ಎಸ್‌ಪಿಬಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಆಂಧ್ರ ಸಿಎಂ ಜಗನ್ ಒತ್ತಾಯ

ಎಸ್‌ಪಿಬಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಆಂಧ್ರ ಸಿಎಂ ಜಗನ್ ಒತ್ತಾಯ

Y.K   ¦    Sep 29, 2020 10:23:07 AM (IST)
ಎಸ್‌ಪಿಬಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಆಂಧ್ರ ಸಿಎಂ ಜಗನ್ ಒತ್ತಾಯ

ಆಂಧ್ರಪ್ರದೇಶ: ಈಚೆಗೆ ನಿಧನರಾದ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಆಂಧ್ರಪ್ರದೇಶದ ಸಿ.ಎಂ. ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದು , ಎಸ್‌ಪಿಬಿ ಎಂದು ಖ್ಯಾತವಾಗಿರುವ ಬಾಲಸುಬ್ರಹ್ಮಣ್ಯಂ ಅವರ ಹೆಸರನ್ನು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಾಗಿ ಪರಿಗಣಿಸುವಂತೆ ಕೋರಿದ್ದಾರೆ.

ಎಸ್‌ಪಿಬಿ ಅಕಾಲಿಕ ನಿಧನವು ದೇಶಾದ್ಯಂತದ ಲಕ್ಷಾಂತರ ಅಭಿಮಾನಿಗಳಿಗೆ ಮತ್ತು ಅಂತರರಾಷ್ಟ್ರೀಯ ಸಂಗೀತ ಪ್ರೇಮಿಗಳಿಗೂ ಸಾಕಷ್ಟು ಸಂಕಟವನ್ನುಂಟು ಮಾಡಿದೆ. ಎಸ್‌ಪಿಬಿ ಅಪಾರ ಜನಪ್ರಿಯತೆ ಮತ್ತು ಜಾಗತಿಕ ಸಂಗೀತ ಕ್ಷೇತ್ರದ ಮೇಲೆ ಅವರ 50 ವರ್ಷಗಳ ಪ್ರಭಾವ ವಿಶ್ವದಾದ್ಯಂತ ಸಂಗೀತ ಅಭಿಮಾನಿಗಳಿಂದ ಗೌರವ, ಆದರಗಳನ್ನು ಪಡೆದಿದ್ದಾರೆ. ಎಸ್‌ಪಿಬಿ ಅವರ ಸಾಧನೆಗಳು ಸಂಗೀತವನ್ನು ಮೀರಿವೆ ಮತ್ತು ಅವರು ಸಂಯೋಜನೆ ಮಾಡಿದ್ದ ಹಾಡುಗಳು ಅವರನ್ನು ಇನ್ನಷ್ಟು ಎತ್ತರಕ್ಕೆ ಒಯ್ದಿವೆ ಎಂದು ಆಂಧ್ರ ಸಿಎಂ ಹೇಳಿದ್ದಾರೆ.

ಎಸ್‌ಪಿಬಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿ ನಾನಾ ಭಾಷೆಗಳಲ್ಲಿ 40,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಆಂಧ್ರಪ್ರದೇಶದ 25 ನಂದಿ ಪ್ರಶಸ್ತಿ, ಪದ್ಮಶ್ರೀ (2001) ಮತ್ತು ಪದ್ಮಭೂಷಣ (2011) ಸೇರಿ ಅನೇಕ ಪ್ರತಿಷ್ಠಿತ ಗೌರವಗಳಿಗೆ ಬಾಜನರಾಗಿದ್ದಾರೆ.