ಯಾಂತ್ರಿಕ ಬದುಕಿನಿಂದ ಬೇಸತ್ತ ನಾಯಕ ಸೀದಾ ತೀರ್ಥಹಳ್ಳಿಯತ್ತ ಹೊರಡ್ತಾನೆ. ಹಾಗೆ ಮಲೆನಾಡಿನ ಊರು ತಲುಪೋ ನಾಯಕನಿಗೆ ಅಲ್ಲೊಬ್ಬಳು ಚೆಂದದ ಹುಡುಗಿ ಎದುರಾಗ್ತಾಳೆ. ಆ ನಂತರ ಏನೇನು ಘಟಿಸುತ್ತೆ ಅನ್ನೋದೇ ಚಿತ್ರದ ತಿರುಳು. ಈ ಚಿತ್ರದಲ್ಲಿ ಹಿರಿಯ ನಟ ದೊಡ್ಡಣ್ಣ ತುಂಬಿದ ಕುಟುಂಬದ ತಾತನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈವರೆಗೂ ಅದೆಷ್ಟೋ ಹಿಟ್ ಚಿತ್ರಗಳಲ್ಲಿ ನಟಿಸಿರೋ ದೊಡ್ಡಣ್ಣನಿಗೂ ಈ ಕಥೆ ಕಾಡಿದೆಯಂತೆ. ಈ ಕಾಲಮಾನಕ್ಕೆ ಹೊಸತಾಗಿರೋ ಈ ಚಿತ್ರ ಖಂಡಿತಾ ಗೆಲ್ಲುತ್ತದೆ ಅನ್ನೋ ಭವಿಷ್ಯವನ್ನೂ ದೊಡ್ಡಣ್ಣ ಹೇಳಿದ್ದಾರೆ.
ಕದ್ದುಮುಚ್ಚಿ ಚಿತ್ರ ಪ್ರೇಕ್ಷಕರ ಗಮನ ಸೆಳೆದಿರೋದಕ್ಕೆ ನಾನಾ ಕಾರಣಗಳಿವೆ. ಆದರೆ ಅದಕ್ಕೆ ಪ್ರಧಾನ ಕಾರಣ ಬಹು ಕಾಲದ ನಂತರ ಸಂಗೀತ ಮಾಂತ್ರಿಕ, ನಾದಬ್ರಹ್ಮ ಸಂಗೀತ ನಿರ್ದೇಶಕರಾಗಿ ಮರಳಿರೋದು!
ದೇಸೀ ಘಮಲಿನ ಸಂಗೀತ ಮತ್ತು ಸಾಹಿತ್ಯದಿಂದಲೇ ಎಂದೂ ಮರೆಯದ ಹಾಡುಗಳನ್ನು ಕೊಟ್ಟಿರುವವರು ಹಂಸಲೇಖಾ. ಈ ನೆಲದ ಸಂಗೀತ ಪರಿಕರಗಳೊಂದಿಗೆ ಹಾಡು ಸೃಷ್ಟಿಸೋ ಮೂಲಕ ನಾದಬ್ರಹ್ಮ ಅನ್ನಿಸಿಕೊಂಡಿರೋ ಅವರು ಕದ್ದುಮುಚ್ಚಿ ಹಾಡುಗಳನ್ನ ರೂಪಿಸಿದ್ದಾರೆ.ಇನ್ನುಳಿದಂತೆ ಬಿ ವಿ ರಾಧಾ, ಸುಚೇಂದ್ರಪ್ರಸಾದ್ ಮುಂತಾದವರ ದೊಡ್ಡ ತಾರಾಗಣ ಕದ್ದುಮುಚ್ಚಿ ಚಿತ್ರಕ್ಕಿದೆ. ವಸಂತ್ ರಾಜಾ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.