ಮೈಸೂರು: ಹಲವು ದಿನಗಳಿಂದ ನಂಜನಗೂಡು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಯ ದಿನ ರಿಲ್ಯಾಕ್ಸ್ ಮೂಡ್ ನಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಡಿಆರ್ ಸಿ ಚಿತ್ರ ಮಂದಿರಕ್ಕೆ ತೆರಳಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಜ್ ಕುಮಾರ ಚಿತ್ರವನ್ನು ವೀಕ್ಷಿಸಿದ್ದರು. ಸೋಮವಾರ ಪವರಸ್ಟಾರ್ ಪುನೀತ್ ಮುಖ್ಯಮಂತ್ರಿಗಳ ಬೆಂಗಳೂರಿನ ನಿವಾಸಕ್ಕೆ ತೆರಳಿ ಆಶೀರ್ವಾದವನ್ನು ಪಡೆದಿದ್ದಾರೆ.
ಅವರಿಗೆ ಸ್ನೇಹಿತರೊಬ್ಬರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಜ್ ಕುಮಾರ್ ಚಿತ್ರ ವರನಟರನ್ನು ನೆನಪಿಸುತ್ತದೆ ಎಂದಿದ್ದರಂತೆ. ಅದರಂತೆ ನಟ ಪುನೀತ್ ಗೆ ಫೋನಾಯಿಸಿ ನಾನು ನಿನ್ನ ರಾಜ್ ಕುಮಾರ್ ಚಿತ್ರವನ್ನು ನೋಡಲು ಹೋಗುತ್ತಿದ್ದೇನೆ ಎಂದು ತಿಳಿಸಿದ್ದು, ಅದರಿಂದ ಸಂತಸಗೊಂಡ ಪುನೀತ್ ನಾಳೆ ನಿಮ್ಮಲ್ಲಿಗೆ ಬಂದು ಆಶೀರ್ವಾದ ಪಡೆಯುತ್ತೇನೆ ಎಂದಿದ್ದರಂತೆ. ಅದರಂತೆ ಸೋಮವಾರ ಬೆಳಿಗ್ಗೆ ಮುಖ್ಯಮಂತ್ರಿಗಳ ಮನೆಗೆ ತೆರಳಿದ ರಾಜ್ ಕುಮಾರ್ ಚಿತ್ರತಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶೀರ್ವಾದ ಪಡೆದಿದೆ. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಮುಖ್ಯಮಂತ್ರಿಗಳು ಪವರ್ ಸ್ಟಾರ್ ಅಭಿನಯವನ್ನು ಶ್ಲಾಘಿಸಿದ್ದಾರೆ.