ಮಂಡ್ಯ: ಆಚಾರ್ಯ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಆಚರಣೆ ಹಿನ್ನಲೆಯಲ್ಲಿ ಮೇಲುಕೋಟೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಪ್ರದರ್ಶಿಸಿದ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಗಮನಸೆಳೆಯಿತು.
ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮದಡಿ ನಡೆದ ಭರತನಾಟ್ಯ ಪ್ರದರ್ಶನ ಮನಮೋಹಕವಾಗಿ ಮೂಡಿ ಬಂತಲ್ಲದೆ, ಭಾನುವಾರ ಇಡೀ ದಿನ ಭರತನಾಟ್ಯ ಪ್ರದರ್ಶನ ನಡೆದಿದ್ದು ವಿಶೇಷವಾಗಿ ಗಮನ ಸೆಳೆಯಿತು. ಬೆಂಗಳೂರಿನ ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರ ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಸಹಕಾರದಲ್ಲಿ ನೃತ್ಯೋತ್ಸವ ನಡೆಯಿತು. ನಾಟ್ಯದ ಮೂಲಕವೇ ಮಕ್ಕಳು ಪುಷ್ಪಾಂಜಲಿ, ಕೃಷ್ಣಾಲೀಲಾಮೃತ, ರಾಮಾನುಜ ತಿಲ್ಲಾನ, ಶಿವತಾಂಡವ, ದುರ್ಗಾವೈಭವ, ಸೇರಿದಂತೆ ಭರತನಾಟ್ಯದ 26 ಸಮೂಹ ನೃತ್ಯಗಳನ್ನು ಪ್ರದರ್ಶಿಸಿ ಭಗವದ್ ರಾಮಾನುಜಾಚಾರ್ಯರು ಮತ್ತು ಶ್ರೀ ಚೆಲುವನಾರಾಯಣಸ್ವಾಮಿಗೆ ನಮನ ಸಲ್ಲಿಸಿದರು. ಈ ನಾಟ್ಯ ಪ್ರದರ್ಶನದಲ್ಲಿ ಐದು ವರ್ಷದಿಂದ ಹದಿನಾರು ವರ್ಷದ ವಯೋಮಾನದ ಪ್ರತಿಭಾವಂತ ಮಕ್ಕಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮೂಲತಃ ಪ್ರತಿಭಾವಂತಳಾದ ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರದ ರಾಜ್ಯಾಧ್ಯಕ್ಷೆಯಾದ ಸ್ವಾತಿ ಪಿ.ಭಾರದ್ವಾಜ್ ಬೆಂಗಳೂರಿನಲ್ಲಿ ಬಡ ಮತ್ತು ಮಧ್ಯಮವರ್ಗದ ಪ್ರತಿಭಾವಂತ ಮಕ್ಕಳನ್ನು ಆಯ್ದುಕೊಂಡು, ಅವರೆಲ್ಲರನ್ನೂ ಸಂಘಟಿಸಿ ಹಲವು ಹಂತದ ಭರತನಾಟ್ಯದ ತರಬೇತಿ ನೀಡಿ ಮೇಲುಕೋಟೆಗೆ ಕರೆತಂದು ಪ್ರದರ್ಶನ ನೀಡಿದ್ದರು. ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಹಾಸನದ ನಾಟ್ಯಭೈರವಿ, ಬೆಂಗಳೂರಿನ ನಾದಾಲಯ ನೃತ್ಯ ತಂಡ, ಕನಸು- ನನಸು ಕಲಾನಕೇತನ, ಶ್ರೀಲಲಿತಾ ಕಲಾನಿಕೇತನ ಭರತನಾಟ್ಯ ಶಾಲೆಯ ಪುಟಾಣಿಗಳು ಪಾಲ್ಗೊಂಡು ಗಮನಸೆಳೆದರು. ಭರತನಾಟ್ಯ ಪ್ರದರ್ಶನ ನೀಡಿದ ಮಕ್ಕಳಿಗೆ ದೇವಾಲಯದ ಗೋಪುರ ಮತ್ತು ರಾಮಾನುಜಾಚಾರ್ಯರನ್ನೊಳಗೊಂಡ ಆಕರ್ಷಕ ಸ್ಮರಣಿಕೆ, ಪ್ರಮಾಣ ಪತ್ರವನ್ನು ವಿತರಿಸಲಾಯಿತು.