ಬೆಂಗಳೂರು: ಇನ್ಮುಂದೆ ರಾಜ್ಯದಲ್ಲಿನ ಮಲ್ಟಿಪ್ಲೆಕ್ಸ್ ಗಳು ಸೇರಿದಂತೆ ಎಲ್ಲ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶ ದರ ನೀತಿ ಜಾರಿಯನ್ವಯ ಸಿನಿಮಾ ಮಂದಿರಗಳ ಪ್ರವೇಶ ದರದ ಗರಿಷ್ಠ ಮಿತಿಯನ್ನು ತೆರಿಗೆ ಹೊರತುಪಡಿಸಿ ರೂ. 200 ಗಳಿಗೆ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.
ಏಕ ರೀತಿಯ ಪ್ರವೇಶ ದರವನ್ನು ಬಜೆಟ್ ನಲ್ಲಿ ಮಂಡಿಸಲಾಗಿತ್ತಾದರೂ ಅದು ಜಾರಿಗೆ ಬಂದಿರಲಿಲ್ಲ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿ ಬಂದಿದ್ದವು. ಈ ನಡುವೆ ಮೇ. 1ರಂದು ಸ್ವತಃ ಮುಖ್ಯ ಮಂತ್ರಿ ಸಿದ್ದರಾಮಯ್ಯನವರೇ 1050 ರೂ. ನೀಡಿ ಬಾಹುಬಲಿ-2 ಸಿನಿಮಾ ನೀಡಿ ಎಲ್ಲರನ್ನು ಬೆಚ್ಚಿ ಬೀಳಿಸಿದ್ದರು. ತಮ್ಮ ಬಜೆಟ್ ನಲ್ಲಿ 200 ನಿಗದಿ ಪಡಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿಗಳು ತಾವೇ ದುಬಾರಿ ಟಿಕೆಟ್ ಖರೀದಿ ಮಾಡಿ ಸಿನಿಮಾ ನೋಡಿದ್ದು ರಾಜ್ಯದಲ್ಲಿ ಸುದ್ದಿಗೆ ಗ್ರಾಸವಾಗಿತ್ತಲ್ಲದೆ, ಜನರೇ ಅವರ ಬಗ್ಗೆ ಗೇಲಿ ಮಾಡಿ ನಗುವಂತಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿಯೂ ಚರ್ಚೆಗಳಾಗಿದ್ದವು.
ಇದೆಲ್ಲವನ್ನು ಗಮನಿಸಿದ ಸರ್ಕಾರ ಕೊನೆಗೂ ದಿಟ್ಟ ನಿರ್ಧಾರ ಕೈಗೊಂಡಿದ್ದು, ಮಲ್ಟಿಫ್ಲೆಕ್ಸ್ಗಳಲ್ಲಿ ಏಕರೀತಿಯ ದರವನ್ನು ಬಜೆಟ್ ನಲ್ಲಿ ಘೋಷಣೆ ಮಾಡಿದಂತೆಯೇ ನಿಗದಿ ಪಡಿಸಿದೆ. ಅದರಂತೆ ಕರ್ನಾಟಕದಲ್ಲಿ ಪ್ರದರ್ಶನಗೊಳ್ಳುವ ಎಲ್ಲಾ ಭಾಷೆಯ ಚಲನಚಿತ್ರಗಳಿಗೆ ಈ ದರ ಅನ್ವಯಿಸುತ್ತದೆ. ಹಾಗೂ ರೂ. 200 ಗಳ ಗರಿಷ್ಠ ಮಿತಿಯು ಮಲ್ಟಿಪ್ಲೆಕ್ಸ್ ಗಳಲ್ಲಿ ಗೋಲ್ಡ್ ಕ್ಲಾಸ್ ಸ್ಕ್ರೀನ್ ಮತ್ತು ಗೋಲ್ಡ್ ಕ್ಲಾಸ್ ಸೀಟುಗಳನ್ನು ಒಟ್ಟು ಸೀಟುಗಳ ಶೇ.10 ರಷ್ಟು ಮೀರದಂತೆ ಹೊರತುಪಡಿಸಲಾಗಿದೆ.
ಐ-ಮಾಕ್ಸ್ ಮತ್ತು 4 ಡಿ ಎಕ್ಸ್ ಚಿತ್ರಮಂದಿರಗಳನ್ನು ಗರಿಷ್ಠ ಪ್ರವೇಶ ದರ ಮಿತಿಯಿಂದ ಹೊರತುಪಡಿಸಿ ಸರ್ಕಾರಿ ಆದೇಶ ಹೊರಡಿಸಿದೆ.