‘ಕನಕ’ ಮತ್ತು ‘ಜಾನಿ ಜಾನಿ ಎಸ್ ಪಾಪ’ ಚಿತ್ರದಿಂದ ನಾಯಕಿ ರಚಿತಾ ರಾಮ್ ಹೊರಬರುವುದಕ್ಕೆ ತಾನು ಕಾರಣನಲ್ಲ ಎಂದು ಎರಡೂ ಚಿತ್ರಗಳ ನಾಯಕ ‘ದುನಿಯಾ’ ವಿಜಯ್ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಮುಂದೊಮ್ಮೆ ಅವಕಾಶ ಸಿಕ್ಕಿದರೆ ಖಂಡಿತಾ ರಚಿತಾ ಜೊತೆಗೆ ನಟಿಸುವುದಾಗಿ ಹೇಳಿದ್ದಾರೆ. ಇದಕ್ಕೂ ಮುನ್ನ ವಿಜಯ್ ಅಭಿನಯದ ‘ಕನಕ’ ಮತ್ತು ‘ಜಾನಿ ಜಾನಿ ಎಸ್ ಪಾಪ’ ಚಿತ್ರಗಳಿಗೆ ನಾಯಕಿಯಾಗಿ ರಚಿತಾ ರಾಮ್ ಆಯ್ಕೆಯಾಗಿದ್ದರು.
ಆದರೆ, ಎರಡೂ ಚಿತ್ರಗಳಲ್ಲಿ ನಟಿಸುವುದಕ್ಕೆ ಮುನ್ನವೇ ಹೊರಬಂದಿದ್ದರು. ಎರಡು ಚಿತ್ರಗಳಲ್ಲಿ ನಟಿಸುವುದಕ್ಕೆ ಮುನ್ನವೇ ರಚಿತಾ, ಎರಡೂ ಚಿತ್ರಗಳನ್ನು ಬಿಟ್ಟು ಹೋಗಿದ್ದೇಕೆ ಎಂದು ಕಾರಣ ಹುಡುಕಿದಾಗ, ‘ಕನಕ’ ಚಿತ್ರಕ್ಕೆ ರಚಿತಾ ನಾಯಕಿಯಾಗುವುದು ವಿಜಯ್ ಅವರಿಗೆ ಇಷ್ಟವಿಲ್ಲವಂತೆ ಎಂಬ ಉತ್ತರ ಸಿಕ್ಕಿತ್ತು.
‘ಕನಕ’ಗೂ ಮುನ್ನವ ತಮ್ಮ ನಿರ್ಮಾಣದ ‘ಜಾನಿ ಜಾನಿ ಎಸ್ ಪಾಪ’ ಎಂಬ ಚಿತ್ರಕ್ಕೆ ನಾಯಕಿಯನ್ನಾಗಿ ರಚಿತಾ ಅವರನ್ನು ಆಯ್ಕೆ ಮಾಡಿದ್ದರು ವಿಜಯ್. ಆ ಚಿತ್ರ ಶುರುವಾಗುವ ಮುನ್ನವೇ ‘ಕನಕ’ಗೂ ರಚಿತಾ ನಾಯಕಿ ಎಂದು ಗೊತ್ತಾಗಿ ವಿಜಯ್ ಅಪ್ಸೆಟ್ ಆಗಿದ್ದಾರಂತೆ. ‘ಜಾನಿ’ಗೂ ಮುನ್ನವೇ ‘ಕನಕ’ ಚಿತ್ರದಲ್ಲಿ ವಿಜಯ್ ಮತ್ತು ರಚಿತಾ ಒಟ್ಟಿಗೆ ಕಾಣಿಸಿಕೊಂಡುಬಿಟ್ಟರೆ, ಜೋಡಿ ಫ್ರೆಶ್ ಆಗಿರುವುದಿಲ್ಲ ಎಂಬ ಕಾರಣಕ್ಕೆ ‘ಕನಕ’ ಚಿತ್ರದಿಂದ ರಚಿತಾ ಅವರನ್ನು ಕೈಬಿಡಿ ಎಂದು ವಿಜಯ್, ಚಂದ್ರುಗೆ ತಾಕೀತು ಮಾಡಿದ್ದರಂತೆ. ಇದರಿಂದ ಬೇಸರಗೊಂಡ ರಚಿತಾ, ‘ಜಾನಿ’ ಚಿತ್ರದಿಂದಲೂ ಹೊರಬಂದರು ಎಂಬುದು ಸುದ್ದಿ.
ಈಗ ರಚಿತಾ ಹೊರಹೋಗುವುದಕ್ಕೂ, ತನಗೂ ಯಾವುದೇ ಸಂಬಂಧವಿಲ್ಲ ಎಂದು ವಿಜಯ್ ಹೇಳಿಕೊಂಡಿದ್ದಾರೆ. ‘ನಮ್ಮ ತಾಯಾಣೆಗೂ ಇದಕ್ಕೂ ನನಗೂ ಸಂಬಂಧವಿಲ್ಲ. ನಾಯಕಿಯನ್ನು ಆಯ್ಕೆ ಮಾಡುವುದು ನಿರ್ದೇಶಕರ ಕೆಲಸ. ನಾನು ನಾಯಕಿ ವಿಚಾರದಲ್ಲಿ ಎಂಟ್ರಿ ಆಗುವುದಿಲ್ಲ. ರಚಿತಾ ಒಳ್ಳೆಯ ನಟಿ. ಅವರ ಜೊತೆಗೆ ನಟಿಸಬೇಕು ಅಂತ ನನಗೂ ಆಸೆ ಇದೆ. ಆದರೆ, ಕಾರಣಾಂತರಗಳಿಂದ ಅದು ಕೂಡಿ ಬರಲಿಲ್ಲ. ಮುಂದೊಂದು ದಿನ ಅವರೇ ನನ್ನ ಚಿತ್ರದ ನಾಯಕಿ ಆದರೂ ಆಗಬಹುದು’ ಎನ್ನುತ್ತಾರೆ ವಿಜಯ್.