ಕುಟುಂಬದಲ್ಲಿ ನಡೆಯುವ ಗಂಭೀರ ವಿಚಾರವನ್ನು ಕಾಮೆಡಿ ಮೂಲಕ ತಿಳಿಸಲು ಹೋಗಿದೆ ಚಿತ್ರತಂಡ. ಸಾಕಷ್ಟು ವಿಷಯಗಳು ನಮ್ಮ ಜೀವನದಲ್ಲಿ ನಡೆಯುತ್ತದೆ. ಕೆಲವು ವರುಷಗಳ ನಂತರ ಇದೇ ನಮಗೆ ತಮಾಷೆಯಾಗಿ ಕಾಣುತ್ತದೆ. ಆದರೆ “ಕೆಮೆಸ್ಟರಿ ಅಫ್ ಕರಿಯಪ್ಪ” ಜೀವನದಲ್ಲಿ ಈಗ ತಾನೆ ನಡೆಯುವ ಗಂಭೀರ ವಿಚಾರಗಳನ್ನು ಕಾಮಿಡಿಯಾಗಿ ವೀಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ. ಮಧ್ಯಮ ವರ್ಗದ ಫ್ಯಾಮಿಲಿಯ ಅಪ್ಪ, ಮಗ ಮತ್ತು ಸೊಸೆಯ ಸುತ್ತ ನಡೆಯೋ ಕಥೆಯನ್ನು ಈ ಚಿತ್ರ ಹೊಂದಿದೆ.
ಆದರೆ ಪ್ರತೀ ಪಾತ್ರಗಳ ಚಹರೆಗಳು ಏನೇ ಇದ್ದರೂ ನಗಿಸೋದೇ ಪ್ರಧಾನ ಉದ್ದೇಶ. ಒಂದು ಸಿನಿಮಾ ನಿರಾಳವಾಗಿ ನೋಡಿಸಿಕೊಂಡು ಹೋಗೋದಕ್ಕೆ ಕಾಮಿಡಿ ಬಹು ಮುಖ್ಯ ಅಂಶ. ಆದ್ರೆ ಕಾಮಿಡಿಯನ್ನು ಸೃಷ್ಟಿಸಿ ಸಹಜವಾಗಿ ನಗಿಸೋದು ನಿಜಕ್ಕೂ ಕಷ್ಟದ ಕೆಲಸ. ಅದನ್ನು ಕಥೆಯಲ್ಲಿಯೇ ಅಡಕವಾಗಿಸಿರೋ ಕುಮಾರ್ ಇಡೀ ಚಿತ್ರವನ್ನು ನೈಜವಾಗಿ, ಹಾಸ್ಯದ ಮೂಲಕವೇ ಪೊರೆದಿದ್ದಾರಂತೆ. ಈ ಟ್ರೈಲರ್ ಅನ್ನು ಬಾಲಿವುಡ್ನ ಖ್ಯಾತ ವಿಮರ್ಶಕರೇ ಮೆಚ್ಚಿಕೊಂಡಿದ್ದಾರೆ. ತಾನು ಇತ್ತೀಚೆಗೆ ನೋಡಿರೋ ಆಕರ್ಷಣೀಯವಾದ, ಹೊಸತನಗಳೀಂದ ಕೂಡಿದ ಟ್ರೈಲರ್ಗಳಲ್ಲಿ ಇದೂ ಒಂದು ಅಂತ ಕೊಂಡಾಡಿದ್ದಾರೆ.
ಡಾ. ಡಿ.ಎಸ್ ಮಂಜುನಾಥ್ ನಿರ್ಮಾಣದ ಈ ಚಿತ್ರವನ್ನು ಕುಮಾರ್ ನಿರ್ದೇಶನ ಮಾಡಿದ್ದಾರೆ. ನಾಯಕ ನಾಯಕಿಯರಾದ ಚಂದನ್ ಆಚಾರ್ ಮತ್ತು ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ. ತಬಲಾ ನಾಣಿ, ಸುಚೇಂದ್ರ ಪ್ರಸಾದ್ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದೆ ಹದಿನೈದರಂದು ಚಿತ್ರ ತೆರೆ ಮೇಲೆ ಬರಲಿದೆ.