ಜ.28ರಂದು ತೆರೆಗೆ ಬರಲಿದೆ ಕೊಡವ ಕಿರುಚಿತ್ರ ‘ಬಾವ ಬಟ್ಟೆಲ್’

ಜ.28ರಂದು ತೆರೆಗೆ ಬರಲಿದೆ ಕೊಡವ ಕಿರುಚಿತ್ರ ‘ಬಾವ ಬಟ್ಟೆಲ್’

CI   ¦    Jan 24, 2020 08:48:33 PM (IST)
ಜ.28ರಂದು ತೆರೆಗೆ ಬರಲಿದೆ ಕೊಡವ ಕಿರುಚಿತ್ರ ‘ಬಾವ ಬಟ್ಟೆಲ್’

ಮಡಿಕೇರಿ: ಕೊಡಗಿನ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿಯನ್ನು  ಪ್ರತಿಬಿಂಬಿಸುವ ಕೊಡವ ಕಿರುಚಿತ್ರ ‘ಬಾವ ಬಟ್ಟೆಲ್’ ಜನವರಿ 28ರಂದು ಗೋಣಿಕೊಪ್ಪದಲ್ಲಿ ತೆರೆ ಕಾಣಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಚಿತ್ರ ನಿರ್ದೇಶಕ ಮಂಡುವಂಡ ಪ್ರಜ್ವಲ್ ಗಣಪತಿ ಮಾಹಿತಿ ನೀಡಿ, ವಿದೇಶದಲ್ಲಿ ಶಿಕ್ಷಣ ಪಡೆದು  ಭಾರತಕ್ಕೆ ಬಂದ ಹೆಣ್ಣು ಮಗಳೊಬ್ಬಳು, ತನ್ನ ಅಜ್ಜಿಮನೆಯಲ್ಲಿ ಕೊಡಗಿನ ಸಂಸ್ಲೃತಿ, ಪರಂಪರೆ, ಆಚಾರ-ವಿಚಾರಗಳ ಬಗ್ಗೆ ಅಜ್ಜಿಯಿಂದ ತಿಳಿದು, ಅದರಿಂದ ಪ್ರಭಾವಿತಳಾಗಿ ಸ್ವದೇಶದಲ್ಲೆ ಉಳಿಯಲು ಮನಮಾಡಿದ ಹೃದಯಸ್ಪರ್ಶಿ ಸನ್ನಿವೇಶವನ್ನು ಆಧರಿಸಿ ಈ ಕಿರುಚಿತ್ರವನ್ನು ತಯಾರಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ತೆರೆಕಂಡಿರುವ ಕೊಡವ ಸಿನಿಮಾ ‘ಕೊಡಗ್‍ರ ಸಿಪಾಯಿ’ಯ ಹಂಚಿಕೆದಾರರಾಗಿ ಯಶಸ್ವಿ ನೂರು ಪ್ರದರ್ಶನ ಕಂಡಿರುವ ಪ್ರೇರಣೆಯಿಂದ ಮತ್ತು ಅಭಿಮಾನಿಗಳ ಬೇಡಿಕೆಯ ಮೇರೆಗೆ ಪಿ ಅಂಡ್ ಜಿ ಕ್ರಿಯೇಷನ್ಸ್ ತಂಡ ಕೊಡವ ಕಿರುಚಿತ್ರವನ್ನು ನಿರ್ಮಿಸಿದ್ದು, ಜ.28 ರಂದು ಮಧ್ಯಾಹ್ನ 3 ಗಂಟೆಗೆ ಗೋಣಿಕೊಪ್ಪದ ‘ಸ್ಪೈಸ್ ರ್ಯಾಕ್ ‘ ಸಭಾಂಗಣದಲ್ಲಿ  ಪ್ರೀಮಿಯರ್ ಶೋ ನಡೆಯಲಿದೆಯೆಂದು ಮಾಹಿತಿಯನ್ನಿತ್ತು, ಕಿರುಚಿತ್ರವು 34 ನಿಮಿಷಗಳ ಅವಧಿಯದ್ದಾಗಿದ್ದು, 2 ಹಾಡುಗಳನ್ನು ಒಳಗೊಂಡಿದೆಯೆಂದು ನುಡಿದರು.

 ‘ಬಾವ ಬಟ್ಟೆಲ್’ ಕೊಡವ ಕಿರುಚಿತ್ರದ ನಿರ್ಮಾಪಕರಾಗಿ ಬೆಂಗಳೂರು ಮತ್ತು ಮೈಸೂರಿನ ಉದ್ಯಮಿ ಮಣವಟ್ಟಿರ ಸಂಗೀತ್ ಈರಪ್ಪ, ನಿರ್ದೇಶಕರಾಗಿ ಮಂಡುವಂಡ ಪ್ರಜ್ವಲ್ ಗಣಪತಿ, ಕಾರ್ಯಕಾರಿ ನಿರ್ಮಾಪಕರಾಗಿ ಬಾಳೆಯಡ ಪ್ರತೀಶ್ ಪೂವಯ್ಯ, ಆಚೆಯಡ ಗಗನ್ ಗಣಪತಿ ಹಾಗೂ ಮಾದಪಂಡ ಅಯ್ಯಣ್ಣ ಧರಣಿ ಕಾರ್ಯನಿರ್ವಹಿಸಿದ್ದಾರೆ.

 ಲೇಖಕಿ ಉಳುವಂಗಡ ಕಾವೇರಿ ಉದಯ ಅವರು ಚಿತ್ರಕ್ಕೆ ಕಥೆ ಬರೆದಿದ್ದು, ತಾತಂಡ ಪ್ರಭಾ ನಾಣಯ್ಯ, ಕೊಡಗ್‍ರ ಸಿಪಾಯಿ ಚಿತ್ರದ ನಾಯಕಿ ತೇಜಸ್ವಿನಿ ಶರ್ಮ, ಚೆರುವಾಳಂಡ ಸುಜಲ ನಾಣಯ್ಯ, ಮಂಡುವಂಡ ಪ್ರಜ್ವಲ್ ಗಣಪತಿ, ಪಟ್ಟಡ ಧನುರಂಜನ್, ಮಲ್ಲಮಾಡ ಶ್ಯಾಮಲ ಸುನೀಲ್, ಬಿದ್ದಂಡ ಉತ್ತಮ್ ಪೊನ್ನಪ್ಪ, ಬೇಬಿ ಯಶಿಕ, ನೆಲ್ಲಚಂಡ ಹೇಮ ರೇಖಾ ಅಭಿನಯಿಸಿದ್ದಾರೆಂದು ವಿವರಿಸಿದರು.

ಖ್ಯಾತ ಅಥ್ಲಿಟ್ ತೀತಮಾಡ ಅರ್ಜುನ್ ದೇವಯ್ಯ ಹಿನ್ನೆಲೆ ಧ್ವನಿಯನ್ನು  ನೀಡಿದ್ದು, ಛಾಯಾಗ್ರಾಹಕರಾಗಿ ಮೈಸೂರಿನ ಯುದಿಷ್ಠಿರ, ಸಂಕಲನಕಾರರಾಗಿ ಜಾಕ್ಸನ್ ಆರ್ನಾಲ್ಡ್ ಪಿಂಟೋ, ಸಂಗೀತ ಸಂಯೋಜಕರಾಗಿ ಮನುರಾವ್ ಕಾರ್ಯನಿರ್ವಹಿಸಿದ್ದು, ಚೋಕಿರ ಅನಿತಾ ದೇವಯ್ಯ ಚಿತ್ರದ ಸಂಭಾಷಣೆಗಳನ್ನು ಆಂಗ್ಲಭಾಷೆಗೆ ತರ್ಜುಮೆ ಮಾಡಿದ್ದಾರೆ.

ಹಂಚಿಕೆ ಜವಾಬ್ದಾರಿಯನ್ನು ಬಾಳೆಯಡ ಪ್ರತೀಶ್ ಪೂವಯ್ಯ ಹಾಗೂ ಆಚೆಯಡ ಗಗನ್ ಗಣಪತಿ ವಹಿಸಿಕೊಂಡಿದ್ದು, ಈ ಚಿತ್ರ ಕೊಡಗಿನಾದ್ಯಂತ ಕೊಡವ ಸಮಾಜಗಳ ಸಹಕಾರದೊಂದಿಗೆ ಪ್ರದರ್ಶನಗೊಳ್ಳುವ ವಿಶ್ವಾಸವನ್ನು  ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಮಣವಟ್ಟಿರ ಸಂಗೀತ್ ಈರಪ್ಪ, ಪಿ ಅಂಡ್ ಜಿ ಕ್ರಿಯೇಷನ್ಸ್‍ನ ಬಾಳೆಯಡ ಪ್ರತೀಶ್ ಪೂವಯ್ಯ, ಆಚೆಯಡ ಗಗನ್ ಗಣಪತಿ, ತಾತಂಡ ಪ್ರಭಾ ನಾಣಯ್ಯ ಹಾಗೂ ನಟಿ ತೇಜಸ್ವಿನಿ ಶರ್ಮ ಉಪಸ್ಥಿತರಿದ್ದರು.