ನಾಲ್ವಡಿ ಹೆಸರಲ್ಲಿ ಸಿನಿಮಾ ಸಂಸ್ಥೆ ನಿರ್ಮಾಣ ಶ್ಲಾಘನೀಯ ಕಾರ್ಯ

ನಾಲ್ವಡಿ ಹೆಸರಲ್ಲಿ ಸಿನಿಮಾ ಸಂಸ್ಥೆ ನಿರ್ಮಾಣ ಶ್ಲಾಘನೀಯ ಕಾರ್ಯ

LK   ¦    Nov 23, 2020 07:23:20 PM (IST)
ನಾಲ್ವಡಿ ಹೆಸರಲ್ಲಿ ಸಿನಿಮಾ ಸಂಸ್ಥೆ ನಿರ್ಮಾಣ ಶ್ಲಾಘನೀಯ ಕಾರ್ಯ

ಮಂಡ್ಯ: ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿ, ರೈತರ ಸಮಸ್ಯೆ ಕುರಿತು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಲು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸಿನಿಮಾ ಸಂಸ್ಥೆ ಹುಟ್ಟುಹಾಕಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಶ್ಲಾಘಿಸಿದರು.

ತಾಲ್ಲೂಕಿನ ಕೊಮ್ಮೇರಹಳ್ಳಿಯ ಚಿಕ್ಕಬೆಟ್ಟ ಬಳಿಯ ಮಹದೇಶ್ವರ ದೇವಸ್ಥಾನದಲ್ಲಿ ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್, ಮಂಡ್ಯ ಇವರ ವತಿಯಿಂದ ಅತಿಯಾಸೆ ಗತಿಕೇಡು ಎಂಬ ಶೀರ್ಷಿಕೆಯಡಿ ಸತ್ಯ ಘಟನೆ ಕಥೆ ಆಧಾರಿತ ಮಂಡ್ಯ ಪತ್ರಕರ್ತರ ಪ್ರಾಯೋಗಿಕ ಸಾಕ್ಷ್ಯಚಿತ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಂಡ್ಯದವರೇ ಆದ ಸಾಹಿತಿ ಹಾಗೂ ಪತ್ರಕರ್ತ ಎಸ್.ಕೃಷ್ಣಸ್ವರ್ಣಸಂದ್ರ ಅವರ ನಿರ್ದೇಶನದಲ್ಲಿ ಈ ಸಾಕ್ಷ್ಯ ಚಿತ್ರ ಮೂಡಿ ಬರುತ್ತಿದ್ದು, ರೈತರ ಸಮಸ್ಯೆ ಹಾಗೂ ಜಿಲ್ಲೆಯ ಸಂಸ್ಕೃತಿಯನ್ನೊಳಗೊಂಡ ಕಿರು ಚಿತ್ರ ಇದಾಗಿದೆ. ಈ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ಚಿತ್ರದ ನಿರ್ದೇಶಕ ಎಸ್.ಕೃಷ್ಣಸ್ವರ್ಣಸಂದ್ರ ಮಾತನಾಡಿ, ಮಂಡ್ಯ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣ. ಅವರ ದೂರದೃಷ್ಟಿಯ ಫಲವಾಗಿ ಜಿಲ್ಲೆ ಇವತ್ತು ಕೃಷಿ ಕ್ಷೇತ್ರದಲ್ಲಿ ಇಷ್ಟು ಹೆಸರು ಮಾಡಿದೆ. ಮಂಡ್ಯ ಜಿಲ್ಲೆಯ ರೈತ ನೆಮ್ಮದಿಯಿಂದ ಬದುಕಲು ಕೆ.ಆರ್.ಎಸ್ ಅಣೆಕಟ್ಟೆ ಕಟ್ಟಿದ ನಾಲ್ವಡಿಯನ್ನ ಸ್ಮರಿಸುವ ದೃಷ್ಟಿಯಿಂದ ಅವರ ಹೆಸರಲ್ಲಿ ಸಿನಿಮಾ ಸಂಸ್ಥೆ ನಿರ್ಮಾಣ ಮಾಡಲಾಗಿದೆ ಎಂದರು.

ಹಿರಿಯ ಪತ್ರಕರ್ತ ಕಬ್ಬನಹಳ್ಳಿ ಶಂಭು ಮಾತನಾಡಿ, ಯುವ ಪ್ರತಿಭೆಗಳು ಸಾಕ್ಷ್ಯಚಿತ್ರ ಅಥವಾ ಕಿರು ಚಿತ್ರಗಳ ಮೂಲಕವೇ ಬೆಳಕಿಗೆ ಬರುತ್ತಾರೆ. ಯುವ ಪ್ರತಿಭೆಗಳನ್ನು ಬೆಳೆಸುವ ದೃಷ್ಟಿಯಿಂದ ಎಸ್.ಕೃಷ್ಣಸ್ವರ್ಣಸಂದ್ರ ನಾಲ್ವಡಿ ಹೆಸರಲ್ಲಿ ಸಿನಿಮಾ ಸಂಸ್ಥೆ ನಿರ್ಮಿಸಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಚಿತ್ರ ತಂಡಕ್ಕೆ ಶುಭವಾಗಲಿ ಎಂದರು.

ಚಿತ್ರದ ನಾಯಕ ನಟಿ ಶಿಲ್ಪ ಮಾತನಾಡಿ, ನಾನು ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದು, ಮಂಡ್ಯ ಸೊಗಡಿನ ಹಳ್ಳಿ ಹುಡುಗಿ ಪಾತ್ರದ ಈ ಚಿತ್ರ ನನಗೆ ಹೊಸತನ ಅನಿಸಿದೆ. ಇಂತಹ ನೈಜ ಘಟನೆ ಆಧಾರಿತ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಖುಷಿ ಇದೆ ಎಂದರು.

ಈ ಸಂದರ್ಭದಲ್ಲಿ ಚಿತ್ರದ ನಾಯಕ ಮದನ್‍ಗೌಡ, ಸಹ ನಟರಾದ ಬಿಂದು, ಬಿಂದ್ಯಾ, ಮೋಹನ್, ಚಿತ್ರದ ಸಹ ನಿರ್ದೇಶಕ ಗೊರವಾಲೆ ಮಹೇಶ್, ನರಸಿಂಹ ಇತರರಿದ್ದರು.