ಮಂಡ್ಯ: ಮೈಸೂರು, ಉತ್ತರ ಕರ್ನಾಟಕದ ಭಾಷಾ ಶೈಲಿಯ ಚಿತ್ರಗಳು ತೆರೆಕಂಡಿವೆ. ಹಾಸನದ ಭಾಷಾ ಸೊಗಡಿನ ಚಿತ್ರಗಳು ಬಂದಿಲ್ಲ. ‘ನಮ್ಮೂರ್ ಹೈಕ್ಳು’ ಈ ಕೊರತೆ ನೀಗಿಸಲಿದೆ ಎಂದರು ನಿರ್ದೇಶಕ ಪ್ರಸನ್ನ ಶೆಟ್ಟಿ.
ತಮ್ಮದೇ ಕಾದಂಬರಿ ‘ಊರ ಉಸಾಬರಿ’ಯನ್ನು ಚಿತ್ರವಾಗಿಸಿರುವ ಖುಷಿ ಅವರಲ್ಲಿತ್ತು. ಇದು ಅವರ ನಿರ್ದೇಶನದ ಮೊದಲ ಸಿನಿಮಾವೂ ಹೌದು. ಹಾಸನದ ಭಾಷಾ ಸೊಗಡು ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುವ ವಿಶ್ವಾಸ ಅವರ ಮಾತಿನಲ್ಲಿತ್ತು. ಹಳ್ಳಿಯ ಯುವಕರ ಸಮಸ್ಯೆ, ರಾಜಕಾರಣವನ್ನು ಇಟ್ಟುಕೊಂಡು ಕಥೆ ಹೊಸೆದಿದ್ದಾರೆ. ಇದಕ್ಕೆ ಹಾಸ್ಯದ ರಸಾಯನ ನೀಡಿದ್ದಾರೆ.
ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಶಕೀಲ್ ಅಹ್ಮದ್ ಸಂಗೀತ ನೀಡಿದ್ದಾರೆ. ಹಾಸನ ಜಿಲ್ಲೆಯ ಗ್ರಾಮವೊಂದರಲ್ಲಿ ಚಿತ್ರದ ಸಂಪೂರ್ಣ ಚಿತ್ರೀಕರಣ ನಡೆದಿದೆ. ಜೂನ್ 30ರಂದು ಚಿತ್ರ ತೆರೆಗೆ ಬರಲಿದೆ.
‘ಗ್ರಾಮೀಣ ಸೊಗಡು ಚಿತ್ರದ ಜೀವಾಳ. ಹಳ್ಳಿ ಜಗತ್ತಿನಲ್ಲಿ ಸಮಸ್ಯೆಗಳು ಬೆಟ್ಟದಷ್ಟಿವೆ. ಇವುಗಳನ್ನು ಜನಪ್ರತಿನಿಧಿಗಳು ಬಗೆಹರಿಸಬೇಕು ಎಂಬುದು ಗ್ರಾಮೀಣರ ಅಪೇಕ್ಷೆ. ಆದರೆ, ಸಮಸ್ಯೆಗಳಿಗೆ ನಮ್ಮ ಬಳಿಯೇ ಪರಿಹಾರ ಇರುತ್ತವೆ. ಇದನ್ನು ಹಾಸ್ಯಮಯವಾಗಿ ಹೇಳಿದ್ದೇವೆ’ ಎಂದರು ಪ್ರಸನ್ನ ಶೆಟ್ಟಿ.
ಸುದ್ದಿಗೋಷ್ಠಿಯಲ್ಲಿ ಕುರಿ ಸುನಿಲ್ ಲವಲವಿಕೆಯಿಂದ ಇದ್ದರು. ‘ಚಿತ್ರದಲ್ಲಿ ಒಂದು ಐಟಂ ಸಾಂಗ್ ಇದೆ. ಅದರ ಚಿತ್ರೀಕರಣ ಎರಡೇ ದಿನದಲ್ಲಿ ಮುಗಿದು ಹೋಯಿತು. ಇನ್ನೊಂದು ದಿನ ಶೂಟಿಂಗ್ ನಡೆಯುತ್ತದೆಂದು ಕಾದಿದ್ದ ನಮಗೆ ಬೇಸರವಾಗಿತ್ತು’ ಎಂದು ನಕ್ಕರು ಸುನಿಲ್.
ಚಿತ್ರೀಕರಣದ ವೇಳೆ ನಡೆದ ಕೆಲವು ವಿಸ್ಮಯಗಳ ಬಗ್ಗೆಯೂ ಅವರ ಅನುಭವ ಹಂಚಿಕೊಂಡರು. ‘ಹಾಸನದ ದೊಡ್ಡಕುಳ ಗ್ರಾಮದಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಅಲ್ಲಿ 10 ವರ್ಷದಿಂದಲೂ ಗ್ರಾಮ ದೇವತೆಯ ಜಾತ್ರೆ ನಡೆದಿರಲಿಲ್ಲ. ನಾವು ಚಿತ್ರೀಕರಣಕ್ಕೆ ಹೋದ ವೇಳೆ ಜನರೇ ಉತ್ಸಾಹದಿಂದ ಜಾತ್ರೆ ನಡೆಸಿದರು. ಇದಕ್ಕಿಂತ ಖುಷಿ ಬೇರೊಂದಿಲ್ಲ’ ಎಂದರು ಸುನಿಲ್, ನಾಯಕಿ ಮಮತಾ ರಾವುತ್ಗೆ ಈ ಚಿತ್ರದಲ್ಲಿ ‘ಖಡಕ್ ಸಾವಿತ್ರಿ’ ಪಾತ್ರ ನೀಡಲಾಗಿದೆ. ‘ಕೈಯಲ್ಲಿ ಕೊಡಲಿ ಹಿಡಿದಿರುತ್ತೇನೆ. ಬಾಯಲ್ಲಿ ಅಡಕೆ–ಎಲೆ ಜಗಿಯುತ್ತಿರುತ್ತೇನೆ. ಎದುರಿಗೆ ಬಂದವರ ಮೇಲೆ ಉಗಿಯುವುದೇ ನನ್ನ ಕೆಲಸ’ ಎಂದು ಖಡಕ್ಕಾಗಿಯೇ ಹೇಳಿದರು.
ಕಥಾ ನಾಯಕ ಹಾಸನದ ರಘು ಅವರಿಗೆ ಇದು ಮೊದಲ ಸಿನಿಮಾ. ನಾಯಕ ನಟನಾಗುವ ಆಸೆ ಈ ಚಿತ್ರದಲ್ಲಿ ಈಡೇರಿದೆ ಎಂದು ಹೇಳುವುದನ್ನು ಅವರು ಮರೆಯಲಿಲ್ಲ. ವಿ. ಶ್ರೀನಿವಾಸ ಬಂಡವಾಳ ಹೂಡಿದ್ದಾರೆ. ದೀಪ್ತಿ, ಪವನ್ಕುಮಾರ್, ವಿನಯ್ ತಾರಾಬಳಗದಲ್ಲಿದ್ದಾರೆ.