ಮೈಸೂರು: ಕಿರಿಕ್ ಪಾರ್ಟಿ ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಯಶಸ್ವಿಯಾಗಿದ್ದಕ್ಕೆ ನಿರ್ದೇಶಕ ರಿಶಬ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚದಂತಹ ಗಂಭೀರ ಸಂದೇಶವನ್ನು ತಿಳಿ ಹಾಸ್ಯದೊಂದಿಗೆ ತಿಳಿಸುವುದು ನಮ್ಮ ಉದ್ದೇಶವಾಗಿತ್ತು. ಅದನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದ ಮೂಲಕ ಮಾಡಿದ್ದಾಗಿ ಹೇಳಿದರು.
ಈ ಸಿನಿಮಾದ ಎಲ್ಲಾ ಪಾತ್ರಗಳು ನಾನು ನೋಡಿದ ಪಾತ್ರಗಳಾಗಿದ್ದು, ಚಿತ್ರವು ಮೂರನೇ ವಾರದಲ್ಲಿಯೂ ಅದ್ಭುತ ಪ್ರದರ್ಶನ ಕಾಣುತ್ತಿದೆ ಎಂದ ಅವರು, ಕಾಸರಗೋಡು ಎಂಬುದೇ ಕನ್ನಡಿಗರಿಗೆ ಭಾವನಾತ್ಮಕ ವಿಷಯ, ಇಷ್ಟು ದಿನ ಕಾಸರಗೋಡಿನ ಬಗ್ಗೆ ಮಾತನಾಡದೇ ಬರೆಯದೇ ಇದ್ದವರು ಚಿತ್ರದ ನಂತರ ಮಾತಾಡಿರುವುದನ್ನು ಸ್ವಾಗತಿಸುವುದಾಗಿ ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾದ ಅನಿಸಿಕೆಗಳಿಗೆ ಪ್ರತಿಕ್ರಿಯಿಸಿ, ಕಾಸರಗೋಡಿನ ಗಡಿಭಾಗದಲ್ಲಿ ಕನ್ನಡ ಸ್ಥಿತಿ ಗತಿಯನ್ನು ಜನರಿಗೆ ತಲುಪಿಸುವುದು ನನ್ನ ಉದ್ದೇಶವಾಗಿತ್ತು, ಅದನ್ನು ಸಿನಿಮಾದಲ್ಲಿ ಮಾಡುವ ಮೂಲಕ ತಲುಪಿಸಲಾಗಿದೆ. ಪ್ರತಿ ಸಿನಿಮಾದಲ್ಲಿಯೂ ಹೊಸತನ ಬಯಸುವವನು ನಾನಾಗಿದ್ದು, ಸಿನಿಮಾದ ಯಶಸ್ಸಿನಿಂದ ಜವಾಬ್ದಾರಿ ಹೆಚ್ಚಾಗಿದೆ. ರಾಜ್ಯದ 150 ಚಿತ್ರಮಂದಿರಗಳಲ್ಲಿ ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ 200ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಚಿತ್ರ ಪ್ರದರ್ಶನ ಕಾಣುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕ ಪ್ರಮೋದ್ ಶೆಟ್ಟಿ, ಬಾಲನಟರಾದ ಸಂಪತ್, ರಂಜನ್, ಮಹೇಂದ್ರ ಇನ್ನಿತರರು ಇದ್ದರು.