ್ಟ ಆಯ್ತು. ಸದ್ಯಕ್ಕೆ ಅವರಿಗೆ ತುಂಬಾ ಕಮಿಟ್ ಮೆಂಟ್ಸ್ ಇದೆ, ಮೂರ್ನಾಲ್ಕು ಸಿನ್ಮಾ ಒಪ್ಕೊಂಡಿದ್ದಾರೆ. ಇದೆಲ್ಲಾ ಆದ ನಂತರ ನಮ್ಮಿಬ್ರ ಸಿನಿಮಾ. ಈ ಗ್ಯಾಪಲ್ಲಿ ನಾನು ನನ್ನ ಸಿನಿಮಾ ಮಾಡಿದ್ರೂ ಮಾಡ್ಬಹುದು. ಅವರ ಸಿನ್ಮಾಗಳು ಮುಗಿಯೋವರೆಗೂ ಕಾಯ್ಬೇಕು.
6. ಸ್ಯಾಂಡಲ್ ವುಡ್ ಬಿಟ್ಟು ಬೇರೆ ಭಾಷೆ ಸಿನ್ಮಾ ನಿರ್ದೇಶನ ಮಾಡುವ ಪ್ಲಾನ್ ಇದೆಯಾ?
ಕನ್ನಡ ಭಾಷೇಲಿ ಹುಟ್ಟಿ ಬೆಳೆದಿರೋದ್ರಿಂದ, ಇಲ್ಲಿನ ರಿಯಾಲಿಟಿಸ್ ಚೆನ್ನಾಗಿ ಗೊತ್ತಿರೋದ್ರಿಂದ ಈಸಿಯಾಗಿ ಬರುತ್ತೆ. ಬೇರೆ ಭಾಷೆಯಲ್ಲಿ ಸಿನ್ಮಾ ಮಾಡ್ಬೇಕು ಅನ್ನೋ ‘excitement’ ಅಷ್ಟಿಲ್ಲ. ಒಂದು ವೇಳೆ ಮಾಡಿದ್ರೆ ಹಿಂದಿ ಮಾಡ್ಬಹುದು. ಅದು ಸ್ವಲ್ಪ ಹತ್ರ ಕನ್ನಡ ಆದ್ಮೇಲೆ. ಆದ್ರೆ ಬೇರೆ ಭಾಷೇಲಿ ಮಾಡ್ಲೇಬೇಕು ಅನ್ನೋ ಡ್ರೀಂ ಏನೂ ಇಲ್ಲ.
7. ಲೂಸಿಯಾ, ಯೂಟರ್ನ್ ಗಳಂಥಹ ಸಿನಿಮಾ ಮಾಡಿದ ನಿಮಗೆ ಹೊಸಬರ ಬೇರೆ ಜಾನರ್ ನ ‘ಒಂದು ಮೊಟ್ಟೆಯ ಕಥೆ’ ಹೇಗೆ ಇಷ್ಟವಾಯ್ತು?
‘ಒಂದು ಮೊಟ್ಟೆಯ ಕಥೆ’ ಟೈಟಲ್ ತುಂಬಾ ಇಷ್ಟ ಆಯ್ತು. ಆಮೇಲೆ ಅದ್ರ ಬಗ್ಗೆ ಇನ್ಫಾರ್ಮೇಷನ್ ಕಲೆಕ್ಟ್ ಮಾಡಿ ಸಿನ್ಮಾ ನೋಡ್ದೆ. ಅದನ್ನು ನೋಡ್ತಿದ್ದ ಹಾಗೆ ಅದೇ ಥರ ಸಿನ್ಮಾನ ನಾನು ಮಾಡ್ಬೇಕು ಅಂತ ತುಂಬಾ ಅಸೆ ಪಟ್ಟವನು ಅದರೆ ಮಾಡೋಕೆ ಆಗಿರ್ಲಿಲ್ಲ. ಹೊಸಬ್ರಲ್ಲಿ ಒಂದು ರೀತಿಯ ಇನ್ನೋಸೆನ್ಸು ಇರುತ್ತೆ. ಆ ಇನ್ನೋಸೆನ್ಸು ಸಿನ್ಮಾದಲ್ಲಿ ಕಾಣುತ್ತೆ. ನನ್ದು ಮೂರು ಸಿನ್ಮಾ ಡೈರೆಕ್ಟ್ ಮಾಡಾಯ್ತು, ಐದು ಸಿನ್ಮಾ ಬರ್ದಾಯ್ತು. ಸೋ ಎಲ್ಲೋ ಒಂದು ಕಡೆ ನಾವು ಮೆಕ್ಯಾನಿಕಲ್ ಆಗ್ಬಿಟ್ಟಿರ್ತೀವಿ. ಹಾಗಾಗಿ ಈ ಥರದ ಇನ್ನೋಸೆನ್ಸನ್ನ ಬೇರೆಯವರು ಯಾರೋ ಮಾಡ್ದಾಗ ಅದು ತುಂಬಾ ಇಷ್ಟ ಆಗಿ ಅದ್ರಲ್ಲಿ ನಾನು ಹೇಗೆ ಕೈ ಜೋಡಿಸ್ಬಹುದು, ಅವರೇ ಮಾಡಿದಾಗ ಆ ಸಿನ್ಮಾನ ಯಾರೂ ನೋಡ್ದೆ ಇರ್ಬಹುದು ಅಂತ ಅನ್ನಿಸಿ ನಾನು ಅದನ್ನು acquire ಮಾಡ್ದೆ.
8. ಸಿನಿಮಾ ಮಾಡಬೇಕನ್ನೋ ಹೊಸ ಹುಡುಗರಿಗೆ ನೀವು ಕೊಡುವ ಸಲಹೆಗಳೇನು?
ಇವತ್ತಿನ ದಿನಗಳಲ್ಲಿ ನೋಡ್ದಾಗ ಎಲ್ರಿಗೂ ಸಿನ್ಮಾ ಮಾಡ್ಬೇಕನ್ನೋ ಆಸೆ ಬರುತ್ತೆ. ಅದರೆ ಅದನ್ನು ಯಾಕೆ ಮಾಡ್ಬೇಕು?, ಸುಮ್ನೆ ಒಂದು ಫೇಮ್ ಗಾಗಿನಾ? ಅಥವಾ ತುಂಬಾ ದುಡ್ಡು ಮಾಡ್ಬೇಕು ಅಂತ ಅನ್ಕೊಂಡು ಮುಂದೆ ಬರೋರಿಗೆ ಏನೂ ಮಾಡೋಕಾಗಲ್ಲ. ಸಿನ್ಮಾ ಯಾಕೆ ಮಾಡ್ಬೇಕು ಅನ್ನೋದಕ್ಕೆ ಮೊದ್ಲು ನಮಗೆ ನಾವೇ ಉತ್ತರ ಕೊಡ್ಕೋಬೇಕು. ಒಂದು ಕಥೆನಾ ನಾನ್ಯಾಕೆ ಸಾವಿರಾರು ಜನರ ಹತ್ರ ಶೇರ್ ಮಾಡ್ಕೋಬೇಕು ಅನ್ನೋದಕ್ಕೆಲ್ಲಾ ಸರಿಯಾದ ಮೀನಿಂಗ್ ಇದ್ದಾಗ ಮಾತ್ರ ಸಿನ್ಮಾ ಮಾಡೋ ಯೋಚ್ನೆ ಮಾಡ್ಬೇಕು. ಸಿನ್ಮಾ ಮಾಡೋದು ಒಂದು passion ಜೊತೆಗೆ ತುಂಬಾ elements ಕಲಿಯೋದು ಇರುತ್ತೆ. ಬರೀ ಪುಸ್ತಕ ಓದೋದ್ರಿಂದ, ಬೇರೆ ಸಿನ್ಮಾಗಳನ್ನು ನೋಡೋದ್ರಿಂದ ಅಷ್ಟಾಗಿ ಬರಲ್ಲ. ಅದನ್ನು ಒಂದಷ್ಟು ಸೆಟ್ ಗಳಲ್ಲಿ ಅಸಿಸ್ಟೆಂಟ್ ಆಗಿ, ಅಸೋಸಿಯೇಟ್ ಆಗಿ ಕಲೀಬೇಕು. ಕ್ರಿಯೇಟಿವಿಟಿಗಿಂತ ಹೆಚ್ಚಾಗಿ ಒಂದು ಟೀಂನ ಹೇಗೆ ಹ್ಯಾಂಡಲ್ ಮಾಡ್ಬೇಕು ಅದು ತುಂಬಾ ಇಂಪಾರ್ಟೆಂಟ್ ಆಗುತ್ತೆ. ಫಸ್ಟ್ ಸಿನ್ಮಾ ಮಾಡೋರಿಗೆ ನಾನು ಹೇಳೋದು ಇಷ್ಟೇನೆ, ಮೊದ್ಲು ನೀವ್ಯಾಕೆ ಸಿನ್ಮಾ ಮಾಡ್ಬೇಕು ಅನ್ನೋದಕ್ಕೆ ಅರ್ಥ ಹುಡುಕ್ಕೊಳ್ಳಿ ಆಮೇಲೆ ಒಂದಷ್ಟು experience ಅನ್ನು ಪಡ್ಕೊಳ್ಳಿ. ನಿಮ್ಗೆ ಸಿನ್ಮಾನ ಕಡಿಮೆ ಬಜೆಟಲ್ಲಿ ಯಾವ್ದೇ ವೇಸ್ಟೇಜ್ ಇಲ್ಲದೆ ಮಾಡಿ ಜನರನ್ನು ಎಂಟರ್ ಟೇನ್ ಮಾಡ್ಬೇಕಿದ್ರೆ On-set experience ತುಂಬಾ ಅಗತ್ಯ. ತುಂಬಾ dedication ಮತ್ತು sacrifice ಮಾಡಿದಾಗಲೇ ಒಂದೊಳ್ಳೆ ಸಿನಿಮಾ ಮಾಡೋಕೆ ಸಾಧ್ಯ.
9. ಇತ್ತೀಚಿನ ಪ್ರಯೋಗಶೀಲ ಸಿನಿಮಾಗಳ ಬಗ್ಗೆ ನಿಮ್ಮ ಅನಿಸಿಕೆಗಳು?
ಮೊದ್ಲಿನಿಂದಲೂ ಈ ಥರ experimental ಸಿನಿಮಾಗಳು ಬರ್ತಾನೆ ಇತ್ತು ಅದರೆ ಮೊದ್ಲು ಸೋಷಿಯಲ್ ಮೀಡಿಯಾ ಇರ್ಲಿಲ್ಲ. ಹಾಗಾಗಿ ಅದ್ರ ಬಗ್ಗೆ ಮಾತುಕತೆಗಳು ತುಂಬಾ ಕಡಿಮೆ ಆಗ್ತಿತ್ತು. ಈಗ ಸೋಷಿಯಲ್ ಮೀಡಿಯಾ ಇರೋದ್ರಿಂದ ಅದ್ರ ಬಗ್ಗೆ ಮಾತು ಜಾಸ್ತಿ ಆಗ್ತಾ ಇದೆ. ಇನ್ನೊಂದು ಇವಾಗ ಡಿಜಿಟಲ್ ಟೆಕ್ನಾಲಜಿ ಬಂದು ಸಿನ್ಮಾ ಮೇಕಿಂಗನ್ನು ಇನ್ನೂ ಸಿಂಪಲ್ ಮಾಡ್ಬಿಟ್ಟಿದೆ. ಹಾಗಾಗಿ ಬರೀ ಐಡಿಯಾಗಳನ್ನಿಟ್ಟು ಕೂತವರು ಬಂದು ಸಿನ್ಮಾನ ಮಾಡೋಕೆ ಶುರು ಮಾಡಿದ್ದಾರೆ. ಇದು ತುಂಬಾ ಒಳ್ಳೆಯ ಬೆಳವಣಿಗೆ ಕೂಡ.
10. ಮತ್ತೆ ‘ಲೈಫು ಇಷ್ಟೇನೆ’ ಥರದ ಸಿನಿಮಾ ಮಾಡಲ್ವಾ?
‘ಲೈಫು ಇಷ್ಟೇನೆ’ ಥರದ ಸಿನಿಮಾ ಆಗಾಗ ನೋಡ್ದಾಗ ಮತ್ತೆ ಒಂದು ಲವ್ ಸ್ಟೋರಿ, ಹ್ಯೂಮನ್ ಡ್ರಾಮಾ, ಎಮೋಷನಲ್ ಡ್ರಾಮಾನ ಕ್ರಿಯೇಟ್ ಮಾಡ್ಬೇಕು ಅಂತ ಅನ್ಸುತ್ತೆ. ಆದ್ರೆ ಈಗ ತಲೆ ಥ್ರಿಲ್ಲರ್, ಲಾರ್ಜರ್ ಟಾಪಿಕ್ಸ್ ಕಡೆಗೆ ಓಡ್ತಿರೋದ್ರಿಂದ ಅದು ಯಾವಾಗ ಆಗುತ್ತೆ ಗೊತ್ತಿಲ್ಲ.
11. ಯೂಟರ್ನ್ ಗೆ ಎರಡು ದೊಡ್ಡ ಪ್ರಶಸ್ತಿಗಳು ಸಿಕ್ಕಿವೆ, ಹೇಗನಿಸ್ತಿದೆ?
ನನಗೆ ಯೂಟರ್ನ್ ಗೆ ಬಂದಿರೋ ಬೇರೆ ಎಲ್ಲಾ ಪ್ರಶಸ್ತಿಗಳಿಗಿಂತ ಹೆಚ್ಚಾಗಿತುಂಬಾ ಖುಶಿ ಕೊಟ್ಟಂತ ಪ್ರಶಸ್ತಿ ಏನಂತ ಅಂದ್ರೆ ಗೌರ್ಮೆಂಟವ್ರು ಫ್ಲೈ ಓವರನ್ನು ರಿಪೇರ್ ಮಾಡಿದ್ದು. ಆಮೇಲೆ ತುಂಬಾ ಜನಕ್ಕೆ ಈಗ ಟ್ರಾಫಿಕ್ ಸಿಗ್ನಲನ್ನು ಬ್ರೇಕ್ ಮಾಡೋಕೆ ಒಂಥರಾ guilt ಕಾಡುತ್ತೆ. ಅದಕ್ಕಿಂತ ದೊಡ್ಡ ಆವಾರ್ಡ್ ಮತ್ತೊಂದಿಲ್ಲ. ಉಳಿದದ್ದೆಲ್ಲಾ ಬರೀ ಒಂದು underlining ಥರ ಅಷ್ಟೇನೆ. ಡಬಲ್ ರೋಡ್ ಫ್ಲೈ ಓವರ್ ಪರ್ಮನೆಂಟಾಗಿ ರಿಪೇರ್ ಆಗಿರೋದು ತುಂಬಾ ದೊಡ್ಡ ಆವಾರ್ಡು.
12. ಪವನ್ ಅವರು ಹೀರೊ ಆಗೋದು ಯಾವಾಗ? ನೀವು ಹೀರೋ ಆಗುವ ಸಿನಿಮಾ ಯಾವ ಥರ ಇರ್ಬೇಕು?
ನಾನು ಹೀರೋ ಆಗ್ಬೇಕು ಅಂತ ಯಾವತ್ತೂ ಅಂದ್ಕೊಂಡಿಲ್ಲ ಮತ್ತು ಆ ಥರ ಯಾವತ್ತೂ ಮಾಡೋಕು ಹೋಗಲ್ಲ. ನಾನು ನಟ ಆಗಿ ಬಂದಿರೋದ್ರಿಂದ ಪಾತ್ರಗಳನ್ನು ಮಾಡಿದ್ದೇನೆ. ಸದ್ಯಕ್ಕೆ ಒಂದು ಸಿನಿಮಾದಲ್ಲಿ ಒಂದು ಪಾತ್ರ ಮಾಡ್ತಾ ಇದ್ದೇನೆ. ಡೈರೆಕ್ಷನ್ ನಲ್ಲಿ ಒಂದು ಸ್ವಲ್ಪ ಹೆಸರು ಮಾಡಿದ್ದೇನೆ ಅಂದ ಕೂಡಲೇ ಹೀರೋ ಆಗ್ಬೇಕು ಅನ್ನುವ ಯಾವುದೇ ರೀತಿಯ ಆಸೆ ನನಗಿಲ್ಲ. ಅಷ್ಟೊಂದು ಟ್ಯಾಲೆಂಟೂ ಇಲ್ಲ. ಅವಾಗವಾಗ ನನಗೂ ಒಂದು ಚೇಂಛ್ ಇರ್ಲಿ ಅಂತ ಪಾತ್ರಗಳನ್ನು ಮಾಡ್ತಾ ಇರ್ತೀನಿ.