ಮೈಸೂರು: ಕಳೆದ ಕೆಲವು ತಿಂಗಳಿಂದ ನೇಮಕವಾಗದೆ ಖಾಲಿಯಿದ್ದ ಮೈಸೂರಿನ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಕೊನೆಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರನ್ನು ಆಯ್ಕೆ ಮಾಡಿದ್ದು ಹುಣಸೂರಿನ ರಂಗಪ್ರತಿಭೆ ಭಾಗೀರಥಿಬಾಯಿ ಕದಂ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಇದಕ್ಕೂ ಮೊದಲು ಜನಾರ್ದನ್ (ಜನ್ನಿ) ನಿರ್ದೇಶಕರಾಗಿದ್ದರು. ಅವರು ಸೇವಾವಧಿ ಮುಗಿದ ಬಳಿಕ ಕಳೆದ ಎಂಟು ತಿಂಗಳಿನಿಂದ ನಿರ್ದೇಶಕ ಸ್ಥಾನಕ್ಕೆ ಯಾರನ್ನೂ ನೇಮಕ ಮಾಡದೆ ಕಾಲ ತಳ್ಳಲಾಗಿತ್ತು. ಇದೀಗ ಭಾಗೀರಥಿಬಾಯಿ ಕದಂ ಅವರನ್ನು ನೇಮಕ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಆದೇಶ ಹೊರಡಿಸಿದ್ದಾರೆ. ಭಾಗೀರಥಿಬಾಯಿ ಕದಂ ಅವರು ಹುಣಸೂರು ತಾಲೂಕು ಗಾವಡಗೆರೆ ಗ್ರಾಮದವರಾಗಿದ್ದು, ಪಿಯುಸಿ ಓದಿನ ನಂತರ ಹೆಗ್ಗೋಡಿನ ನಿನಾಸಂ ತರಬೇತಿ ಪಡೆದಿದ್ದು, ರಾಷ್ಟ್ರೀಯ ರಂಗಶಾಲೆಯಲ್ಲಿಯೂ ಮೂರು ವರ್ಷಗಳ ತರಬೇತಿ ಪಡೆದಿದ್ದಾರೆ. ವಿದೇಶದಲ್ಲೂ ಛಾಪು ಮೂಡಿಸಿರುವ ಇವರು ಅಸ್ಸಾಂನ ರಂಗಕಲಾವಿದ, ಸಿನಿಮಾನಟ ಬಹುರೂಲ್ ಇಸ್ಲಾಂ ಅವರನ್ನು ವಿವಾಹವಾಗಿದ್ದಾರೆ. ಆ ನಂತರ 1990ರಲ್ಲಿ ಸೀಗಲ್ ಥಿಯೇಟರ್ ಅಕಾಡೆಮಿ ಸ್ಥಾಪಿಸಿ ಮೂವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ಮಿಸಿ, ನಿರ್ದೇಶನ ಮಾಡಿರುವ ಕೀರ್ತಿ ಇವರಿಗಿದೆ. ರಂಗ ನಿರ್ದೇಶಕ ಬಿ.ವಿ.ಕಾರಂತರ ಕಟ್ಟಿ ಬೆಳೆಸಿದ ಮೈಸೂರಿನ ರಂಗಾಯಣಕ್ಕೆ ಸುಮಾರು 28 ವರ್ಷಗಳ ಇತಿಹಾಸವಿದ್ದು, ಇದುವರೆಗೆ 9 ನಿರ್ದೇಶಕರನ್ನು ಕಂಡಂತಾಗಿದೆ.