ಮೊಗವೀರ ಕುಟುಂಬದಲ್ಲಿ ಹುಟ್ಟಿದ ಪಮ್ಮಣ್ಣೆ ಪೆದ್ದು ಸ್ವಭಾವದವನು. ಜೀವನಕ್ಕಾಗಿ ಮರಳಿನಲ್ಲಿ ಚಿತ್ರ ಬಿಡಿಸಿ ಸಂಪಾದಿಸುತ್ತಿರುವ ಪಮ್ಮಣ್ಣನಿಗೆ ಮೂವರು ತಂಗಿಯರೆ ಜೀವನ. ಊರವರ ಬಾಯಿಂದ ಪೆದ್ದು ಎಂದೇ ಕರೆಯಲ್ಪಡುವ ಪಮ್ಮಣ್ಣನಿಗೆ ತನ್ನ ಕುಡುಕ ತಂದೆಯಿಂದ ‘ಗ್ರೇಟ್’ ಎಂದು ಅನಿಸಿಕೊಳ್ಳಬೇಕೆಂಬುದು ಹೆಬ್ಬಯಕೆ. ಸಾಂಸಾರಿಕ ಕಥೆಯೊಂದಿಗೆ ಉತ್ತಮ ಸಂದೇಶದೊಂದಿಗೆ ಪಮ್ಮಣ್ಣ ದಿ ಗ್ರೇಟ್ ಚಿತ್ರ ಸಾಗುತ್ತದೆ.
ಯುವ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಅವರು ನೇತ್ರಾವತಿ ನದಿ ತಿರುವಿಗೆ ಸಂಬಂಧಿಸಿದಂತೆ ಚಿತ್ರದಲ್ಲಿ ಉತ್ತಮ ಸಂದೇಶದೊಂದಿಗೆ ಸಾಂಸಾರಿಕ ಕತೆಯನ್ನು ಹೆಣೆದಿದ್ದಾರೆ. ಮೊಗವೀರ ಜನರ ನೋವು ನಲಿವುಗಳನ್ನು ಚಿತ್ರದಲ್ಲಿ ಬಣ್ಣಿಸುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾರೆ. ಚಿತ್ರದ ಪ್ರಾರಂಭದಿಂದಲೂ ಉತ್ತಮ ರೀತಿಯಲ್ಲಿ ಕತೆ ಸಾಗುತ್ತಿರುವ ವೇಳೆ ತುರುಕಿಸಲಾದ ಕೆಲವು ಹಾಸ್ಯ ತುಣುಕುಗಳು ನೋಡುಗರ ತಾಳ್ಮೆಯನ್ನು ಪರೀಕ್ಷಿಸುವಂತಿದೆ. ಇದಕ್ಕೆ ನಿರ್ದೇಶಕ ಕತ್ತರಿ ಹಾಕಬಹುದಿತ್ತು ಎಂದು ಭಾಸವಾಗುತ್ತದೆ.
ಪಮ್ಮಣ್ಣನ ಕಿವುಡು ತಂಗಿ ನೇತ್ರಾ ಕುಡುಕು ತಂದೆಯ ಮಧ್ಯಪಾನ ಚಟ, ಕಡು ಬಡತನದ ಜೀವನಕ್ಕೆ ಬೇಸತ್ತು ಊರಿನ ಸಾಹುಕಾರನ ಮಗ ಕರ್ಣನ ಬಣ್ಣದ ಮಾತು ಕೇಳಿ ಆತನ ಜತೆ ಮುಂಬೈ ಕಡೆ ಹೆಜ್ಜೆ ಹಾಕುತ್ತಾಳೆ. ಕಾಲೇಜು ದಿನಗಳಿಂದಲೇ ಅವಳನ್ನು ಬೆಟ್ಟದಷ್ಟು ಪ್ರೀತಿ ಮಾಡುತ್ತಿದ್ದ ಉಲ್ಲಾಸ್ ಆಕೆಯ ಪ್ರೀತಿಯಲ್ಲೇ ಬರುವಿಕೆಗಾಗಿ ಕಾದು ಕುಳಿತಿರುತ್ತಾನೆ. ಈ ನಡುವೆ ಊರಲ್ಲಿ ಅಲ್ಲೊಂದು ಇಲ್ಲೊಂದು ಅತ್ಯಾಚಾರ ಕೊಲೆ ನಡೆದ ಬಳಿಕ ಚಿತ್ರದಲ್ಲಿ ಹೊಸ ತಿರುವು ಪಡೆದುಕೊಳ್ಳುತ್ತದೆ. ಮುಂಬೈನಿಂದ ವಾಪಾಸ್ ಆದ ನೇತ್ರಾ ಉಲ್ಲಾಸ್ ಜತೆ ಸಪ್ತಪದಿ ತುಳಿಯುತ್ತಳಾ? ಪೆದ್ದು ಪಮ್ಮಣ್ಣ ಹೇಗೆ ದಿ ಗ್ರೇಟ್ ಅನಿಸುಕೊಳ್ಳುತ್ತಾನಾ ಎಂಬುದು ಚಿತ್ರದ ಸಸ್ಪೆನ್ಸ್.
ತುಳುನಾಡಿನ ಹಾಸ್ಯ ಚಕ್ರವರ್ತಿಯೆಂದೆ ಕರೆಸಿಕೊಂಡಿರುವ ಅರವಿಂದ್ ಬೋಳಾರ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಕಥಾನಾಯಕನಾಗಿ ತನ್ನ ಪ್ರೌಢಿಮೆಯ ಅಭಿನಯದ ಮೂಲಕ ಎಲ್ಲರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕಿ ನೇತ್ರಾ ಅವರ ಅಭಿನಯ ಮೆಚ್ಚುವಂತದ್ದು. ನಾಯಕ ಪೃಥ್ವಿ ಅಂಬರ್ ಅವರ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿಕೊಟ್ಟಿದ್ದಾರೆ.
ಎಂ.ಕೆ. ಸೀತಾರಾಮ ಕುಲಾಲ್ ರಚಿಸಿರುವ ತುಳು ಎವರ್‌ಗ್ರೀನ್ ಹಾಡು ‘ಮೋಕೆದ ಸಿಂಗಾರಿ’ಯನ್ನು ಈಗಿನ ಕಾಲಮಾನಕ್ಕೆ ತಕ್ಕ ಹಾಗೇ ಬದಲಾಯಿಸಿ ಚಿತ್ರೀಕರಿಸಿರುವ ಹಾಡು ಕೇಳಲು ಮತ್ತಷ್ಟು ಇಂಪಾಗಿದೆ. ಅದಲ್ಲದೆ ಚಿತ್ರದ ಮತ್ತೆರಡು ಹಾಡುಗಳಾದ ಕಾವೀ ಕೃಷ್ಣದಾಸ್ ರಚಿಸಿರುವ ‘ಮೀನ್ ಬೋಡೆ ಮೀನ್’ ಹಾಗೂ ಸುರೇಶ್ ಆರ್.ಎಸ್. ರಚನೆಯ ‘ಪಮ್ಮಣ್ಣೆ ಪಮ್ಮಣ್ಣೆ ’ಹಾಡು ಗುನುಗುವಂತಿದೆ. ಎಸ್.ಪಿ. ಚಂದ್ರಕಾಂತ್ ಸಂಗೀತ ಟ್ರೆಂಡ್ ನಲ್ಲಿದೆ. ಚಿತ್ರವನ್ನು ಕೃಷ್ಣ ನಾಯಕ್ ಕಾರ್ಕಳ ಹಾಗೂ ವೀರೇಂದ್ರ ಸುವರ್ಣ ಕಟೀಲ್ ಹಣ ಹಾಕಿದ್ದಾರೆ. ರಮೇಶ್ ಪಂಡಿತ್, ದನ್ವಿತ್ ಸುವರ್ಣ ಕಟೀಲ್, ವೀರೇಂದ್ರ ಸುವರ್ಣ ಕಟೀಲ್, ಸತೀಶ್ ಬಂದಲೆ, ಪ್ರಾಣ್ ಶೆಟ್ಟಿ, ದೀಪಕ್ ರೈ, ಪ್ರಕಾಶ್ ತೂಮಿನಾಡು ತಾರಾಗಣದಲ್ಲಿದ್ದಾರೆ.