ಗೋಲ್ಡನ್ ಸ್ಟಾರ್ ಎಂದೇ ಖ್ಯಾತವಾದ ಗಣೇಶ್ ಮತ್ತೆ ಮುಗುಳುನಗೆಯನ್ನು ಬೀರಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಸಿನಿಮಾವೊಂದು ಬಿಡುಗಡೆಗೂ ಮುನ್ನ ಸುದ್ಧಿ ಮಾಡುತ್ತಿದ್ದು, ಪ್ರೇಕ್ಷಕರ ಮುಗುಳುನಗೆಗೆ ಕಾರಣವಾಗಿದೆ.
ಸಿನಿಮಾ ನಿರ್ದೇಶಕರು ಇನ್ನೊಬ್ಬ ನಿರ್ದೇಶಕನ ಸಿನಿಮಾವನ್ನು ಬಿಡುಗಡೆಗೂ ಮುನ್ನ ನೋಡುವುದು ವಿರಳ. ಅಂತಹದ್ದರಲ್ಲಿ ನಿರ್ದೇಶಕ ಸೂರಿ ಯೋಗರಾಜ್ ಭಟ್ಟರ ‘ಮುಗುಳುನಗೆ’ ಸಿನಿಮಾವನ್ನು ನೋಡಿದ ಮೊದಲ ಪ್ರೇಕ್ಷಕನಾಗಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನಿರ್ದೇಶಕ ಸೋರಿ ಸದ್ಯಕ್ಕೆ ಟಗರು ಸಿನಿಮಾ ಮುಕ್ತಾಯಗೊಳಿಸಿದ್ದು, ಜು.1 ರಿಂದ ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ನಡೆಸಲಿದ್ದಾರೆ. ಬಿಡುವಿರದ ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು ಸಿನಿಮಾ ನೋಡಿದ್ದಾರೆ ನಿರ್ದೇಶಕ ಸೂರಿ.
ಯೋಗರಾಜ್ ಭಟ್ ರ ಕಂಬ್ಯಾಕ್ ಎಂದು ಹೇಳಿರುವ ಸೂರಿ ಭಟ್ಟರ ಟ್ರೇಡ್ ಮಾರ್ಕ್ ಇದೆ ಎಂದು ಹೇಳಿದ್ದಾರೆ. ಗಣೇಶ್ ಸಹ ಉತ್ತಮ ನಟನೆ ನೀಡಿದ್ದು, ಒಳ್ಳೆಯ ಸಿನಿಮಾ ಎಂದು ಹೇಳಿದ್ದಾರೆ. ಚಿತ್ರ ನಿರ್ದೇಶಕ ಯೋಗರಾಜ್ ಭಟ್, ನಟ ಗಣೇಶ್ ಹಾಗೂ ಇನ್ನಿತರ ತಂತ್ರಜ್ಞರೊಂದಿಗೆ ಸಿನಿಮಾ ವೀಕ್ಷಿಸಿರುವ ನಿರ್ದೇಶಕ ಸೂರಿ, ಭಟ್ಟರು-ಗಣೇಶ್ ಜೋಡಿಯಿಂದ ಪ್ರೇಕ್ಷಕರು ಮುಂಗಾರು ಮಳೆಯಂತಹ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ಆದರೆ ಇದು ಪ್ರೇಕ್ಷಕರ ನಿರೀಕ್ಷೆಗಿಂತಲೂ ಮೇಲ್ಮಟ್ಟದಲ್ಲಿದ್ದು, ಇಂದಿನ ಟ್ರೆಂಡ್ ಗೆ ತಕ್ಕಂತೆ ಇದೆ ಎಂದು ಹೇಳಿದ್ದಾರೆ. ಮುಗುಳುನಗೆ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದು, ಸುಜ್ಞಾನ್ ಛಾಯಾಗ್ರಹಣವಿದೆ.